ಕರ್ನಾಟಕದಲ್ಲಿ ಒಟ್ಟು 1,100 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ: ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಮಾಹಿತಿ

| Updated By: ganapathi bhat

Updated on: Aug 14, 2021 | 1:07 PM

ಲಾಕ್​ಡೌನ್​ ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನೂ ಕೆಲವು ದಿನ ನೋಡಿ ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಡಾ.ಅಶ್ವತ್ಥ್​ ನಾರಾಯಣ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 1,100 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆ: ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಮಾಹಿತಿ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,100 ಬ್ಲ್ಯಾಕ್ ಫಂಗಸ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ ನಾರಾಯಣ ಇಂದು (ಮೇ 29) ಹೇಳಿಕೆ ನೀಡಿದ್ದಾರೆ. ಪೋರ್ಟಲ್​ನಲ್ಲಿ ಕೋರಿಕೆ ಬಂದಂತೆ ಔಷಧ ಪೂರೈಸಲಾಗಿದೆ. ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಅಗತ್ಯ ಔಷಧ ಪೂರೈಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ನಡೆದಿದೆ. ಲಾಕ್​ಡೌನ್ ಅಂತ್ಯಗೊಳಿಸಿ, ಅನ್​ಲಾಕ್ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ, ಲಾಕ್​ಡೌನ್​ ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಇನ್ನೂ ಕೆಲವು ದಿನ ನೋಡಿ ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಡಾ.ಅಶ್ವತ್ಥ್​ ನಾರಾಯಣ ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಇಂದು (ಮೇ 29) ಒಂದೇ ದಿನ 20,628 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 492 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ 42,444 ಜನರು ಸೋಂಕುಮುಕ್ತರಾಗಿದ್ದು, ಈ ಪೈಕಿ ಬೆಂಗಳೂರಿನಲ್ಲಿ 21,126 ಜನರು ಕೊವಿಡ್​ನಿಂದ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಕೊವಿಡ್ ಟೆಸ್ಟಿಂಗ್​ ಪಾಸಿಟಿವಿಟಿ ದರ ಶೇ. 14.95ರಷ್ಟಿದ್ದು, ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇ.8.97ರಷ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 4,889 ಜನರಿಗೆ ಕೊವಿಡ್ ಸೋಂಕು ಖಚಿತಪಟ್ಟಿದ್ದು, 278 ಜನರ ನಿಧನರಾಗಿದ್ದಾರೆ.

ಇಂದು ಖಚಿತಪಟ್ಟ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿತರ ಪೈಕಿ 21,89,064 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 28298 ಜನರ ಸಾವನ್ನಪ್ಪಿದ್ದು, 3,50,066 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: CM Yediyurappa PC LIVE: ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಿಎಂ ಬಾಲಸೇವಾ ಯೋಜನೆ ಘೋಷಣೆ

ಬ್ಲ್ಯಾಕ್ ಫಂಗಸ್ ರೋಗ ಪತ್ತೆ, ಚಿಕಿತ್ಸಾವಿಧಾನಕ್ಕೆ ಮಾರ್ಗಸೂಚಿ; ಜಿಲ್ಲಾಸ್ಪತ್ರೆಗಳಲ್ಲಿ ಕೊವಿಡ್‌ ನಂತರದ ಚಿಕಿತ್ಸಾ ಘಟಕ ಸ್ಥಾಪನೆ

Published On - 8:29 pm, Sat, 29 May 21