
ಬೆಂಗಳೂರು, (ಜನವರಿ 28): ಸಾರಿಗೆ ನೌಕರರ ಮುಖಂಡ ಅನಂತ್ ಸುಬ್ಬರಾವ್ (85) (Transport employees leader ananth subbarao)ನಿಧನರಾಗಿದ್ದಾರೆ. ಇಂದು (ಜನವರಿ 28) ಸಂಜೆ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 85 ವರ್ಷದ ಅನಂತ್ ಸುಬ್ಬರಾವ್ ಅವರು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಐದು ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ಮಾಡಿಕೊಂಡು ಬಂದಿದ್ದರು. ಇದರಂತೆ ನಾಳೆ(ಜನವರಿ 29) ಸಾರಿಗೆ ನೌಕರರಿಗೆ ಬೆಂಗಳೂರು ಚಲೋಗೆ ಕರೆ ನೀಡಿದ್ದರು. ಆದ್ರೆ, ಇದೀಗ ಅವರ ನಿಧನದಿಂದಾಗಿ ಬೆಂಗಳೂರು ಚಲೋ(Bengaluru Chalo Strike) ಮುಂದೂಡಿಕೆಯಾಗಿದ್ದು, ಎಂದಿನಂತೆ ಬಸ್ ಸಂಚಾರ ಇರಲಿದೆ.
ಅನಂತ್ ಸುಬ್ಬರಾವ್ ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನವರು. ಅನಂತ ಸುಬ್ಬರಾವ್ ನೇತೃತ್ವದಲ್ಲೇ ನಾಳೆ ಮುಷ್ಕರ ಹಾಗೂ ಬೆಂಗಳೂರು ಚಲೋ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಈಗ ಅನಂತ್ ಸುಬ್ಬರಾವ್ ನಿಧನರಾದ ಹಿನ್ನಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಸಾರಿಗೆ ನೌಕರರ ಮುಷ್ಕರ ಹಾಗೂ ಬೆಂಗಳೂರು ಚಲೋವನ್ನು ಮುಂದೂಡಲಾಗಿದೆ.
ಅನಂತ್ ಸುಬ್ಬರಾವ್ ಆಪ್ತ ಡಿ.ಎ.ವಿಜಯ ಭಾಸ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂದು ಸಂಜೆ 5.30ರ ಸುಮಾರಿನಲ್ಲಿ ಅನಂತ್ ಸುಬ್ಬರಾವ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಅನಂತ್ ಸುಬ್ಬರಾವ್ ಸಾವನ್ನಪ್ಪಿದ್ದಾರೆ. 5 ದಶಕಗಳಿಂದ ಸಾರಿಗೆ ನೌಕರರ ಪರ ಹೋರಾಟ ನಡೆಸುತ್ತಿದ್ದರು. ಅನಂತ್ ಸುಬ್ಬರಾವ್ ನಿಧನ ಹಿನ್ನೆಲೆಯಲ್ಲಿ ನಾಳೆ ಕರೆ ನೀಡಿದ್ದ ಬೆಂಗಳೂರು ಚಲೋ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ನಾಲ್ಕು ನಿಗಮದ ಸಾರಿಗೆ ನೌಕರರು ಬೆಂಗಳೂರು ಚಲೋ ಪ್ರತಿಭಟನೆಗೆ ಕರೆ ನೀಡಿದ್ದರು. ಇದರಿಂದ ನಾಳೆ (ಜನವರಿ 28) ಬಸ್ ಸಂಚಾರ ಇರುತ್ತಾ ಇಲ್ಲಾ ಎಂದು ಪ್ರಯಾಣಿಕರಲ್ಲಿ ಗೊಂದಲ ಮೂಡಿಸಿತ್ತು. ಆದ್ರೆ, ಸಾರಿಗೆ ನೌಕರರ ಸಂಘದ ಮುಖಂಡ ಸಾವನ್ನಪ್ಪಿರುವುದರಿಂದ ಬೆಂಗಳೂರು ಚಲೋ ಮುಷ್ಕರವನ್ನು ಮುಂದೂಡಿದ್ದಾರೆ. ಹೀಗಾಗಿ ನಾಳೆ (ಜನವರಿ 29) ಎಂದಿನಂತೆ ಬಸ್ ಸಂಚಾರ ಇರಲಿದೆ.
Published On - 8:34 pm, Wed, 28 January 26