22 ವರ್ಷ ಬಳಿಕ ಕೋಡಿ ಬಿದ್ದ ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಬೋರನಕಣಿವೆ ಜಲಾಶಯ

| Updated By: ಆಯೇಷಾ ಬಾನು

Updated on: Sep 10, 2022 | 7:37 PM

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳ ಕಟ್ಟೆ ಬಳಿ ಇರುವ ಬೋರನಕಣಿವೆ ಜಲಾಶಯ, ಸುಮಾರು 30 ಅಡಿ ಎತ್ತರ ಹೊಂದಿದೆ. ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಭರ್ತಿಯಾಗಿದ್ದ ಜಲಾಶಯ ಇಂದು ಕೋಡಿ ತುಂಬಿ ಹರಿದಿದೆ.

22 ವರ್ಷ ಬಳಿಕ ಕೋಡಿ ಬಿದ್ದ ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ನಿರ್ಮಿಸಿದ ಬೋರನಕಣಿವೆ ಜಲಾಶಯ
ಬೋರನಕಣಿವೆ ಜಲಾಶಯ
Follow us on

ತುಮಕೂರು: ತುಮಕೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ‌ ಮಳೆಗೆ ಜಿಲ್ಲೆಯ(Tumkur Rain) ಬಹುತೇಕ ಕೆರೆ ಕಟ್ಟೆ ನದಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಕೋಡಿ ಬಿದ್ದು ರಭಸವಾಗಿ ಹರಿಯುತ್ತಿವೆ. ಹೀಗಿರುವಾಗ ಪ್ರಸಿದ್ಧ ಬೋರನಕಣಿವೆ ಜಲಾಶಯ(Borana Kanive) ಕೂಡ ಇಂದು ಕೋಡಿ ಹರಿದಿದೆ. ಸರಿಸುಮಾರು ಎರಡು ದಶಕಗಳ ಬಳಿಕ ಕೋಡಿ ಹರಿದು ಬಿದಿದ್ದು ತುಂಬಿದ ಜಲಾಶಯಕ್ಕೆ ಕ್ಷೇತ್ರದ ಶಾಸಕರು ಆಗಿರುವ ಸಚಿವ ಜೆಸಿ ಮಾಧುಸ್ವಾಮಿ(JC Madhu Swamy) ಭಾಗಿನ ಅರ್ಪಿಸಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳ ಕಟ್ಟೆ ಬಳಿ ಇರುವ ಬೋರನಕಣಿವೆ ಜಲಾಶಯ, ಸುಮಾರು 30 ಅಡಿ ಎತ್ತರ ಹೊಂದಿದೆ. ಕಳೆದ ಇಪ್ಪತ್ತೆರಡು ವರ್ಷಗಳ ಹಿಂದೆ ಭರ್ತಿಯಾಗಿದ್ದ ಜಲಾಶಯ ಇಂದು ಕೋಡಿ ತುಂಬಿ ಹರಿದಿದೆ. ಕೋಡಿ ಹರಿದ ದೃಶ್ಯವನ್ನ ಸ್ಥಳೀಯರು ಕಣ್ಣು ತುಂಬಿಕೊಂಡಿದ್ದಾರೆ. ಇನ್ನೂ ಈ ಜಲಾಶಯವನ್ನ ಮೈಸೂರು ಮಹಾರಾಜರು ನಿರ್ಮಿಸಿದರು. 1888 ರಲ್ಲಿ ಆರಂಭವಾಗಿ 1892 ರಲ್ಲಿ ನಾಲ್ಕು ವರ್ಷಗಳ ಕಾಲ ಜಲಾಶಯ ನಿರ್ಮಿಸಿದ್ದಾರೆ ಎನ್ನಲಾಗಿದೆ. ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಸುಮಾರು 375 ಕೆರೆಗಳು ತುಂಬಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನ ನೀರಾವರಿಗೆ ಸದ್ಬಳಕೆ ಮಾಡಿಕೊಳ್ಳಲು ಜಲಾಶಯ ನಿರ್ಮಿಸಿದ್ದಾರೆ.

ಇನ್ನೂ ಮೈಸೂರು ಅರಸರಾದ ಚಾಮರಾಜೇಂದ್ರ ಒಡೆಯರ್ ಸ್ಥಳ ವೀಕ್ಷಣೆಗೆ ಎಂದು ಬಂದಾಗ ಕುರಿ ಮೇಯಿಸುವ ಬೋರನೆಂಬ ವ್ಯಕ್ತಿ ಇಲ್ಲಿ ಜಲಾಶಯ ನಿರ್ಮಿಸಿಕೊಡಿ ಅಂತಾ ರಾಜರಿಗೆ ಮನವಿ ಮಾಡಿದ್ದನಂತೆ. ಹೀಗಾಗಿ ಬೋರನಕಣಿವೆ ಅಂತಾ ಹೆಸರು ಬಂದಿದೆ ಎನ್ನಲಾಗಿದೆ. ಇನ್ನೂ ಜಲಾಶಯಕ್ಕೆ ಮೈಸೂರು ಸಂಸ್ಥಾನ 2.80 ಲಕ್ಷ ವೆಚ್ಚ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ. ಜಲಾಶಯದಲ್ಲಿ 2269 ದಶ ಘನಲಕ್ಷ ಅಡಿಗಳಿವೆ ಎನ್ನಲಾಗಿದೆ. ಈ ಜಲಾಶಯ 1977 ಹಾಗೂ 2000 ಇಸವಿಯಲ್ಲಿ ಕೋಡಿ ಬಿದ್ದಿತ್ತು ಎನ್ನಲಾಗಿದೆ. ಸದ್ಯ ಈ ಬಾರಿ ಭರ್ಜರಿ ಮಳೆಯಾದ ಕಾರಣ ಜಲಾಶಯ ನಿರ್ಮಾಣದ ಬಳಿಕ ಮೂರನೇ ಬಾರಿಗೆ ಕೋಡಿ‌ ಹರಿದಿದೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಗೂ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಈ ಬೋರನಕಣಿವೆ ಸಹಕಾರಿಯಾಗಿದೆ.

ವರದಿ: ಮಹೇಶ್, ಟಿವಿ9 ತುಮಕೂರು

Published On - 7:35 pm, Sat, 10 September 22