
ತುಮಕೂರು, ಅಕ್ಟೋಬರ್ 24: ವಿದೇಶಿ ವಲಸಿಗರ ಕೇಂದ್ರದಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆ ಆಗಿರುವ ಆರೋಪ ಕೇಳಿಬಂದಿದೆ. ಅಡೆವೋಲೆ ಅನು ಅಲಿಯಾಸ್ ರೆಜಿನಾ ಜಾರ ಅಲಿಯಾಸ್ ಆಯಿಶಾ ನಾಪತ್ತೆಯಾಗಿರುವ ವಿದೇಶಿ ಮಹಿಳೆ. ಮಹಿಳಾ ಕೊಠಡಿಯ ಕಿಟಕಿಯ ಕಬ್ಬಿಣದ ಸರಳುಗಳನ್ನ ಕತ್ತರಿಸಿ ಪಾರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ. ತುಮಕೂರು ನಗರದ ದಿಬ್ಬೂರಿನ ಎಫ್ಡಿಸಿಯಲ್ಲಿ ಅ.21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿದೇಶಿ ವಲಸಿಗರ ಕೇಂದ್ರದಲ್ಲಿ ಒಟ್ಟು 32 ಮಹಿಳೆಯರಿದ್ದಾರೆ. ಆದರೆ ಅಕ್ಟೋಬರ್ 21ರ ಬೆಳಿಗ್ಗೆ ಟೀ ಕುಡಿಯಲು 31 ಮಹಿಳೆಯರು ಮಾತ್ರ ಕೊಠಡಿಯಿಂದ ಹೊರಬಂದಿದ್ದರು. ಈ ವೇಳೆ ಅಡೆವೋಲೆ ಕಾಣದ ಹಿನ್ನಲೆ ಅಡುಗೆ ಸಿಬ್ಬಂದಿ ಅನುಮಾನಗೊಂಡಿದ್ದಾರೆ. ಕೂಡಲೇ ವಾರ್ಡನ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘3 ತಿಂಗಳಲ್ಲಿ ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಸಮಿತಿ ರಚಿಸಿ’: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಇನ್ನು ಸ್ಥಳಕ್ಕೆ ಬಂದ ವಾರ್ಡನ್ ಪರಿಶೀಲನೆ ಮಾಡಿದ್ದಾರೆ. ಇತರರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ರಾತ್ರಿ ಮಲಗುವಾಗ ಎಲ್ಲರ ಜೊತೆಗಿದ್ದ ವಿದೇಶಿ ಮಹಿಳೆ, ಮುಂಜಾನೆ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯೊಂದಿಗೆ ಮಹಿಳೆ ವಾಸವಾಗಿದ್ದ ಕೊಠಡಿ ಪರಿಶೀಲನೆ ಮಾಡಿದಾಗ ಒಂದು ಕ್ಷಣ ವಾರ್ಡನ್ ಶಾಕ್ ಆಗಿದ್ದಾರೆ. ಕೊಠಡಿ ಕಿಟಕಿಯ ಕೆಳಭಾಗದ ಕಬ್ಬಿಣದ ಸರಳುಗಳು ಕಟ್ ಮಾಡಿರುವುದು ಪತ್ತೆ ಆಗಿದೆ. ಎಲ್ಲಾ ಕಡೆ ಹುಡುಕಾಡಿದರು ಸಹ ಪತ್ತೆಯಾಗಿಲ್ಲ.
ಎರಡು ಸರಳುಗಳನ್ನ ಕಟ್ ಮಾಡಿ ಮಹಿಳೆ ತಪ್ಪಿಸಿಕೊಂಡಿರುವ ಬಗ್ಗೆ ತುಮಕೂರು ನಗರ ಠಾಣೆಗೆ ವಾರ್ಡನ್ ದೂರು ನೀಡಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದೇಶಿ ಮಹಿಳೆ ಪಾರಾರಿ ಆಗಿರುವ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಸೇರಿದಂತೆ ಬೆಂಗಳೂರಿನ ಎಫ್ಆರ್ಆರ್ಒ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.