ಹಿಂದೂ ಧರ್ಮ ಅವಹೇಳನ ಮಾಡಿದ್ದು ಸರಿಯಲ್ಲ, ಸುಪ್ರೀಂ ನಿರ್ದೇಶನದಂತೆ ಸತೀಶ್​​ನನ್ನು ಜೈಲಿಗೆ ಹಾಕಿ: ಸೊಗಡು ಶಿವಣ್ಣ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 10, 2022 | 3:14 PM

ಜಾರಕಿಹೊಳಿ ಹಿಂದೂ ಧರ್ಮ ಅವಹೇಳನ ಮಾಡಿದ್ದು ಸರಿಯಲ್ಲ. ‘ಸುಪ್ರೀಂ’ ನಿರ್ದೇಶನದಂತೆ ಸತೀಶ್​​ನನ್ನು ಒಳಗೆ ಹಾಕಬೇಕಿತ್ತು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ಮಾಡಿದರು.

ಹಿಂದೂ ಧರ್ಮ ಅವಹೇಳನ ಮಾಡಿದ್ದು ಸರಿಯಲ್ಲ, ಸುಪ್ರೀಂ ನಿರ್ದೇಶನದಂತೆ ಸತೀಶ್​​ನನ್ನು ಜೈಲಿಗೆ ಹಾಕಿ: ಸೊಗಡು ಶಿವಣ್ಣ
ಮಾಜಿ ಸಚಿವ ಸೊಗಡು ಶಿವಣ್ಣ
Follow us on

ತುಮಕೂರು: ಜಾರಕಿಹೊಳಿ ಹಿಂದೂ ಧರ್ಮ (Hindu religion) ಅವಹೇಳನ ಮಾಡಿದ್ದು ಸರಿಯಲ್ಲ. ‘ಸುಪ್ರೀಂ’ ನಿರ್ದೇಶನದಂತೆ ಸತೀಶ್​​ನನ್ನು ಒಳಗೆ ಹಾಕಬೇಕಿತ್ತು. ನಮ್ಮ ಧರ್ಮ ಅವಹೇಳನ ಮಾಡಿದ ಸತೀಶ್​ನನ್ನು ಜೈಲಿಗೆ ಹಾಕಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ವಾಗ್ದಾಳಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಮಾಯಣ ಗ್ರಂಥ ಕೊಟ್ಟ ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದ ಮಹಾನುಭಾವ ಸತೀಶ್​ ಜಾರಕಿಹೊಳಿ. ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದು ಸರಿಯಲ್ಲ. ಮಾಡಬಾರದು ಮಾಡಿ ಕ್ಷಮೆ ಕೇಳಿದರೆ ಅದು ದೊಡ್ಡ ಮನುಷ್ಯನಾ? ಯಾಕೆ ಹೇಳಿಕೆ ವಾಪಸ್ ತಗೋಬೇಕಿತ್ತು ಪಾಪಿ ಎಂದು ಕಿಡಿಕಾರಿದರು. ಇವನೆನು ಶೂರ, ಧೀರನಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಯೋಗ, ಧ್ಯಾನ ಮಾಡಿದರೆ ವಿದ್ಯಾರ್ಥಿಗಳು ಕುಗ್ಗುತ್ತಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿದ್ಧರಾಮಯ್ಯ ಅವಿವೇಕಿ. ಯೋಗಿ ಧ್ಯಾನನೂ ಮಾಡುತ್ತಾನೆ. ಯೋಗಾನು ಮಾಡುತ್ತಾನೆ. ಯೋಗ ಮಾಡೋದು ತಪ್ಪು, ಧ್ಯಾನ ಮಾಡೋದು ತಪ್ಪು ಅಂತಾ ಕೋರ್ಟ್ ಮುಂದೆ ಹೇಳಲಿ. ರಾಜ್ಯದ ಜನಗಳ ಮುಂದೆ, ಮಾಧ್ಯಮಗಳ ಮುಂದೆ ಮಾತಾಡಿದಂತೆ ಕೋರ್ಟ್ ಮುಂದೆ ಮಾತನಾಡಲಿ. ಅಸೆಂಬ್ಲಿಯಲ್ಲಿ ನಿಂತು ಮಾತನಾಡೋಕಾಗುತ್ತೆ. ತಾಕತ್ತಿದ್ದರೆ ಕೋರ್ಟ್​​ನಲ್ಲಿ ಹೋಗಿ ಇಂತಹ ಮಾತನಾಡಲಿ. ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗುತ್ತಾರಲ್ಲ. ಅದೇ ರೀತಿ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ ನೋಡೋಣ ಎಂದು ಸಿದ್ದರಾಮಯ್ಯಗೆ ಸೊಗಡು ಶಿವಣ್ಣ ಸವಾಲು ಹಾಕಿದರು.

ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ

ಗದಗ: ‘ಹಿಂದೂ’ ಪದ ಪರ್ಷಿಯನ್​ ಭಾಷೆಯಿಂದ ಬಂದಿದೆ. ಪರ್ಷಿಯನ್​​, ಇಸ್ಲಾಂನಲ್ಲಿ ಹಿಂದೂ ಪದದ ಅರ್ಥ ಬೇರೆ ಇದೆ. ಒಂದು ನಾಗರಿಕ ಸಮಾಜ ಬಳಸದಂತಹ ಪದವಾಗಿದೆ. ಶಾಸಕ ಸತೀಶ್​ ಜಾರಕಿಹೊಳಿ ಹೇಳಿಕೆಗೆ ನನ್ನ ಬೆಂಬಲವಿದೆ ಎಂದು ನಗರದಲ್ಲಿ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಹೇಳಿಕೆ ನೀಡಿದರು. ಇಸ್ಲಾಮನ್ನು ಪರಕೀಯ ಸಂಸ್ಕೃತಿ ಎಂದು ವಿರೋಧಿಸುತ್ತೇವೆ. ಇಸ್ಲಾಂ ನೀಡಿರುವ ಪದದ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಪ್ರಶ್ನಿಸಿದರು. ಹಿಂದೂಸ್ಥಾನ ಪದವನ್ನು ಮಮ್ಮಡಿಯನ್ಸ್ ನೀಡಿರುವ ಪದ. ನೀವು ಹಿಂದೂಸ್ಥಾನ ಅಲ್ಲ, ಸಿಂಧೂಸ್ಥಾನ ಎಂದು ಪದ ಬಳಸಿ ಎಂದು ಸಾಹಿತಿ ಬಸವರಾಜ ಸವಾಲು ಹಾಕಿದರು.

ಒಂದು ಪದವನ್ನು ಹುಟ್ಟಿಸದ ಬೌದ್ಧಿಕ ದಾರಿದ್ರ್ಯ ನಮಗಿದೆಯಾ? ನಮ್ಮದು ಸಿಂಧೂ ಸಂಸ್ಕೃತಿ, ದ್ರಾವಿಡ ಸಂಸ್ಕೃತಿ. ನಮ್ಮ ದೇಶಕ್ಕೆ ಭಾರತ್ ಖಂಡ್​ ಎಂಬ ಹೆಸರಿದೆ. ಭಾರತ್ ಖಂಡೆ, ಜಂಬು ದ್ವೀಪ ಎಂಬ ಹೆಸರಿದೆ. ಇತಿಹಾಸ ಹುಡುಕಿದರೆ ಹಿಂದೂಸ್ಥಾನ ಎಂದು ಎಲ್ಲಿದೆ. ಈ ವಿಚಾರವನ್ನು ಭಾವನಾತ್ಮಕ ಅಂಧತ್ವದಿಂದ ನೋಡಬಾರದು. ‘ಹಿಂದೂ’ ಪದದ ಅರ್ಥದ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಸರ್ಕಾರ ಇತಿಹಾಸಕಾರರ ಸಮಿತಿ ರಚಿಸಿ ತನಿಖೆ ಮಾಡಿಸಲಿ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:11 pm, Thu, 10 November 22