ತಮಕೂರು: ಇಂದು ನಡೆದಾಡುವ ದೇವರು ಶಿವಕುಮಾರ ಶ್ರೀಗಳ ಜನ್ಮದಿನ: 116 ಮಕ್ಕಳಿಗೆ ಸ್ವಾಮೀಜಿಯವರ ಹೆಸರು ನಾಮಕರಣ

| Updated By: ವಿವೇಕ ಬಿರಾದಾರ

Updated on: Apr 01, 2023 | 9:30 AM

ಇಂದು (ಏಪ್ರಿಲ್​.1) ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ. ಈ ಹಿನ್ನೆಲೆ ಶ್ರೀ ಮಠದಲ್ಲಿ ಪ್ರಾತಃ ಕಾಲದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಸಿದ್ದಲಿಂಗಶ್ರೀ ಸೇರಿದಂತೆ ವಿವಿಧ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದ್ದಾರೆ.

ತುಮಕೂರು: ಇಂದು (ಏಪ್ರಿಲ್​.1) ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ (Shivakumar Swamiji) 116ನೇ ಜಯಂತಿ. ಈ ಹಿನ್ನೆಲೆ ಶ್ರೀ ಮಠದಲ್ಲಿ ಪ್ರಾತಃ ಕಾಲದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಸಿದ್ದಲಿಂಗಾಶ್ರೀ (Siddaganga) ಸೇರಿದಂತೆ ವಿವಿಧ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ನೆರವೇರಿಸಿದ್ದಾರೆ. ಇನ್ನು ಶ್ರೀಗಳ ಗದ್ದುಗೆಗೆ ದೀಪಾಲಂಕಾರ, ಪುಷ್ಪಗಳಿಂದ ಅಲಂಕಾರ ಮಾಡಿದ್ದಾರೆ.

ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಭಾಗಿ

ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ 116ನೇ ಜಯಂತ್ಯೋತ್ಸವ ಹಿನ್ನೆಲೆ ಇಂದು ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಗೋಸಲಸಿದ್ದೇಶ್ವರ ವೇದಿಕೆಯಲ್ಲಿ ಅದ್ದೂರಿ ಸಭಾ ಕಾರ್ಯಕ್ರಮ ಜರುಗಲಿದೆ. ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಈ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರಭಾಕರ್ ಕೋರೆ ಸೇರಿದಂತೆ ವಿವಿಧ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿ ಮತ್ತು ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಅಲ್ಲದೇ ಶ್ರೀಗಳ 116ನೇ ಜಯಂತ್ಯೋತ್ಸವದ ಪ್ರಯುಕ್ತ ಒಟ್ಟು 116 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನ್ನು ನಾಮಕರಣ ಮಾಡುವ ಸಲುವಾಗಿ ಈಗಾಗಲೇ ಪೋಷಕರು ಹೆಸರನ್ನ ನೊಂದಾಯಿಸಿಕೊಂಡಿದ್ದು, ಈ ನಾಮಕರಣ ಕಾರ್ಯಕ್ರಮ ಕೂಡ ನಡೆಯಲಿದೆ.

ಶ್ರೀಗಳ ಜನ್ಮದಿನೋತ್ಸವದ ಪ್ರಯುಕ್ತ ಶಿವಕುಮಾರ ಶ್ರೀಗಳ ಗದ್ದುಗೆ, ಮಠದ ಆವರಣಗಳನ್ನು ಫಲಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಸಂಜೆ ಗಾನೋತ್ಸವ ಕಾರ್ಯಕ್ರಮವನ್ನ ಕೂಡ ಹಮ್ಮಿಕೊಳ್ಳಲಾಗಿದ್ದು, ನಾದಬ್ರಹ್ಮ ಹಂಸಲೇಖ ಮತ್ತು ತಂಡ ಈ ಕಾರ್ಯಕ್ರಮವನ್ನ ನಡೆಸಿಕೊಡಲಿದೆ.

ಕನ್ನಡದಲ್ಲಿ ಟ್ವೀಟ್​ ಮಾಡಿ ಶ್ರೀಗಳನ್ನು ನೆನದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತುಮಕೂರು ಭೇಟಿ ವೇಳೆಯ ಭಾಷಣದ ತುಣಕ್ಕೊಂದು ಹಂಚಿಕೊಂಡಿದ್ದು, ಅದರಲ್ಲಿ ಸಿದ್ದಗಂಗಾ ಶ್ರೀಗಳು ಗುಜರಾತ್​ನ ನರೇಂದ್ರ ಮೋದಿಯವರ ಮನೆಗೆ ಭೇಟಿ ನೀಡಿ ತುಮಕೂರಿಗೆ ಬನ್ನಿ ಎಂದು ಆಹ್ವಾನ ನೀಡಿರುವುದನ್ನು ಉಲ್ಲೇಖಿಸಿದ್ದಾರೆ. ಆಗ ಪ್ರಧಾನಿ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದರು. “ಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ನಮನ. ಅವರು ಲಕ್ಷಾಂತರ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಸಮಾಜಸೇವೆಗೆ ಉನ್ನತ ಸ್ಥಾನ ಮತ್ತು ಜನರನ್ನು ಸಶಕ್ತಗೊಳಿಸುವುದಕ್ಕೆ ಅವರು ಪ್ರಾಮುಖ್ಯ ನೀಡಿದ್ದರು. ಅವರ ಕನಸುಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತೇವೆ.” ಎಂದು ಟ್ವೀಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:08 am, Sat, 1 April 23