ನನ್ನನ್ನ ಅಸಿಂಧೂಗೊಳಿಸಲಾಗಿದೆ, ಅನರ್ಹಗೊಳಿಸಿಲ್ಲ; ಸುಮ್ಮನೆ ತೇಜೋವಧೆ ಮಾಡ್ಬೇಡಿ -ಗೌರಿಶಂಕರ್
ಅಸಿಂಧು ತೀರ್ಪು ಬಂದ ಬಳಿಕ ಮೊದಲ ಬಾರಿಗೆ ಗೌರಿಶಂಕರ್ ಮಾಧ್ಯಮದ ಮುಂದೆ ಬಂದಿದ್ದು ಬಳಗೆರೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್(Gauri Shankar) ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್(Karnataka High Court) ಆದೇಶ ಹೊರಡಿಸಿದೆ. ಅಸಿಂಧು ತೀರ್ಪು ಬಂದ ಬಳಿಕ ಮೊದಲ ಬಾರಿಗೆ ಗೌರಿಶಂಕರ್ ಮಾಧ್ಯಮದ ಮುಂದೆ ಬಂದಿದ್ದು ಬಳಗೆರೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಿನ್ನೆ ಮೊನ್ನೆಯಿಂದ ಕೋರ್ಟ್ ಆದೇಶದ ಮೇಲೆ ಊಹಾಪೋಹಗಳು ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಕೋರ್ಟ್ ಆದೇಶದ ಮೇಲೆ ಸತ್ಯಾಂಶ ಏನಿದೆ ಅಂತ ತಿಳಿಸುತ್ತೇನೆ ಎಂದು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಶಾಸಕರ ಸ್ಥಾನವನ್ನು ಅನೂರ್ಜಿತಗೊಳಿಸಿ ನನ್ನನ್ನು ಶಾಸಕ ಮಾಡಿ ಎಂದು ಅವರು ಕೇಸ್ ಹಾಕಿದ್ರು. ಆಯ್ಕೆಯನ್ನು ಅಸಿಂಧೂಗೊಳಿಸಿದೆ. ಅನರ್ಹಗೊಳಿಸಿಲ್ಲ. ಸುಮ್ಮ ಸುಮ್ಮನೆ ಯಾಕೆ ತೇಜೋವಧೆ ಮಾಡ್ತೀರಾ. ಕಮ್ಮನಹಳ್ಳಿ ಮಾರುತಿ ಸೇವಾ ಟ್ರಸ್ಟ್ ನಿಂದ ಬಾಂಡ್ ಹಂಚಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶವನ್ನು ನಾನು ಭಾಗಶಃ ಒಪ್ಪಿಕೊಂಡಿದ್ದೇನೆ. ತೀರ್ಪಿನಲ್ಲಿ ಮಂಜುನಾಥ್ ಅಂತ ಹೆಸರು ಉಲ್ಲೇಖ ಮಾಡಲಾಗಿದೆ. ಅವನು ಯಾರು ಅಂತ ಗೊತ್ತಿಲ್ಲ, ಅವನು ನನಗೆ ಪರಿಚಯವಿಲ್ಲ. ಭಾಗಶಃ ಅವರ ಅರ್ಜಿ ಪುರಸ್ಕರಿಸಿದೆ. ನನ್ನನ್ನು 6 ವರ್ಷ ನಿಲ್ಲಬಾರದು ಅಂತ ಎಲ್ಲಿಯೂ ಹೇಳಿಲ್ಲ. ನಮ್ಮ ಕಾರ್ಯಕರ್ತರು ಆತಂಕಪಡಬೇಕಿಲ್ಲ. ಸುಪ್ರೀಂ ಕೋರ್ಟ್ ಹೋಗಲು ಸಾಕಷ್ಟು ಅವಕಾಶವಿದೆ. ಕುಮಾರಸ್ವಾಮಿ ಜೊತೆಗೆ ಮಾತನಾಡಿದ್ದೇನೆ. ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ, ನ್ಯಾಯ ಸಿಗುವ ಭರವಸೆಯಿದೆ. ಚುನಾವಣೆ ನಿಲ್ಲಲ್ಲು ತೊಂದರೆಯಿಲ್ಲ, ನಮ್ಮ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. 6 ವರ್ಷ ನಿಲ್ಲುವಂತಿಲ್ಲ ಅನ್ನೋದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ. ನಾನು ಕ್ಷೇತ್ರದಲ್ಲಿ ದುರಂಹಕಾರದಲ್ಲಿ ನಡೆದುಕೊಂಡಿಲ್ಲ ಎಂದು ಗೌರಿಶಂಕರ್ ತಿಳಿಸಿದರು.
ನಾನು ನಂಬಿರುವ ಜನ ನಮ್ಮ ಮನೆಗೆ ಬರದಿದ್ದಾಗ ನನ್ನ ಸಾವಾಗುತ್ತೆ
ಸಾವಿರಾರು ಜನ ಮಾರ್ಕ್ಸ್ ಕಾರ್ಡ್ ದಂಧೆ ನಡೆಸಿದ್ರಲ್ಲಾ ಅದು ಧರ್ಮನಾ? ಬಾಡೂಟಾ ಹಾಕಿ ಸೀರೆ ಹಂಚಿದ್ರಲ್ಲಾ ಅದು ಧರ್ಮನಾ? ನಾನು ಸತ್ಯಹರಿಶ್ಚಂದ್ರ ಅಂತ ಶೋ ಆಫ್ ಮಾಡಬೇಡಿ. ಚನ್ನಿಗಪ್ಪ ಕುಟುಂಬದು ಓಪನ್ ಬುಕ್, ದಂಧೆ ಮಾಡಿಲ್ಲ. ನಾನು ನಂಬಿರುವ ಜನ ನಮ್ಮ ಮನೆಗೆ ಬರದಿದ್ದಾಗ ನನ್ನ ಸಾವಾಗುತ್ತೆ. ಸುಮ್ಮ ಸುಮ್ಮನೆ ಯಾಕೆ ಸುಳ್ಳು ಹೇಳುತ್ತೀರಾ. ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ನಮ್ಮ ಮೇಲೆ ಯಾಕೆ ದೂರುತೀರಾ. ನಾನು ಎಂಎಲ್ಎ ಆಗ್ಬಾರ್ದಾ.? ಎಲ್ಲಿ ನೆಮ್ಮದಿ ಕೊಟ್ರಿ, ಸರ್ಕಾರ ಬದಲಾದ ಬಳಿಕ ಸಿಎಂ ಭೇಟಿ ಮಾಡಿ ಅಭಿವೃದ್ದಿ ಕಾಮಗಾರಿಯನ್ನು ತಡೆ ಹಿಡಿದ್ರಿ. ನಿಮಗೆ ನಾನು ಅಭಿವೃದ್ಧಿ ಮಾಡಿದ ಕೆಲಸಗಳನ್ನ ಸಹಿಸಿಕೊಳ್ಳೋಕೆ ಆಗ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸಾಧನ ಪರ್ವ ಅಂತ ಬುಕ್ ಹಿಡ್ಕೊಂಡು ಮನೆ ಮನೆ ವೊಟ್ ಕೇಳೋಕೆ ಹೋಗ್ತಿರಾ. ನಿಮಗೆ ನಾಚಿಕೆ ಆಗಲ್ವಾ. ನನ್ನ ಬಗ್ಗೆ ಮಾತಾಡೋಕೆ ನಿಮಗೆ ನೈತಿಕ ಹಕ್ಕಿಲ್ಲ. ಅಭಿವೃದ್ಧಿ ಕಾರ್ಯಗಳನ್ನ ತಡೆಹಿಡಿಯೋಕೆ ಹೋಗ್ತಿರಾ. ನೀವು ಈ ಐದು ವರ್ಷದಲ್ಲಿ ಮಾಡಿದ್ದು ಬರೀ ದಬ್ಬಾಳಿಕೆ ದೌರ್ಜನ್ಯ. ನಾನು ಮಾಡೋ ಪ್ರತಿಯೊಂದು ಕೆಲಸಕ್ಕೂ ಅಡ್ಡಿ. ಈ ಬಿಜೆಪಿ ಅವರು ರಾಹುಲ್ ಗಾಂಧಿನೇ ಬಿಟ್ಟಿಲ್ಲ. ಇನ್ನ ಗೌರಿಶಂಕರ್ ನ ಬಿಡ್ತಾರಾ. ಇವತ್ತು ಯಾರು ಪ್ರಬಲವಾಗಿ ಮುಂದುವರಿತಾರೋ, ಅಂತಹ ನಾಯಕನನ್ನ ತೆಗಿಯೋದು ಬಿಜೆಪಿ ಅವರ ಕೆಲಸ ಎಂದು ಬಿಜೆಪಿ ವಿರುದ್ಧ ಗೌರಿಶಂಖರ್ ವಾಗ್ದಾಳಿ ನಡೆಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:10 pm, Sat, 1 April 23