ತುಮಕೂರು, ಜನವರಿ 07: ತುಮಕೂರು (Tumakur) ತಾಲೂಕಿನ ಓಬಳಾಪುರ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮಹಮ್ಮದ್ ಆಸೀಫ್ (12), ಮಮ್ತಾಜ್ (38), ಶಾಖಿರ್ ಹುಸೇನ್ (18) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತರು ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಕಡೆಯಿಂದ ಮಧುಗಿರಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್ ಡಿಕ್ಕಿ ಹೊಡೆದಿದೆ.
ಮೃತ ಮಹಮ್ಮದ್ ಆಸೀಪ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಶಾಖಿರ್ ಹುಸೇನ್ 6ನೇ ತರಗತಿಯಲ್ಲಿ ಓದುತ್ತಿದ್ದನು. ಮಹಮ್ಮದ್ ಆಸೀಪ್, ಶಾಖಿರ್ ಹುಸೇನ್ ಮತ್ತು ತಾಯಿ ಮಮ್ತಾಜ್ ಮೂವರು ಸೋಮವಾರ ಸಂಜೆ ಶಿರಾ ಗೇಟ್ನಲ್ಲಿನ ಸಂಬಂಧಿ ಮನೆಗೆ ತೆರಳಿದ್ದರು. ಮಂಗಳವಾರ ಶಾಲೆ-ಕಾಲೇಜಿಗೆ ಹೋಗಬೇಕೆಂದು ಬೆಳಗಿನ ಜಾವ 6 ಗಂಟೆ ಸುಮಾರಿಗೆ ವಾಪಸ್ ಊರಿಗೆ ಹೋಗುತ್ತಿದ್ದರು. ಓಬಳಾಪುರ ಗ್ರಾಮದ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರ್ಯಾಕ್ಟರ್ ಟ್ರೇಲರ್ಗೆ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.