ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!

| Updated By: ಸಾಧು ಶ್ರೀನಾಥ್​

Updated on: Jan 14, 2022 | 12:20 PM

ನಾಗೇಂದ್ರಪ್ಪ ಹಾಗೂ ಕುಟುಂಬಸ್ಥರು ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಕೊನೆಗೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ನಿನ್ನೆ ಈ ಬಗ್ಗೆ ದೂರು ನೀಡಿದ್ದಾರೆ. ಕೂಡಲೇ ದೂರವಾಣಿ ಕರೆ ಮಾಡಿದ ಎಸ್ ಪಿ ರಾಹುಲ್ ಅವರು ದಂಡಿನಶಿವರ ಪಿಎಸ್ ಐ ಶಿವಲಿಂಗಯ್ಯಗೆ ಆರೋಪಿಗಳನ್ನ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸುವಂತೆ ಖಡಕ್ಕಾಗಿ ಆಜ್ಞಾಪಿಸಿದ್ದಾರೆ.

ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!
ತುರುವೇಕೆರೆ ಸರ್ಕಲ್​ ಇನ್ಸ್​ಪೆಕ್ಟರ್​ ನವೀನ್​ ಮತ್ತು ತುಮಕೂರು ಎಸ್​ಪಿ ರಾಹುಲ್ ಕುಮಾರ್ ಶಹಾಪುರವಾಡ್
Follow us on

ಅದು ನಾಲ್ಕೂವರೆ ತಿಂಗಳ ಹಿಂದೆ ನಡೆದಿದ್ದ ಗಲಾಟೆ ಪ್ರಕರಣ, ಕ್ಷುಲ್ಲಕ ವಿಚಾರಕ್ಕೆ ಅಕ್ಕ ಪಕ್ಕದ ಮನೆಯವರು ಜಗಳವಾಡಿಕೊಂಡು ಕೊನೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.ಈ ಬಗ್ಗೆ ಪೊಲೀಸ್ ಠಾಣೆ ಯಲ್ಲಿ 307 ಕೊಲೆ ಪ್ರಯತ್ನ ಕೇಸ್ ಕೂಡ ದಾಖಲಾಗಿತ್ತು. ಆದರೆ ಆರೋಪಿಗಳು ಮಾತ್ರ ಬಂಧನವಾಗಿರಲಿಲ್ಲ. ಪೊಲೀಸರಿಗೆ ಎಷ್ಟೇ ಮನವಿ ಮಾಡಿದರೂ ಆರೋಪಿಗಳು ಬಂಧನವಾಗದೇ ತಿರುಗಾಡಿಕೊಂಡು ಇದ್ದರು. ಸದ್ಯ ಈ ಪ್ರಕರಣ ದೊಡ್ಡ ರೋಚಕತೆಗೆ ತಿರುಗಿದೆ. ಆರೋಪಿಗಳು ತಪ್ಪಿಸಿಕೊಳ್ಳಲು ಪೊಲೀಸರೇ ಸಾಥ್ ನೀಡಿದ್ದರು ಎಂಬುದು ಖೇದಕರ ಸಂಗತಿಯಾದರೆ, ಮತ್ತೊಂದು ಕಡೆ ಇದಕ್ಕೆ ತುಮಕೂರು ಜಿಲ್ಲಾ ಪೊಲೀಸ್​ ಸೂಪರಿಂಡೆಂಟ್​ ಅವರೇ ಖುದ್ದು ನ್ಯಾಯ ಒದಗಿಸಿಕೊಟ್ಟಿದ್ದಾರೆ. ಈ ರೋಚಕತೆ ಸ್ಟೋರಿ ಇಲ್ಲಿದೆ ನೋಡಿ.

ಪ್ರಕರಣದ ವಿವರಗಳನ್ನು ಓದುವ ಮುನ್ನ, ತಾಜಾ ಬೆಳವಣಿಗೆಯಲ್ಲಿ ಆರೋಪಿಯನ್ನು ಪೊಲೀಸರು ವಿಂಳಬವಾಗಿಯಾದರೂ ಬಂಧನಕ್ಕೆ ಒಳಪಡಿಸಿದ್ದಾರೆ. ಹಲ್ಲೆ ಪ್ರಕರಣದ ಆರೋಪಿಯನ್ನ ಬಂಧಿಸಲು ಸ್ವತಃ ಜಿಲ್ಲಾ ಪೊಲೀಸ್​ ವರಿಷ್ಠಧಿಕಾರಿಯೇ ತಮ್ಮ ಕಾರನ್ನು ಕಳಿಸಿದ ಬಳಿಕ ದಂಡಿನಶಿವರ ಪೊಲೀಸರು ಇಂದು ಬೆಳಗಿನ ಜಾವ 5 ಗಂಟೆಯಲ್ಲಿ ಬಂಧಿಸಲಾಗಿದೆ. ಎಸ್​ಪಿ ಆಜ್ಞೆಯ ಬಳಿಕ ಕೊನೆಗೂ ಎಚ್ಚೆತ್ತ ದಂಡಿನಶಿವರ ಪಿಎಸ್ ಐ ಶಿವಲಿಂಗಯ್ಯ ಹಾಗೂ ಸಿಪಿಐ ನವೀನ್ ಒಂದೇ ರಾತ್ರಿಯಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ! ಚಂದನ್ ಬಂಧಿತ ಆರೋಪಿ. ಆತನನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರ್ ಪಡಿಸಲಿದ್ದಾರೆ. ಇನ್ನೋರ್ವ ಆರೋಪಿ ಶಿವಪ್ರಕಾಶ್ ಗೆ ಈ ಹಿಂದೆ ಬೇಲ್ ಆಗಿತ್ತು.

ಪ್ರಕರಣದ ವೃತ್ತಾಂತ.. ಕೆಳಗಿನ ಚಿತ್ರದಲ್ಲಿ ತುರುವೇಕೆರೆ ಪೊಲೀಸ್ ಠಾಣೆ ಮುಂದೆ ನಿಂತಿರುವ ಎಸ್​ಪಿ  ರಾಹುಲ್ ಕುಮಾರ್ ಶಹಾಪುರವಾಡ್ ಅವರ ಕಾರೆ ಈಗ ಕೇಂದ್ರಬಿಂದುವಾಗಿರುವುದು. ಅದರೆ ಒಂದು ಕ್ಷಣ ಅರೇ ಪೊಲೀಸ್ ಠಾಣೆ ಮುಂದೆ ನಿಲ್ಲದೇ ಇನ್ನೆಲ್ಲಿ ನಿಲ್ಲಬೇಕು ಸ್ವಾಮಿ ಅಂತಾ ಅಚ್ಚರಿಯಾಗಬೇಡಿ!? ಕಾರು ಇಲ್ಲಿ ನಿಂತಿರುವುದರ ಹಿಂದೆ ಒಂದು ದೊಡ್ಡ ರೋಚಕ ಕತೆಯಿದೆ. ಹಲ್ಲೆ ಗಲಾಟೆ ಕೊಲೆ ಪ್ರಯತ್ನ ಮಾಡಿದ್ದ ಆರೋಪಿಗಳನ್ನ ಹಿಡಿಯದೇ ಸತಾಯಿಸುತ್ತಿದ್ದ ಪೊಲೀಸರ ಸ್ಟೋರಿ ಇಲ್ಲಿದೆ. ಈ ಕಾರು ಇಲ್ಲಿಗೆ ಬಂದು ನಿಂತ ಮೇಲೆ ಆರೋಪಿಗಳು ಹಿಡಿಯುವ ಪ್ರಯತ್ನ ಸತತವಾಗಿ ಮುಂದುವರೆದಿದೆ.

ತುರುವೇಕೆರೆ ಪೊಲೀಸ್ ಠಾಣೆ ಮುಂದೆ ನಿಂತಿರುವ ಎಸ್​ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರ ಕಾರು ಮತ್ತು ಪಿಎಸ್​ಐ ಶಿವಲಿಂಗಯ್ಯ

ಇಷ್ಟಕ್ಕೂ ಈ ಪ್ರಕರಣ ಏನು ಅಂತಂತಂದ್ರೆ… ಅದು ಆಗಸ್ಟ್ 28 , 2021 ರಂದು ದಾಖಲಾಗಿದ್ದ ಪ್ರಕರಣ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಾಗೇಂದ್ರಪ್ಪ ಹಾಗೂ ಪಕ್ಕದ ಮನೆಯ ಚಂದನ್, ಶಿವಪ್ರಕಾಶ್ ನಡುವೆ ಮಾಮೂಲಿ ಸಣ್ಣ ಮಟ್ಟದ ಜಗಳ ನಡೆದಿತ್ತು. ಮನೆ ಮುಂದೆ ಕೊಬರಿ ಮೊಟ್ಟೆ ಹಾಕಿದ್ದಕ್ಕೆ ಶುರುವಾಗಿದ್ದ ಜಗಳ, ಕೊನೆಗೆ ಗಂಭೀರವಾಗಿ ಕೆಲವರಿಗೆ ಗಾಯಗಳಾಗುವ ಮಟ್ಟಕ್ಕೆ ಹೋಗಿತ್ತು. ಸ್ವಲ್ಪ ಯಾಮಾರಿದ್ದರೂ ಒಬ್ಬರ ಅಥವಾ ಇಬ್ಬರ ಪ್ರಾಣ ಹಾರಿಹೋಗ್ತಿತ್ತು ಎನ್ನಲಾಗಿದೆ. ಆದರೆ ಮುಂದೆ ಇನ್ನೂ ಸ್ಟೋರಿ ಇದೆ ಓದಿ.

ಕೊಬರಿ ಮೊಟ್ಟೆ ಹಾಕಿದ್ದಕ್ಕೆ ನಾಗೇಂದ್ರಪ್ಪ ಹಾಗೂ ಪತ್ನಿ ಶಿವಮ್ಮಳಿಗೆ ಪಕ್ಕದ ಮನೆಯ ಚಂದನ್, ಶಿವಪ್ರಕಾಶ್ ಹಿಗ್ಗಾಮುಗ್ಗಾ ಹಲ್ಲೆಗೈದಿದ್ದರಂತೆ. ಈ ವೇಳೆ ನಾಗೇಂದ್ರಪ್ಪ ಶಿವಮ್ಮಗೆ ಗಂಭೀರ ಗಾಯಗಳಾಗಿ ತುರುವೇಕೆರೆ ಆಸ್ಪತ್ರೆ ಹಾಗೂ ತುಮಕೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ಗಂಭೀರ ಗಾಯದ ಸ್ವರೂಪ ತಿಳಿದ ವೈದ್ಯರು ಇದು ಮಾರಣಾಂತಿಕ ಹಲ್ಲೆ ಅಂತಾ ವರದಿ ನೀಡಿದ್ದಾರೆ. ಇದನ್ನ ಪಡೆದ ನಾಗೇಂದ್ರಪ್ಪ ದಂಡಿನಶಿವರ ಪೊಲೀಸ್ ಠಾಣೆಗೆ 307 ಕೊಲೆ ಪ್ರಯತ್ನ ಕೇಸ್ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನ ಬಂಧಿಸದೇ ಸಪೋರ್ಟ್ ಮಾಡಿಕೊಂಡು ಬಂದಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಶಿವಪ್ರಕಾಶ್ ಎಂಬ ಆರೋಪಿ ಒಂದು ತಿಂಗಳ ಬಳಿಕ ಬೇಲ್ ಪಡೆದೊಕೊಂಡಿದ್ದ.

ಈ ಬಗ್ಗೆ ನಾಗೇಂದ್ರಪ್ಪ ಹಾಗೂ ಕುಟುಂಬಸ್ಥರು ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ಕೊನೆಗೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರವಾಡ್ ಅವರಿಗೆ ನಿನ್ನೆ ಈ ಬಗ್ಗೆ ದೂರು ನೀಡಿದ್ದಾರೆ. ಕೂಡಲೇ ದೂರವಾಣಿ ಕರೆ ಮಾಡಿದ ಎಸ್ ಪಿ ರಾಹುಲ್ ಅವರು ದಂಡಿನಶಿವರ ಪಿಎಸ್ ಐ ಶಿವಲಿಂಗಯ್ಯಗೆ ಆರೋಪಿಗಳನ್ನ ಎಲ್ಲೇ ಇದ್ದರೂ ನಾಳೆ ಬೆಳಗಾಗುವಷ್ಟರಲ್ಲಿ ಬಂಧಿಸುವಂತೆ ಖಡಕ್ಕಾಗಿ ಆಜ್ಞಾಪಿಸಿದ್ದಾರೆ. ಖುದ್ದು ಜಿಲ್ಲೆಯ ಮೊದಲ ಪೊಲೀಸ್​ ಅಧಿಕಾರಿಯೇ ಹೇಳಿದ ಮೇಲೆ ಕೆಳಹಂತದವರು ಏನು ಮಾಡ್ತಾರೆ… ಶಿರಸಾವಹಿಸಿ ಆಜ್ಞೆಯನ್ನು ಪಾಲಿಸಬೇಕು ಅಷ್ಟೆ.

ಆದರೂ ಪಿಎಸ್ ಐ ಶಿವಲಿಂಗಯ್ಯ ಇಂದೂ ಸಹ ಆರೋಪಿಗಳನ್ನ ಬಂಧಿಸುವ ಸಾಹಸಕ್ಕೆ ಕೈಹಾಕಿರಲಿಲ್ಲ. ಈ ಬಗ್ಗೆ ನಾಗೇಂದ್ರಪ್ಪ ಪೊಲೀಸರನ್ನ ಕೇಳಿದ್ದಕ್ಕೆ ನೀವು ಇಲ್ಲಿಗೆ ಬಾಡಿಗೆ ಕಾರು ಮಾಡಿಕೊಂಡು ಬನ್ನಿ ಸಿಬ್ಬಂದಿ ಕಳಿಸ್ತೀವಿ, ಹೋಗಿ ಆರೋಪಿಯನ್ನ ಹಿಡಿದು ತನ್ನಿ ಅಂತಾ ಅದೇ ಬೇಜಬ್ದಾರಿ ಪೊಲೀಸಪ್ಪನ ವರಸೆ ತೋರಿದರಂತೆ.

ನಖಶಿಖಾಂತ ಉರಿದುಹೋದ ದೂರದಾರ ನಾಗೇಂದ್ರಪ್ಪ ಅವರು ಕುಟುಂಬಸ್ಥರ ಸಮೇತ ನೇರನೇರ ಮತ್ತೆ ತುಮಕೂರು ಎಸ್ ಪಿ ಕಚೇರಿ ಮುಂದೆ ಹಾಜರಾಗಿದ್ದಾರೆ. ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಇದಕ್ಕೆ ಎಸ್ ಪಿ ರಾಹುಲ್ ಅವರ ರಿಯಾಕ್ಷನ್​ ಹೇಗಿರಬಹುದು ಒಮ್ಮೆ ಊಹಿಸಿಕೊಳ್ಳಿ. ಮೈ ಹೂ ನಾ ಎಂದವರೇ ತಮ್ಮ ಸರ್ಕಾರಿ ಕಾರಿನಲ್ಲಿ ನಾಗೇಂದ್ರಪ್ಪ ಮತ್ತು ಅವರ ಕಡೆಯವರನ್ನ ಕುಳಿತುಕೊಳ್ಳುವಂತೆ ಹೇಳಿ, ತಮ್ಮ ಕಾರು ಚಾಲಕನಿಗೆ ಕರೆದು ಇವರನ್ನು ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಿಟ್ಟು ಬಾ ಎಂದಿದ್ದಾರೆ.

ಸೀದಾ ದಂಡಿನಶಿವರ ಪೊಲೀಸ್ ಠಾಣೆಗೆ ಬಂದ ಎಸ್​ಪಿ ರಾಹುಲ್​ ಅವರ ರಥ, ಠಾಣೆ ಮುಂಭಾಗದಲ್ಲಿ ನಿಂತಿದೆ. ಕಾರು ಬಂದಿದ್ದನ್ನ ಕಂಡು, ಅದೂ ಎಸ್​ಪಿ ಕಾರು ಕಂಡು ಪಿಎಸ್ ಐ ಶಿವಲಿಂಗಯ್ಯ ನಿಜಕ್ಕೂ ಹೌಹಾರಿದ್ದಾರೆ. ಇಡೀ ಠಾಣೆಗೂ ಶಾಕ್ ಆಗಿದೆ! ಕೂಡಲೇ ಎಸ್ ಪಿಗೆ ಕರೆ ಮಾಡಿದ ಪಿಎಸ್ ಐ ಸಾಹೇಬ ‘ಸರ್ ಹೀಗೆ ಹೇಳಲು ಹೇಳಿದ್ದೇ ತುರುವೇಕೆರೆ ಸಿಪಿಐ ನವೀನ್ ಸರ್’ ಅಂತಾ ದುಂಬಾಲು ಬಿದ್ದಿದ್ದಾರೆ.

ಈ ಹಿಂದೆ ಬಂಧಕ್ಕೊಳಗಾಗಿ ಜಾಮೀನು ಪಡೆದಿರುವ ಶಿವಪ್ರಕಾಶ್ ಮತ್ತು ಇಂದು ಬೆಳಗಿನ ಜಾವ ಬಂಧನಕ್ಕೀಡಾದ ಚಂದನ್

ಇದನ್ನ ಕೇಳಿದ ಖಡಕ್​ ಅಧಿಕಾರಿ ಎಸ್​ಪಿ ರಾಹುಲ್ ಮತ್ತೆ ತಮ್ಮ ಕಾರು ಚಾಲಕನ ಜೊತೆ ಮಾತನಾಡಿ ಕಾರನ್ನು ದಂಡಿನಶಿವರ ಪೊಲೀಸ್ ಠಾಣೆಯಿಂದ ನೇರವಾಗಿ ತುರುವೇಕೆರೆ ಸಿಪಿಐ ಕಚೇರಿ ಮುಂಭಾಗ ತಂದು ನಿಲ್ಲಿಸುವಂತೆ ಸೂಚಿಸಿದ್ದಾರೆ. ಸದ್ಯ ಸಿಪಿಐ ಕಚೇರಿ ಬಳಿ ಎಸ್ ಪಿ ಕಾರು ನಿಂತಿದ್ದು ದೊಡ್ಡ ಪ್ರಸಂಗವೇ ನಡೆದುಹೋಗಿದೆ. ಇಷ್ಟಕ್ಕೂ ಇಷ್ಟೆಲ್ಲ ರಾದ್ಧಾಂತಗಳಿಗೆ ಏನಪ್ಪಾ ಕಾರಣ ಎಂದು ಗುಮಾನಿಗೊಂಡು ನೋಡಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಹಲ್ಲೆ ಪ್ರಕರಣದ ಆರೋಪಿಗಳು ಸಿಪಿಐ ನವೀನ್ ಸಾಹೇಬರ ಸಾಕ್ಷಾತ್​ ಸಂಬಂಧಿಗಳು ಎಂದು ತಿಳಿದುಬಂದಿದೆ. ಅಲ್ಲಿಗೆ ಬಂಧುಪ್ರೇಮ ಮೆರೆದ ಸರ್ಕಲ್​ ಇನ್ಸ್​ಪೆಕ್ಟರ್​ ನವೀನ್​ಜೀ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದರು ಎಂಬುದು ಬಟಾಬಯಲಾಗಿದೆ.

ಇದೀಗ ಎಸ್ಪಿ ಕಾರು ಇನ್ಸ್​ಪೆಕ್ಟರ್​​ ಕಚೇರಿ ಮುಂದೆ ಬಂದು ನಿಂತಿದ್ದು ಮತ್ತು ಇನ್ಸ್​ಪೆಕ್ಟರ್​​ ಸ್ವಜನ ಪಕ್ಷಪಾತವು ಇದೀಗ ತುಮಕೂರು ಜಿಲ್ಲೆ ಹಾಗೂ ತುರುವೇಕೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಾಚೆಗೂ ಸದ್ದು ಮಾಡುತ್ತಿದೆ. ಆರೋಪಿಗಳನ್ನ ಹಿಡಿಯಲು ಜಿಲ್ಲಾ ಎಸ್ ಪಿಯೇ ತಮ್ಮ ಕಾರನ್ನ ಕಳಿಸಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ. ಒಂದೆಡೆ ಆರೋಪಿಗಳ ಪರ ಪೊಲೀಸರೇ ಸಾಥ್ ನೀಡಿದ್ದು, ಮತ್ತೊಂದು ಕಡೆ ವಿಚಾರ ಅರಿತ ಜಿಲ್ಲಾ ಎಸ್ ಪಿ ರಾಹುಲ್ ಕುಮಾರ್ ತಮ್ಮ ಕರ್ತವ್ಯದ ಮೂಲಕ ತಮ್ಮ ಸ್ಟಾಫ್​​ ಗೆ ಚಾಟಿ ಬೀಸಿರುವುದನ್ನು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಎಸ್ ಪಿ ರಾಹುಲ್ ಕುಮಾರ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಳಹಂತದ ಪೊಲೀಸ್​ ಅಧಿಕಾರಿಗಳ ಧಾರ್ಷ್ಯ ಬುದ್ಧಿಗೂ ಛೀಮಾರಿ ಹಾಕುತ್ತಿದ್ದಾರೆ.

-ಮಹೇಶ್, ಟಿವಿ9, ತುಮಕೂರು

Published On - 8:30 am, Fri, 14 January 22