ತುಮಕೂರು: ಕೊರೊನ ಎಂಬ ಮಹಾಮಾರಿ ನಮ್ಮೂರಿಗೆ ಬರಬಾರದು ಅಂತಾ ಗ್ರಾಮಸ್ಥರೆಲ್ಲ ಸೇರಿ ಬೇವಿನ ಮರದ ಕೆಳಗೆ ಹೋಳಿಗೆ ಅರ್ಪಿಸುವ ಮೂಲಕ ವಿಶೇಷವಾಗಿ ಅಜ್ಜಿ ಹಬ್ಬ ಆಚರಣೆ ಮಾಡಿದರು. ಗುಬ್ಬಿ ತಾಲೂಕಿನ ಜವರೇಗೌಡನಪಾಳ್ಯ ಗ್ರಾಮದಲ್ಲಿ ಈ ಆಚರಣೆ ಮಾಡಿದರು.
ಗ್ರಾಮದ ಹೊರವಲಯದ ಪೂರ್ವ ದಿಕ್ಕಿನ ಬೇವಿನ ಮರದ ಸುತ್ತಲೂ ಪ್ರತಿ ಮನೆಯಿಂದ ಒಂದು ಮಣ್ಣಿನ ಕುಡಿಕೆ, ದೀಪ, ಬಳೆ, ಬಂಗಾರ, ಅರಿಶಿನ, ಕುಂಕುಮ, ಊದುಬತ್ತಿ, ಕರ್ಪೂರ ಎಲ್ಲವನ್ನೂ ಬಳಸಿ ಪೂಜೆ ಮಾಡುವ ಮೂಲಕ ಹೋಳಿಗೆ, ಮೊಸರು ಅನ್ನವನ್ನು ಎಡೆ ಹಾಕಿ ನಂತರ ಬೇವಿನ ಮರಕ್ಕೆ ವಿವಿಧ ಬಗೆಯ ಹೂವುಗಳಿಂದ ಪೂಜೆ ಸಲ್ಲಿಸಿದರು. ಅದನ್ನು ಅಲ್ಲೇ ಬಿಟ್ಟು ಬರುವ ವಿಶೇಷ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಣೆ ಮಾಡಲಾಯಿತು.
ಹಿಂದಿನ ಪೂರ್ವಜರು ಗ್ರಾಮಗಳಲ್ಲಿ ಪ್ಲೇಗ್ ಹಾಗೂ ಕಾಲರಾದಂತಹ ಮಹಾಮಾರಿ ಕಾಯಿಲೆಗಳು ಬಂದಾಗ ಊರುಗಳಲ್ಲಿ ಅಜ್ಜಿ ಹಬ್ಬವನ್ನು ಆಚರಿಸುತ್ತಿದ್ದರು. ಇದರಿಂದ ಕಾಯಿಲೆ ಆ ಗ್ರಾಮದಿಂದ ಸಂಪೂರ್ಣವಾಗಿ ವಾಸಿಯಾಗುತ್ತಿತ್ತು ಎಂಬ ನಂಬಿಕೆ ಇತ್ತು. ಅದೇ ರೀತಿ ನಾವುಗಳು ಕೊರೊನಾ ಕಾಯಿಲೆ ಈ ಗ್ರಾಮಕ್ಕೆ ಬರದಂತೆ ಇರಲಿ ಎಂಬ ಹಿರಿಯರ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸಿದ್ದಾರೆ ಈ ಗ್ರಾಮಸ್ಥರು.
ಅಜ್ಜಿ ಹಬ್ಬ ಆಚರಣೆಯ ಹಿನ್ನೆಲೆ:
ಹಣ್ಣಣ್ಣು ಅಜ್ಜಿಯೊಂದು ಕುರಿ ಕಾಯುತ್ತಿದ್ದ ಒಬ್ಬ ಮಹಿಳೆಗೆ ನನ್ನ ತಲೆ ಬಹಳ ಕಡಿಯುತ್ತಿದೆ ಏನು ಇರಬಹುದು ನೋಡು ತಾಯಿ ಅಂತ ಹೇಳಿದ್ರಂತೆ. ಅದಕ್ಕೆ ಅ ಮಹಿಳೆ ಅಜ್ಜಿಯ ತಲೆ ಕೂದಲು ಸರಿಸಿ ನೋಡಲು ಪ್ರಾರಂಭಿಸಿದ್ದಾರೆ. ಅ ಅಜ್ಜಿಯ ತಲೆಯ ತುಂಬೆಲ್ಲ ಕಣ್ಣುಗಳು ಇದ್ದವಂತೆ. ಅದಕ್ಕೆ ಆ ಕುರಿ ಕಾಯುವ ಮಹಿಳೆ ಏನಜ್ಜಿ ನಿನ್ನ ತಲೆ ತುಂಬಾ ಕಣ್ಣುಗಳಿವೆ. ಏನಿದು ಅಂತ ಅಜ್ಜಿಗೆ ಕೇಳಿದಾಗ ಆ ಅಜ್ಜಿ ನೋಡವ್ವ ಮುಂಚೆ ಅಜ್ಜಿ ಹಬ್ಬ ಅಂತ ಮಾಡ್ತಿದ್ರು ಇವಾಗ ಮಾಡೋದು ಬಿಟ್ಟಿರೋದಕ್ಕೆ ಹೀಗೆ ಹಾಗಿದೆ ಅಂದು ತಕ್ಷಣ ಅಜ್ಜಿ ಮಾಯವಾದರಂತೆ.
ಇದನ್ನು ಕಂಡ ಕುರಿಗಾಹಿ ಮಹಿಳೆ ಅಕ್ಕಪಕ್ಕದ ಉರಿನವರಿಗೆಲ್ಲ ನಡೆದ ಘಟನೆ ತಿಳಿಸಿದ್ದಾಳೆ. ಆದ್ದರಿಂದ ಆ ನಂಬಿಕೆಯಿಂದಲೇ ಹಳ್ಳಿಯವರೆಲ್ಲಾ ಸೇರಿ ಊರಿನ ಹೊರಗೆ ಇರುವ ಬೇವಿನ ಮರದ ಕೆಳಗೆ ಒಬ್ಬಟ್ಟು ಇಟ್ಟು ಪೂಜೆ ಮಾಡಿ ಹಿಂದಿರುಗಿ ನೋಡದಂತೆ ಮನೆಗೆ ಬರುವ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಿಸುತ್ತಿದ್ದಾರಂತೆ.
ನಮ್ಮ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ನಮ್ಮ ಹಿರಿಯರ ಆಚಾರ-ವಿಚಾರ, ರೂಢಿ-ಸಂಪ್ರದಾಯಗಳು ಗ್ರಾಮೀಣ ಜನರಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದೇ ವಿಶೇಷ.
Published On - 3:32 pm, Sun, 24 May 20