ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭತ್ತ, ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ಬಿರುಗಾಳಿ ಸಹಿತ ಮಳೆಗೆ ರಸ್ತೆಗೆ ಉರುಳಿ ಬಿದ್ದ ವಿದ್ಯುತ್ ಕಂಬ ಉರಿಳಿ ಬಿದ್ದಿದೆ. ಮೂಡಿಗೆರೆ ಬಳಿ ಸಬ್ಬೇನಹಳ್ಳಿ-ಬೆಟ್ಟಗೇರಿ ರಸ್ತೆಯಲ್ಲಿ ಅವಾಂತರ ಸಂಭವಿಸಿದೆ. ಹುಣಸೆಹಳ್ಳಿಯಲ್ಲಿ ರಸ್ತೆ ಮೇಲೆ ಮಳೆ ನೀರು ಹರಿಯುತ್ತಿದೆ.
ಲಕ್ಕಸಂದ್ರದಲ್ಲಿರುವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈಗಾಗಲೇ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಇಡೀ ಗೊಡೌನ್ಗೆ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಹೊತ್ತಿ ಉರಿತ್ತಿದೆ. ಇದು ಸ್ಥಳೀಯರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ.
ಚುನಾವಣೆ ವ್ಯವಸ್ಥೆಯೇ ಹದಗೆಟ್ಟಿದೆ, ಹಣವಿಲ್ಲದೆ ಏನೂ ಇಲ್ಲ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಮಾತನಾಡಿದ ಶ್ರೀಗಳು ಹೀಗೆ ಅಭಿಪ್ರಾಯ ತಿಳಿಸಿದ್ದಾರೆ.
ಏರ್ ಇಂಡಿಯಾ ಮಹಿಳಾ ಪೈಲೆಟ್ಗಳು ಹೊಸ ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ವಾಯುಮಾರ್ಗ, ಉತ್ತರ ಧ್ರುವದ ಮೂಲಕ ವಿಮಾನ ಚಾಲನೆ ನಡೆಸಿ ಸಾಧನೆ ಮಾಡಲು ಹೊರಟಿದ್ದಾರೆ. ಜನವರಿ 9ರಂದು ಸಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ತಲುಪಲಿಸರುವ ವಿಮಾನವು 16,000 ಕಿಲೋ ಮೀಟರ್ಗಳನ್ನು ಕ್ರಮಿಸಲಿದೆ. ಈ ಬಗ್ಗೆ ಎಂದು ಏರ್ ಇಂಡಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಧ್ರುವದ ಮೂಲಕ ವಿಮಾನ ಚಾಲನೆ ನಡೆಸುವುದು ಸವಾಲಿನ ಕೆಲಸವಾಗಿದೆ. ಈ ಕೆಲಸವನ್ನು ಏರ್ ಇಂಡಿಯಾ ಸಂಸ್ಥೆ ಮಹಿಳಾ ಪೈಲೆಟ್ಗಳಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಲಸಿಕೆ ವಿತರಣೆಯ ಕುರಿತಾಗಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಭೆ ನಡೆಸಲಿದ್ದಾರೆ.
HSR ಬಡಾವಣೆಯ ವಾಸಿಗಳು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ HSR ಲೇಔಟ್ನ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗುತ್ತಿರುವ ಬಗ್ಗೆ ಕಾರಣ ತಿಳಿಸುವಂತೆ ಹಾಗೂ ಕೇಬಲ್ ಅಳವಡಿಸಲು ಅಗೆದಿರುವ ನೆಲವನ್ನು ದುರಸ್ತಿಗೊಳಿಸುವ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಂಡೇಲ್ ಮುಂಬೈ ಬಾಂದ್ರಾ ಪೊಲೀಸರ ಮುಂದೆ ಹಾಜರಾಗಿದ್ದಾರೆ. ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಾಲಿವುಡ್ನ ಕಾಸ್ಟಿಂಗ್ ನಿರ್ದೇಶಕ ಹಾಗೂ ಫಿಟ್ನೆಸ್ ತರಬೇತುದಾರ ಸಾಹಿಲ್ ಆಶ್ರಫಾಲಿ ಸಯ್ಯದ್ ಎಂಬವರು, ಕಂಗನಾ ಸಹೋದರಿಯರ ವಿರುದ್ಧ ಅಕ್ಟೋಬರ್ನಲ್ಲಿ ದೂರು ನೀಡಿದ್ದರು. ಸಮುದಾಯಗಳ ನಡುವೆ ಬಿರುಕು ಮೂಡಿಸುವಂಥಾ ಮಾತುಗಳನ್ನಾಡಿರುವ ಬಗ್ಗೆ ಆರೋಪ ಮಾಡಿದ್ದರು.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸತತ 1 ಗಂಟೆಯಿಂದ ಮಳೆ ಸುರಿಯುತ್ತಿದೆ. ಗುಡುಗು-ಮಿಂಚು ಸಹಿತ ರಭಸದ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ರೈತರು ಬೆಳೆದಿದ್ದ ಬೆಳೆ ಹಾನಿಯಾಗಿದೆ. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅಕಾಲಿಕ ಮಳೆಯಾಗಿದೆ. ಅರ್ಧ ಗಂಟೆಯಿಂದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಭಾಗಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಏಕಾಏಕಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಹಾವೇರಿ ತಾಲೂಕಿನ ನಾಗನೂರು, ಹಾನಗಲ್ ತಾಲೂಕಿನ ಕೂಡಲ ಸೇರಿದಂತೆ ಕೆಲವೆಡೆ ಮಳೆಯಾಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವಡೇಕರ್, ಭಾರತ ಸರ್ಕಾರದ ಡಿಜಿಟಲ್ ಕ್ಯಾಲೆಂಡರ್ ಹಾಗೂ ಡೈರಿ ಅಪ್ಲಿಕೇಷನನ್ನು ಇಂದು ಬಿಡುಗಡೆಗೊಳಿಸಿದ್ದಾರೆ.
ಸರ್ಕಾರದ ಸಹಾಯಧನದಲ್ಲಿ ಅವ್ಯವಹಾರ ಆರೋಪ ಎಂಬ ಕಾರಣಕ್ಕೆ, ಹನುಮಂತೇಗೌಡನಪಾಳ್ಯದಲ್ಲಿ ರೈತರು ಹಾಲು ಚೆಲ್ಲಿ ಧರಣಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಘಟನೆ ಸಂಭವಿಸಿದೆ. ರೈತರಿಗೆ ಸರಿಯಾಗಿ ಸಹಾಯಧನ ನೀಡದೆ ಅವ್ಯವಹಾರ ನಡೆಸಲಾಗಿದೆ ಎಂದು ಕಾರ್ಯದರ್ಶಿ ಮುದ್ದಹನುಮೇಗೌಡ ವಿರುದ್ಧ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ, ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ರೈತರು ಆಕ್ರೋಶಗೊಂಡಿದ್ದಾರೆ. ಹಾಲನ್ನು ಚೆಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ರೈತ ಮುಖಂಡರ ಜೊತೆಗಿನ ಕೇಂದ್ರ ಸರ್ಕಾರದ ಸಭೆ ಇಂದೂ ಕೂಡ ಸಫಲವಾಗಿಲ್ಲ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದಿದ್ದ 8ನೇ ಸುತ್ತಿನ ಸಭೆ ವಿಫಲವಾಗಿದೆ. ಜನವರಿ 15ರಂದು ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯು 50 ದಿನಗಳತ್ತ ಸಾಗುತ್ತಿದೆ.
A farmer leader shows a paper with 'We will either die or win' written on it, at the eighth round of talks with the Centre. (Earlier visual)
The next round of talks to be held on 15th January.#FarmLaws https://t.co/fo0Fi0Zt1c pic.twitter.com/OQuC9btJF4
— ANI (@ANI) January 8, 2021
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ನ (ITBP personnel), ಪುರುಷರು ಹಾಗೂ ಮಹಿಳೆಯರು ಐಸ್ ಹಾಕಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ಗೆ ತಯಾರಿ ನಡೆಸುತ್ತಿದ್ದಾರೆ. ಲೆಹ್ನಲ್ಲಿ ಇಂದು ಆರಂಭವಾಗಲಿರುವ ಐಸ್ ಹಾಕಿ ಪಂದ್ಯದಲ್ಲಿ, ಕೆನಡಾದ ತಂಡ ಭಾರತದ ತಂಡದೊಂದಿಗೆ ಸೆಣೆಸಾಡಲಿದೆ. ಭಾರತೀಯ ತಂಡದಲ್ಲಿ, ITBP ಸದಸ್ಯರು ಹಾಗೂ ಭಾರತೀಯ ಭೂಸೇನೆಯ ಸದಸ್ಯರು ಇರಲಿದ್ದಾರೆ.
ITBP personnel, both men and women, gear up for the national and international championships of Ice Hockey, starting today in Leh. A team from Canada will be competing with Indian team comprising personnel from ITBP, Indian Army and so on. pic.twitter.com/e0E9a1fUfL
— ANI (@ANI) January 8, 2021
26-11ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಹಣ ಒದಗಿಸುತ್ತಿದ್ದ ಜಾಕಿಯುರ್-ಉರ್-ರೆಹಮಾನ್ ಲಖ್ವಿಗೆ ಪಾಕಿಸ್ತಾನ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಶಿಕ್ಷೆ ನೀಡಲಾಗಿದೆ.
ಕೇಂದ್ರ ಎಲ್ಲ ರಾಜ್ಯಗಳಿಗೆ ಉಚಿತ ಲಸಿಕೆ ನೀಡಬೇಕು. ಜನರು ಅದನ್ನೇ ಬಯಸುತ್ತಿದ್ದಾರೆ. ಇದು ದೇಶದ ಜನತೆಯ ಬೇಡಿಕೆಯಾಗಿದೆ ಎಂದು ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನಾ ಮುಖಂಡ ಏಕನಾಥ್ ಕಾಡ್ಸೆ ಹೇಳಿಕೆ ನೀಡಿದ್ದಾರೆ.
ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷರಾಗಿ ಡಿ.ಕೃಷ್ಣಕುಮಾರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಲತೇಶ್ ಮಾಮಲಾಪುರ ಆಯ್ಕೆಯಾಗಿದ್ದಾರೆ. ಕೃಷ್ಣಕುಮಾರ್ ಕುಣಿಗಲ್ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದಾರೆ ಹಾಗೂ ಮಾಲತೇಶ್ ಮಾಮಲಾಪುರ ಬಾಗಲಕೋಟೆಯ ಬಿಜೆಪಿ ಮುಖಂಡರಾಗಿದ್ದಾರೆ.
ಸಂಕ್ರಾಂತಿ ಬಳಿಕ ಆಫ್ಲೈನ್ ತರಗತಿಗಳು ಪ್ರಾರಂಭಿಸುವ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ತರಗತಿಗಳ್ನು ಆಫ್ಲೈನ್ ವಿಧಾನದಲ್ಲಿ ಪುನರಾರಂಭಿಸುವ ಬಗ್ಗೆ ವಿಶ್ವ ವಿದ್ಯಾಲಯ ಕುಲಪತಿಗಳ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಆಫ್ಲೈನ್ ತರಗತಿಗಳ ದಿನಾಂಕ ಪ್ರಕಟಿಸುತ್ತೇವೆ. 2ನೇ ವರ್ಷದ ಪದವಿ, ಇಂಜಿನಿಯರಿಂಗ್ಗೆ ಆಫ್ಲೈನ್ ತರಗತಿ ನಡೆಸುವ ಬಗ್ಗೆ ವರದಿ ನೀಡಲು ಕುಲಪತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಂದ, ಇಬ್ಬರು ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 6 ಲಕ್ಷ ಮೌಲ್ಯದ 96 LSD, 39 ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ. ಕ್ರಿಸ್ಟಿಯನ್ ಕಬೋಂಗ್, ಜೀನ್ ಪೌಲ್ ಎಂಬವರು, ಹೊಸ ವರ್ಷಾಚರಣೆ ಬಳಿಕ ಯುವಕರನ್ನು ಗುರಿಯಾಗಿಸಿಕೊಂಡು ನಗರದಾದ್ಯಂತ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಅದರಿಂದ ಬಂದ ಹಣ ಬಳಸಿ, ಬೆಂಗಳೂರಿನಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರು. ಇದೀಗ ಇಬ್ಬರೂ ಡ್ರಗ್ ದಂಧೆಕೋರರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಠಾಣೆಯ ವ್ಯಾಪ್ತಿಯಲ್ಲಿ ಇಬ್ಬರು ಬೈಕ್ ಕಳ್ಳರ ಬಂಧನವಾಗಿದೆ. ದಾಬಸ್‌ಪೇಟೆ ಪೊಲೀಸರಿಂದ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಲಾಗಿದೆ. ಗಿರೀಶ್(20) ಹಾಗೂ ಅರುಣ್(21) ಬಂಧಿತ ಬೈಕ್ ಕಳ್ಳರು.
ಕಳ್ಳರು, ಚಂದನಹೊಸಹಳ್ಳಿ ಬಳಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಅವರನ್ನು ಸೆರೆಹಿಡಿಯಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ದಾಖಲೆಯಿಲ್ಲದ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.
ಕೇಂದ್ರ ಸರ್ಕಾರದ ಜೊತೆ ಎಂಟನೇ ಸುತ್ತಿನ ಮಾತುಕತೆಯಲ್ಲಿರುವ ರೈತರು, ವಿಜ್ಞಾನ ಭವನದ ಹೊರಭಾಗದಲ್ಲಿ ಊಟ ಸ್ವೀಕರಿಸಿದ್ದಾರೆ.
Delhi: Langar being distributed outside Vigyan Bhawan, where the eighth round of talks between Central Government and farmer leaders is underway over #FarmLaws pic.twitter.com/YqJnm9yc7m
— ANI (@ANI) January 8, 2021
ಬಿಹಾರದ ಮುಂಗೆರ್ ಎಂಬಲ್ಲಿ 22 ವಿದ್ಯಾರ್ಥಿಗಳು ಹಾಗೂ 3 ಶಿಕ್ಷಕರು ಇಂದು ಮೊದಲ ಹಂತದ ಕೊವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಪಡೆದಿದ್ದರು. ಬಳಿಕ, ಎರಡನೇ ಸುತ್ತಿನ ಕೊರೊನಾ ಆಂಟಿಜೆನ್ ಪರೀಕ್ಷೆಯಲ್ಲಿ ಎಲ್ಲಾ 22 ವಿದ್ಯಾರ್ಥಿಗಳು ಕೊವಿಡ್-19 ನೆಗೆಟಿವ್ ವರದಿ ಪಡೆದಿದ್ದಾರೆ. ಈ ಬಗ್ಗೆ ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್ ನಸೀಮ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೆ ಶಂಕಿತರ ಮಾದರಿಗಳನ್ನು ಜಿಲ್ಲಾ ಮಟ್ಟದಲ್ಲಿ ಪರೀಕ್ಷಿಸಲಾಗುತ್ತಿತ್ತು. ಈಗ RT-PCR ಪರೀಕ್ಷೆಯನ್ನು ನಡೆಸಿ ಮಾದರಿಗಳನ್ನು ಪಾಟ್ನಾಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹೆಸರು ಬದಲಾಯಿಸಲಾಗಿದೆ. ಸರಳ ವಿವಾಹ ಕಾರ್ಯಕ್ರಮವೆಂದು ಪುನರ್ ನಾಮಕರಣ ಮಾಡಲಾಗಿದೆ. ಹೀಗೆ ಪುನರ್ ನಾಮಕರಣ ಮಾಡಿ ಯೋಜನೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ. ದೇವಾಲಯಗಳ ಆಡಳಿತ ಮಂಡಳಿಗಳಿಗೆ ವಿವಾಹ ಕಾರ್ಯಕ್ರಮ ನೆರವೇರಿಸಲು ಅನುಮತಿ ನೀಡಿದ್ದೇವೆ. ಜನವರಿಯಿಂದ ಮತ್ತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಫ್ರಾನ್ಸ್ ಅಧ್ಯಕ್ಷ, ಇಮ್ಮಾನ್ಯುಯಲ್ ಮಾಕ್ರೊನ್ ರಾಜತಾಂತ್ರಿಕ ಸಲಹೆಗಾರ ಇಮ್ಮಾನ್ಯುಯಲ್ ಬಾನ್ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ದ್ವಿರಾಷ್ಟ್ರ ಸಂಬಂಧ ಹಾಗೂ ಜಾಗತಿಕ ವಿಚಾರಗಳ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ.
ಕಡಲಿನಲ್ಲಿ ತೊಂದರೆಗೆ ಒಳಗಾಗುವ ಮೀನುಗಾರರ ರಕ್ಷಣೆಗೆ ಬೋಟ್ ಆ್ಯಂಬುಲೆನ್ಸ್ ತರಲು ಸರ್ಕಾರ ಚಿಂತನೆ ನಡೆಸಿದೆ. ಮೀನುಗಾರಿಕಾ ಬೋಟುಗಳಲ್ಲಿ ಸ್ವದೇಶಿ ನಿರ್ಮಿತ ಯಂತ್ರ ಬಳಕೆಯ ಬಗ್ಗೆಯೂ ಸರ್ಕಾರ ಯೋಚಿಸಿದೆ. ಈವರೆಗೂ ಚೀನಾ ನಿರ್ಮಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಆದರೆ, ಇನ್ನುಮುಂದೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಸ್ವದೇಶಿ ಯಂತ್ರಗಳ ಬಳಕೆ ಮಾಡುವ ಯೋಚನೆಯಿದೆ. ಸೀಮೆ ಎಣ್ಣೆ ಬಳಸುತ್ತಿರುವ ನಾಡದೋಣಿಗಳಲ್ಲಿ ಗ್ಯಾಸ್ ಎಂಜಿನ್ ಅಳವಡಿಸುವ ಯೋಚನೆಯಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ ಸುಮಾರು ನಾಲ್ಕು ಲಕ್ಷ ಕೋಳಿಗಳು ಸಾವನ್ನಪ್ಪಿವೆ. ಅವುಗಳ ಮಾದರಿಯನ್ನು ಪರೀಕ್ಷೆಗಾಗಿ ಜಲಂಧರ್ಗೆ ಕಳುಹಿಸಲಾಗಿದೆ. ವಿವಿಧ ಪೌಲ್ಟ್ರಿ ಫಾರ್ಮ್ಗಳಿಂದಲೂ ಮಾದರಿಯನ್ನು ಭೋಪಾಲ್ಗೆ ಕಳುಹಹಿಸಲಾಗಿದೆ. ಅವುಗಳಲ್ಲಿ ಎರಡು ವರದಿಗಳು H5N8 ಪಾಸಿಟಿವ್ ಎಂದು ಬಂದಿವೆ ಎಂದು ಹರ್ಯಾಣದ ಮೀನುಗಾರಿಕಾ ಹಾಗೂ ಪಶುಸಂಗೋಪನಾ ಸಚಿವ ಜೆ.ಪಿ. ದಲಾಲ್ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕೃತ ಭೇಟಿಗಾಗಿ ಜನವರಿ 16, 17ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಗೃಹ ಇಲಾಖೆಯ ಕಾರ್ಯಕ್ರಮದಲ್ಲಿ, ನಂತರ ಭದ್ರಾವತಿಯಲ್ಲಿ ಸಿಆರ್ಪಿಎಫ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ನಾಲ್ಕು ಜಿಲ್ಲೆಗಳ ಗ್ರಾಮ ಪಂಚಾಯತಿ ಸದಸ್ಯರ ಸಮಾವೇಶ 17ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಗಳನ್ನು ಮುಗಿಸಿ ಅಮಿತ್ ಶಾ ದೆಹಲಿಗೆ ವಾಪಸ್ ತೆರಳಲಿದ್ದಾರೆ. ಸಮಯದ ಕೊರತೆಯಿಂದ ಬೆಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಭೆ ಇಲ್ಲ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿವರಣೆ ನೀಡಿದ್ದಾರೆ.
ಕೆಜಿಎಫ್ 2 ಚಿತ್ರದ ಟೀಸರ್ ಲೀಕ್ ವಿಚಾರವಾಗಿ ಕೆ.ಜಿ.ಎಫ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಚಿತ್ರತಂಡ ಸದ್ಯಕ್ಕೆ ಆರೋಪಿ ಯಾರು ಎನ್ನುವ ಯೋಚನೆಯಲ್ಲಿದೆ. ಈ ಕೃತ್ಯವನ್ನು ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೋ ಅಥವಾ ನಮ್ಮ ಬಳಿಯಿಂದಲೇ ಹ್ಯಾಕ್ ಆಗಿದೆಯಾ ಎಂದು ಗೊತ್ತಾಗುತ್ತಿಲ್ಲ. ಯಾವುದೇ ಖಚಿಚತೆ ಇಲ್ಲದೆ ದೂರು ನೀಡಲಾಗದು. ಹಾಗಾಗಿ, ಪೊಲೀಸ್ ದೂರು ನೀಡುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದು ಕಾರ್ತಿಕ್ ಗೌಡ ಹೇಳಿದ್ದಾರೆ.
ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆ ಮುಕ್ತಾಯಗೊಂಡಿದೆ. ಸತತ 4 ಗಂಟೆಗಳ ಕಾಲ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿರುವ ರಾಧಿಕಾ ಕುಮಾರಸ್ವಾಮಿ, ಸಿಸಿಬಿ ಕಚೇರಿಯಿಂದ ಹೊರಬಂದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ, ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದ ರಾಧಿಕಾ ವಿಚಾರಣೆ ಮುಗಿಸಿದ್ದಾರೆ.
ಬ್ರಿಟನ್ ಪ್ರಯಾಣಿಕರಿಗೆ ದೆಹಲಿಯಲ್ಲಿ ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿಕೆ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಬಂದರೆ ಐಸೋಲೇಷನ್ನಲ್ಲಿ ಚಿಕಿತ್ಸೆ ಹಾಗೂ ಕೊರೊನಾ ನೆಗಟಿವ್ ಬಂದವರಿಗೆ ಏಳು ದಿನ ಸರ್ಕಾರಿ ಕ್ವಾರಂಟೈನ್, ಉಳಿದ ಏಳು ದಿನಗಳು ಹೋಮ್ ಕ್ವಾರಂಟೈನ್ ಎಂದು ಅರವಿಂದ್ ಕೇಜ್ರೀವಾಲ್ ಸೂಚನೆ ನೀಡಿದ್ದಾರೆ.
ಮೂಗಿನಿಂದ ಹಾಕುವ ಕೊರೊನಾ ವಿರುದ್ಧದ ಲಸಿಕೆಯನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಲಸಿಕೆಯ ಮೊದಲ ಹಂತದ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಕಂಪನಿ ಡಿಸಿಜಿಐ ಅನುಮತಿ ಕೋರಿದೆ.
ಒಬ್ಬ ವ್ಯಕ್ತಿ ಏಕಕಾಲಕ್ಕೆ ಇಬ್ಬರು ಮಹಿಳೆಯರನ್ನು ಮದುವೆಯಾದ ಘಟನೆ ಚತ್ತೀಸ್ಘಡದ ಬಸ್ತಾರ್ನಲ್ಲಿ ಸಂಭವಿಸಿದೆ. ನಾನು ಇಬ್ಬರೂ ಹುಡುಗಿಯರ ಅನುಮತಿ ಪಡೆದು, ಏಕಕಾಲಕ್ಕೆ ಎರಡು ಮದುವೆಯಾಗಿದ್ದೇನೆ. ಮದುವೆ ಸಮಾರಂಭವೂ ಗ್ರಾಮದ ಎಲ್ಲಾ ಸದಸ್ಯರ ಮುಂಭಾಗದಲ್ಲಿ ನಡೆದಿದೆ ಎಂದು ಮದುವೆ ಗಂಡು ತಿಳಿಸಿದ್ದಾನೆ.
Chhattisgarh: A man married two women at the same time in Bastar on January 3
"I married both of the women with their consent. The ceremony took place in front of all the villagers," he said. (07.01) pic.twitter.com/gd0SsAM1Lo
— ANI (@ANI) January 8, 2021
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗೆ ರೈತರ ವಿರೋಧದ ವಿಚಾರವಾಗಿ ಇಂದು ಕೇಂದ್ರ ಹಾಗೂ ರೈತರ ನಡುವೆ 8ನೇ ಸುತ್ತಿನ ಸಭೆ ಆರಂಭವಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದಾರೆ. ಸಚಿವರು, ರೈತರ ಜೊತೆ ಸಭೆಯಲ್ಲಿ ಭಾಗವಹಿಸುವ ಮುನ್ನ ಗೃಹ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಗೃಹ ಖಾತೆ ಸಚಿವ ಅಮಿತ್ ಶಾ ನಿವಾಸದಲ್ಲಿ ಸಚಿವರು ಸಭೆ ನಡೆಸಿದ ಬಳಿಕ, ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರೈತರ ಸಭೆಗೆ ಆಗಮಿಸಿದ್ದಾರೆ.
Delhi: Union Ministers Narendra Singh Tomar and Piyush Goyal arrive at Vigyan Bhawan to hold talks with farmer leaders pic.twitter.com/4yYZrwaorY
— ANI (@ANI) January 8, 2021
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಖಾಸಗಿ ವಾಹನಕ್ಕೆ, ಬಸ್ ಡಿಪೋದಲ್ಲಿ ಡೀಸೆಲ್ ಹಾಕಿಸಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ NWKRTC ಬಸ್ ಡಿಪೋದಲ್ಲಿ, ಸವದಿ ವಾಹನಕ್ಕೆ 44 ಲೀಟರ್ ಡೀಸೆಲ್ ಹಾಕಿಸಿಕೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ಬಂದಿದ್ದ ಉಪಮುಖ್ಯಮಂತ್ರಿ, ಖಾಸಗಿ ವಾಹನಕ್ಕೂ ಡೀಸೆಲ್ ಹಾಕಿಸಿಕೊಂಡಿದ್ದಾರೆ.
ಬ್ರಿಟನ್ನಿಂದ ಬೆಂಗಳೂರಿಗೆ ಬಂದಿದ್ದ ಜೆ.ಪಿ.ನಗರ ನಿವಾಸಿ, ಹೊಸ ಪ್ರಭೇದದ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಹೊಂದಿದ್ದಾರೆ. ಅವರು ರೂಪಾಂತರಿ ಕೊರೊನಾ ಪತ್ತೆಯಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪೊಲೀಸ್ ವಶದಲ್ಲಿದ್ದ ವಂಚಕ ಯುವರಾಜ್ ಸ್ವಾಮಿಯನ್ನು ಅಧಿಕಾರಿಗಳು ಸಿಸಿಬಿ ಕಚೇರಿಗೆ ಕರೆತಂದಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಯುವರಾಜ್ ಸ್ವಾಮಿ ಮುಖಾಮುಖಿ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಖುದ್ದು ವಿಚಾರಣೆ ನಡೆಸುತ್ತಿದ್ದಾರೆ. ಯುವರಾಜ್ ಜೊತೆ ಆರ್ಥಿಕ ವ್ಯವಹಾರ ಸಂಬಂಧ, ಬೆಳಗ್ಗೆಯಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಬಿಜಿಎಸ್ ಮಠದ ಮುಂದೆ ಟೊಯೋಟ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಬಿಜಿಎಸ್ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಗಮನ ಸೆಳೆಯಲು ಪ್ರತಿಭಟನೆ ನಡೆಸಲಾಗಿದೆ. ಟೊಯೋಟ ಕಾರ್ಮಿಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಸರತಿ ಸಾಲಿನಲ್ಲಿ ನಿಂತು ಮೌನ ಪ್ರತಿಭಟನೆ ನಡೆಸಿದ್ದಾರೆ. ನಮಗೆ ಅನ್ಯಾಯವಾಗಿ 61 ದಿನವಾಗಿದೆ, ನ್ಯಾಯ ಕೊಡಿಸಿ ಎಂದು ಮನವಿ ಮಾಡಿ ಸರ್ಕಾರದ ಗಮನಸೆಳೆಯಲು ಪ್ರಯತ್ನಿಸಿದ್ದಾರೆ.
ವಿಧಾನ ಪರಿಷತ್ ಗಲಾಟೆ ಕುರಿತ ಸದನ ಸಮಿತಿಗೆ ಬಿಜೆಪಿ ಸದಸ್ಯರ ರಾಜೀನಾಮೆ ವಿಚಾರವಾಗಿ, ಬೆಂಗಳೂರಿನಲ್ಲಿ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಇವತ್ತು ಸಮಿತಿಯ ಸಭೆ ನಡೆಸಿದ್ದೇವೆ. ಆದರೆ, ಇವತ್ತಿನ ಸಭೆಯಲ್ಲಿ ಹೆಚ್.ವಿಶ್ವನಾಥ್ ರಾಜಿನಾಮೆ ನೀಡಿದ್ದಾರೆ. ಆ ರಾಜಿನಾಮೆಯನ್ನು ಅಂಗೀಕಾರ ಮಾಡುವ ಅಧಿಕಾರ ಕಾನೂನಿನಲ್ಲಿ ಇಲ್ಲ. ಸಮಿತಿಯ ಅಧ್ಯಕ್ಷನಾಗಿ ಇರುವುದರಿಂದ ರಾಜಿನಾಮೆ ಅಂಗೀಕರಿಸುವ ಅಧಿಕಾರ ನನಗೆ ಇಲ್ಲ ಎಂದು ಮರಿತಿಬ್ಬೇಗೌಡ ಹೇಳಿದ್ದಾರೆ. ಸದನ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲು ಇಷ್ಟ ಇಲ್ಲ ಎಂದು ಹೆಚ್.ವಿಶ್ವನಾಥ್ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ ಅಷ್ಟೇ ಎಂದು ಮರಿತಿಬ್ಬೇಗೌಡ ತಿಳಿಸಿದ್ದಾರೆ.
ಕೇರಳ ವಿಧಾನಸಭಾ ಸ್ಪೀಕರ್ ಪದಚ್ಯುತಿ ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಯುವಮೋರ್ಚಾ ಸದಸ್ಯರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.
Thiruvananthapuram: Police use water cannon against BJP Yuva Morcha members protesting outside Kerala Assembly demanding the resignation of Kerala Assembly Speaker pic.twitter.com/BscoaxTioi
— ANI (@ANI) January 8, 2021
ಕೊಡವರು ಗೋಮಾಂಸ ತಿನ್ನುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಡವರ ಭಾವನೆಗೆ ಧಕ್ಕೆಯಾಗಿದೆ ಎಂದು, ರವಿ ಕುಶಾಲಪ್ಪ ಎಂಬವರು ದೂರು ಸಲ್ಲಿಸಿದ್ದರು. ದೂರು ಆಧರಿಸಿ, ಕಲಂ ಐಪಿಸಿ 153 ಅನ್ವಯ FIR ಪ್ರಕರಣ ದಾಖಲಾಗಿದೆ.
ಕೊರೊನಾ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ 6 ಲಕ್ಷ 30 ಸಾವಿರ ಸಿಬ್ಬಂದಿ ನೋಂದಣಿ ಪ್ರಕ್ರಿಯೆ ಆಗಿದೆ. ಇನ್ನುಳಿದವರೂ ನೋಂದಣಿ ಮಾಡಿಕೊಳ್ಳುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಆರೋಗ್ಯ, ವೈದ್ಯಕೀಯ ಇಲಾಖೆ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲಾಗಿದೆ. ಆರೋಗ್ಯ, ವೈದ್ಯಕೀಯ ಇಲಾಖೆ ಬಳಿಕ ಪೊಲೀಸ್, ಕಂದಾಯ, ಶಿಕ್ಷಣ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಆದ್ಯತೆ ನೀಡುತ್ತೇವೆ. ಶೀಘ್ರದಲ್ಲೇ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಲಭ್ಯವಾಗುತ್ತದೆ. ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಿಸುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ತಿಳಿಸಿದ್ದಾರೆ.
ಡಿಸೆಂಬರ್ 15ರಂದು ನಡೆದ ವಿಧಾನ ಪರಿಷತ್ ಗದ್ದಲ ವಿಚಾರಕ್ಕೆ ಸಂಬಂಧಿಸಿ, ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿದ್ದಾರೆ. ಸದನದಲ್ಲಿ ನಡೆದ ಗದ್ದಲ, ನಾವೆಲ್ಲಾ ತಲೆ ತಗ್ಗಿಸುವ ವಿಚಾರ. ಅದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದಿದ್ದಾರೆ. ಸದನದ ಗದ್ದಲದ ತನಿಖೆಗೆ ರಚಿಸಿದ್ದ ಐದು ಸದಸ್ಯರ ಸಮಿತಿಗೆ ಎಚ್.ವಿಶ್ವನಾಥ್ ಇಂದು ರಾಜಿನಾಮೆ ನೀಡಿದ್ದಾರೆ. ಆ ಕುರಿತು ಪ್ರತಿಕ್ರಿಯಿಸಿದ ಅವರು, ಆ ಗದ್ದಲ ನಡೆದ ಸಂಧರ್ಭದಲ್ಲಿ ನಾವೇ ಅಲ್ಲಿದ್ದೆವು. ಹಾಗಾಗಿ ನಾನು ಸದನ ಸಮಿತಿ ಧಿಕ್ಕರಿಸಿ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ನಾಳೆ ಅಥವಾ ನಾಡಿದ್ದು ಕರ್ನಾಟಕಕ್ಕೆ ಕೊವಿಡ್ ಲಸಿಕೆ ಬರಲಿದೆ. ರಾಜ್ಯಕ್ಕೆ 13 ಲಕ್ಷ 90 ಸಾವಿರ ಡೋಸ್ ಲಸಿಕೆ ತಲುಪಲಿದೆ. ಲಸಿಕೆ ಯಾವ ಕಂಪನಿಯದೆಂದು ಸಂಜೆ ಸ್ಪಷ್ಟನೆ ಸಿಗಲಿದೆ. ಕೊರೊನಾ ಲಸಿಕೆ ರಾಜ್ಯಕ್ಕೆ ಬರುತ್ತಿರುವುದು ಶುಭ ಸುದ್ದಿ. ಲಸಿಕೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸರಬರಾಜು ಮಾಡುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಇತ್ತ ಅಬಕಾರಿ ಸಚಿವ ಎಚ್. ನಾಗೇಶ್ ಸಂಪುಟ ವಿಸ್ತರಣೆ ಆಗುವ ಬಗ್ಗೆ ಹೇಳಿಕೆ ನೀಡಿದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂಪುಟ ವಿಸ್ತರಣೆ ತೀರ್ಮಾನ ಆಗಿಲ್ಲ ಎಂದಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸಂಕ್ರಾತಿ ಹಬ್ಬದ ನಂತರ ಸಚಿವ ಸಂಪುಟ ವಿಸ್ತರಣೆ ಎಂಬ ಬಗ್ಗೆ, ಕೋಲಾರದಲ್ಲಿ ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ನಂತರ ಯಾವಾಗ ಬೇಕಾದರೂ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಎಮ್.ಎಲ್.ಸಿ ಶಂಕರ್ ಹೇಳಿದಂತೆ ಹಲವರ ತ್ಯಾಗದಿಂದ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ಶಂಕರ್, ಎಂಟಿಬಿ, ಮುನಿರತ್ನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಗೊತ್ತಿಲ್ಲ. ಧನುರ್ಮಾಸ ಬಳಿಕ ಒಳ್ಳೇ ದಿನ ನೋಡಿಕೊಂಡು ಸಚಿವ ಸ್ಥಾನ ನೀಡುತ್ತಾರೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದ್ದಾರೆ.
ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 198ರಿಂದ 243ಕ್ಕೆ ಏರಿಕೆಯಾಗಿದೆ. ಈ ಮೂಲಕ, ದೇಶದಲ್ಲೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆಯಾಗಿ ಬಿಬಿಎಂಪಿ ಕಾಣಿಸಿಕೊಳ್ಳಲಿದೆ. ಇಷ್ಟು ದಿನ 198 ವಾರ್ಡ್‌ಗಳಿಂದ ಕಾರ್ಯನಿರ್ವಹಣೆ ಮಾಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಇನ್ನು ಮುಂದೆ 243 ವಾರ್ಡ್‌ಗಳಿಂದ ಕಾರ್ಯನಿರ್ವಹಿಸಲಿದೆ.
ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ, ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ. 2 ತಿಂಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಬಂಧನದ ಅವಧಿಯನ್ನು ಇನ್ನೂ 14 ದಿನಗಳ ಕಾಲ ವಿಸ್ತರಿಸಿ ಆದೇಶ ನೀಡಲಾಗಿದೆ. ಜನವರಿ 22ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ, ಧಾರವಾಡದ ಸಿಬಿಐ ವಿಶೇಷ ಕೋರ್ಟ್‌ನಿಂದ ಆದೇಶ ಹೊರಡಿಸಲಾಗಿದೆ.
ರೈತರ ಅಹವಾಲುಗಳಿಗೆ ಇಂದಿನ ಸಭೆಯಲ್ಲಿ ಪರಿಹಾರ ಸಿಗುವ ಭರವಸೆ ಇದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭರವಸೆ ವ್ಯಕ್ತಪಡಿಸಿದ್ದಾರೆ. ಇಂದು ನಡೆಯಲಿರುವ ರೈತರೊಂದಿಗಿನ 8ನೇ ಸುತ್ತಿನ ಮಾತುಕತೆಯು ಶಾಂತಿಯುತವಾಗಿ ನಡೆಯುತ್ತದೆ. ರೈತರ ಅಹವಾಲುಗಳಿಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಮಾತನಾಡಿದ್ದಾರೆ. ರೈತ ಮುಖಂಡರು ಹಾಗೂ ಕೇಂದ್ರ, ಎರಡೂ ವಿಭಾಗವು ಪರಿಹಾರ ಕಂಡುಕೊಳ್ಳುವ ನೆಲೆಯಲ್ಲಿ ಮಾತುಕತೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ. ವಿಜ್ಞಾನ ಭವನದಲ್ಲಿ ನಡೆಯಲಿರುವ ಸಭೆಗೂ ಮುನ್ನ ನರೇಂದ್ರ ಸಿಂಗ್ ತೋಮರ್ ಮಾತನಾಡಿದ್ದಾರೆ.
ಪಿಣರಾಯಿ ವಿಜಯನ್ ಸರ್ಕಾರ ಕೇರಳ ಕಂಡ ಅತಿ ಭ್ರಷ್ಟ ಸರ್ಕಾರ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ, ಡಾಲರ್ ಕೇಸ್ ಇತ್ಯಾದಿಗಳು ಸರ್ಕಾರದ ವಿರುದ್ಧ ಇರುವ ಅತಿ ದೊಡ್ಡ ಆರೋಪಗಳು ಎಂದು ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಕೇರಳ ಆಡಳಿತದ ಹಾಗೂ ಸಭಾಪತಿಯವರ ನಡವಳಿಕೆಯನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆಯಲ್ಲಿ, ಕರ್ನಾಟಕ ಯೋಜನಾ ಮಂಡಳಿ ಹೆಸರು ಬದಲಾವಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಯೋಜನಾ ಮಂಡಳಿಯನ್ನು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಎಂದು ಹೆಸರು ಬದಲಾವಣೆ ಮಾಡುವ ಬಗ್ಗೆ ಪ್ರಥಮ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮಕ್ಕೆ ರಾಜ್ಯಪಾಲರಿಂದ ಅಂಕಿತ ದೊರೆತಿದೆ. ರಾಜ್ಯಪಾಲರು, ಡಿಸೆಂಬರ್ 19ರಂದು ಅಂಕಿತ ಹಾಕಿದ್ದಾರೆ. ಹೀಗಾಗಿ, ಅಧಿನಿಯಮದ ಎಲ್ಲಾ ಉಪಬಂಧಗಳು ಜನವರಿ 11ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಧಿನಿಯಮದ ಪ್ರಕಾರ ಆಯೋಗದಿಂದ ಮುಂದಿನ ಕ್ರಮ ಕೈಗೊಳ್ಲಲಾಗುವುದು. ಜನಸಂಖ್ಯೆಗೆ ಅನುಗುಣವಾಗಿ ಹೊಸ ವಾರ್ಡ್‌ಗಳ ರಚನೆಯ ಬಗ್ಗೆ ತಿಳಿಸಲಾಗಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯವಾಗಿದೆ. ಎರಡನೇ ದಿನದ ಅಂತ್ಯಕ್ಕೆ ಭಾರತ, 2 ವಿಕೆಟ್ ಕಳೆದುಕಕೊಂಡು 96 ರನ್ ಗಳಿಸಿದೆ. ಆಸ್ಟ್ರೇಲಿಯಾಗಿಂತ ಭಾರತ 242 ರನ್ ಹಿಂದಿದೆ.
STUMPS on Day 2 of the 3rd Test.
India 96/2, trail Australia (338) by 242 runs.
Join us for an all important Day 3 of the 3rd Test tomorrow.
Scorecard – https://t.co/tqS209srjN #AUSvIND pic.twitter.com/QnkDalr3wW
— BCCI (@BCCI) January 8, 2021
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ, ಕಾಂಗ್ರೆಸ್ ನಾಯಕರು ಹಾಗೂ ಲೋಕಸಭಾ ಸದಸ್ಯರು ಇಂದು ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಜಂತರ್ಮಂತರ್ನಲ್ಲಿ ಹೋರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ನಿವಾಸದಲ್ಲಿ, ಪ್ರಿಯಾಂಕ ಗಾಂಧಿ ವಾದ್ರಾರನ್ನು ಭೇಟಿಯಾಗಿದ್ದಾರೆ.
2020ರ ಡಿ.15ರಂದು ಪರಿಷತ್‌ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ, ಐವರು ಸದಸ್ಯರ ಸದನ ಸಮಿತಿ ರಚಿಸಲಾಗಿತ್ತು. ಈ ಐವರು ಸದಸ್ಯರ ಪೈಕಿ ಇಬ್ಬರು ಬಿಜೆಪಿ MLCಗಳು ಇಂದು ರಾಜಿನಾಮೆ ಸಲ್ಲಿಸಿದ್ದಾರೆ. ಹೆಚ್.ವಿಶ್ವನಾಥ್ ಹಾಗೂ ಎಸ್.ವಿ.ಸಂಕನೂರು ಸಮಿತಿಗೆ ರಾಜಿನಾಮೆ ನೀಡಿದ್ದಾರೆ. ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಅಧ್ಯಕ್ಷತೆಯ ಸಮಿತಿಗೆ ಇಬ್ಬರು ರಾಜಿನಾಮೆ ಸಲ್ಲಿಸಿದ್ದಾರೆ.
ಜಮೀನಿನ ಪ್ರಕರಣಕ್ಕೆ ಸಂಬಂಧಿಸಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೆರಿಗೆ ಅಧಿಕಾರಿ ಹಾಗೂ ಚಿಕ್ಕಜಾಲ ಮುಖ್ಯ ಪೇದೆಯನ್ನು ಎಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ವ್ಯಾಜ್ಯ ಪರಿಹಾರಕ್ಕೆ 5 ಲಕ್ಷ ಬೇಡಿಕೆ ಇಟ್ಟಿದ್ದ ತೆರಿಗೆ ಅಧಿಕಾರಿ ಹನುಮಯ್ಯ ಹಾಗೂ ಜಮೀನಿನ ವಿಚಾರಕ್ಕೆ ಸಂಬಂಧಿಸಿ ರಕ್ಷಣೆ ನೀಡಲು 6 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಮುಖ್ಯ ಪೇದೆ ರಾಜು ಅವರ ಲಂಚಾವತಾರವನ್ನು ಎಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಕುರಿತು, ಜಮೀನಿನ ಮಾಲೀಕ ಎಸಿಬಿಗೆ ನೀಡಿದ್ದ ದೂರಿನ ಅನ್ವಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ದಾಳಿ ವೇಳೆ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಅಂಕಪಟ್ಟಿ ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ.ವೇಣುಗೋಪಾಲ್ ಹೇಳಿದ್ದಾರೆ. ಅಂಕಪಟ್ಟಿ ಹಗರಣ ಈಗಾಗಲೇ ಗಮನಕ್ಕೆ ಬಂದಿದ್ದು, ದೂರು ದಾಖಲಿಸಲಾಗಿದೆ. ನಾವು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ ಡಿಜಿಟಲೀಕರಣ ಮಾಡಿದ್ದೇವೆ. ಆ ಮೂಲಕ, ಪಾರದರ್ಶಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದೇ ಕಾರಣದಿಂದ ಹಗರಣ ಬೇಗ ಬೆಳಕಿಗೆ ಬಂದಿದೆ ಎಂದು ಪ್ರೊ.ವೇಣುಗೋಪಾಲ್ ಮಾತನಾಡಿದ್ದಾರೆ. ವಿದ್ಯಾರ್ಥಿಗಳು ಓದಿ ನ್ಯಾಯಯುತವಾಗಿ ಪರೀಕ್ಷೆ ಬರೆಯಬೇಕು. ಅಕ್ರಮದ ಕಡೆಗೆ ಮನಸು ಇರಬಾರದು ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಹೊಸ ಪ್ರಭೇದದ ಕೊವಿಡ್ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ ತುತ್ತಾದ, 82 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಾಣು ಪತ್ತೆ ಖಚಿತವಾಗಿದೆ.
ಇಂದು ಕೇಂದ್ರ ಹಾಗೂ ರೈತ ಮುಖಂಡರ ನಡುವೆ 8ನೇ ಸುತ್ತಿನ ಮಾತುಕತೆ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಭೆಗಾಗಿ ರೈತರು ಸಿಂಘು ಗಡಿಯಿಂದ ದೆಹಲಿಯತ್ತ ಹೊರಟಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರು ನಡೆಸುತ್ತಿರುವ ಪ್ರತಿಭಟನೆಯು 50 ದಿನಗಳತ್ತ ಹೆಜ್ಜೆಯಿಡುತ್ತಿದೆ.
Haryana: Farmer leaders from Singhu border leave for Vigyan Bhawan in Delhi for the eighth round of talks with the Union Government on farm laws pic.twitter.com/ai1vd8VN9K
— ANI (@ANI) January 8, 2021
ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಜಿಲ್ಲೆಯ, ರೋಣ ತಾಲೂಕು, ಮೆಣಸಗಿ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಇದರಿಂದ, ಆತಂಕಗೊಂಡ ಗ್ರಾಮಸ್ಥರು ರೋಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಡಂಗುರ ಸಾರುವ ಮೂಲಕ ಗ್ರಾಮದ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿ ಪಾತ್ರದತ್ತ ಯಾರೂ ಹೋಗದಂತೆ ಎಚ್ಚರಿಕೆ ಹೇಳಿದ್ದಾರೆ. ಅರಣ್ಯಾಧಿಕಾರಿಗಳು ಮೊಸಳೆ ಸೆರೆ ಹಿಡಿಯಲು ಮುಂದಾಗಿದ್ದಾರೆ.
ಸಿದ್ದರಾಮಯ್ಯನವರ ಭವಿಷ್ಯ ಯಾವತ್ತೂ ಸತ್ಯ ಆಗಿಲ್ಲ. ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರರು. ಅವರ ಭವಿಷ್ಯ ಸತ್ಯ ಆಗಲು ಸಾಧ್ಯವಿಲ್ಲ. ಮುಂದಿನ ಎರಡೂವರೆ ವರ್ಷ ಅವಧಿಗೆ ಯಡಿಯೂರಪ್ಪನವರೇ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ. ಈ ಬಗ್ಗೆ, ನಾನು ಹಲವಾರು ಬಾರಿ ಹೇಳಿದ್ದೇನೆ ಎಂದು ಬಾಗಲಕೋಟೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಸಿ.ಎಂ. ಯಡಿಯೂರಪ್ಪ ಖುರ್ಚಿ ಅಲುಗಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೊರೊನಾ ಲಸಿಕೆ ಚುಚ್ಚುಮದ್ದನ್ನು ಮೊದಲು ಪ್ರಧಾನಿ ನರೇಂದ್ರ ಮೋದಿ ಪಡೆದುಕೊಳ್ಳಬೇಕು. ನಂತರ ನಾವು ಪಡೆಯುತ್ತೇವೆ ಎಂದು ಆರ್ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
Prime Minister Narendra Modi should take first shot of COVID19 vaccine, then, we will also take it: RJD leader Tej Pratap Yadav pic.twitter.com/YuUomjLqCQ
— ANI (@ANI) January 8, 2021
ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ಅಕ್ರಮವಾಗಿ ನುಗ್ಗಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಫ್ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಕಾರ್ಯಾಚರಣೆ ಆರಂಭಿಸಿದೆ. ಅಕ್ರಮವಾಗಿ ಕ್ಯಾಪಿಟಲ್ಗೆ ನುಗ್ಗಿದವರ ಪತ್ತೆಗೆ ಎಫ್ಬಿಐ ಕಾರ್ಯಾಚರಣೆ ನಡೆಸುತ್ತಿದೆ. ನುಸುಳುಕೋರರ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿಕೊಂಡಿದೆ. ಮಾಹಿತಿ ನೀಡಿದವರಿಗೆ 50 ಸಾವಿರ ಡಾಲರ್ ಬಹುಮಾನ ನೀಡುವುದಾಗಿಯೂ ಎಫ್ಬಿಐ ಘೋಷಿಸಿದೆ.
ರೂಪಾಂತರಿ ಕೊರೊನಾ ವೈರಾಣು ಕಾರಣದಿಂದ ಸ್ಥಗಿತಗೊಂಡ ಭಾರತ-ಇಂಗ್ಲೆಂಡ್ ನಡುವಿನ ವಿಮಾನ ಹಾರಾಟ ಮತ್ತೆ ಆರಂಭವಾಗಿದೆ. ಒಂದು ವಾರದ ಬಳಿಕ ವಿಮಾನ ಹಾರಾಟ ಮತ್ತೆ ಶುರುವಾಗಿದೆ. 256 ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ, ಲಂಡನ್ನಿಂದ ದೆಹಲಿಗೆ ಇಂದು ಆಗಮಿಸಿದೆ.
ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಸಂಕಲ್ಪ ಸಮಾವೇಶ ಆರಂಭಗೊಂಡಿದೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ರೆಹಮಾನ್ ಖಾನ್, ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಕೊನಯ ಉಸಿರು ಇರುವವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಕೆ.ಆರ್.ನಗರ ಬಿಟ್ಟು ಬೇರೆ ಎಲ್ಲೂ ನಾನು ಸ್ಪರ್ಧಿಸುವುದಿಲ್ಲ. ರಾಜಕೀಯ ಆರಂಭಿಸಿದಲ್ಲೇ ನಿವೃತ್ತಿಯನ್ನೂ ಪಡೆಯುತ್ತೇನೆ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.
ಡಿಸ್ಟಿಲರಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಅವಘಡದಲ್ಲಿ, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗವತಿ ಗ್ರಾಮದ ಡಿಸ್ಟಿಲರಿ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕಾರ್ಮಿಕ ರಘು(38) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮರಣ ಹೊಂದಿದ್ದಾನೆ. ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಕಾರ್ಖಾನೆ ಇದಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರಿಗೆ ತೀವ್ರ ಗಾಯವಾಗಿದೆ. ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ವಿಷಪೂರಿತ ಮದ್ಯ ಸೇವಿಸಿ ನಾಲ್ವರ ಸಾವು ಸಂಭವಿಸಿದೆ. ಕಳ್ಳಭಟ್ಟಿ ಸೇವಿಸಿದ್ದ 15 ಜನರು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ಸಂಬಂಧ ಮೂವರು ಪೊಲೀಸರು ಅಮಾನತಾಗಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಪೊಲೀಸರ ಅಮಾನತುಗೊಳಿಸಲಾಗಿದೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಟ್ವಿಟರ್ನಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಮಾನ್ಯ ಸಿದ್ದರಾಮಯ್ಯನವರು ಬುದ್ಧಿವಂತಿಕೆ ತೋರಿಸಲು ಬಂದಾಗ ವಕೀಲರಾಗುತ್ತಾರೆ. ವಿವಾದವಾದಾಗ ಹಳ್ಳಿ ಹೈದನೂ ಆಗುತ್ತಾರೆ. ಸಿದ್ದರಾಮಯ್ಯ ವಿವಾದಗಳೆಲ್ಲವೂ ಮಾಂಸ, ಆಹಾರ, ದೇವರು ಎಂಬಿತ್ಯಾದಿಗಳ ಸುತ್ತವೇ ಸುತ್ತುತ್ತದೆ. ಸಿದ್ದರಾಮಯ್ಯರ ಈ ವಿವಾದಗಳು ಅವರೆಷ್ಟು ಬೌದ್ಧಿಕವಾಗಿ ಖಾಲಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಜಯದೇವ ಮತ್ತು ಸಾರಕ್ಕಿ ಉಪವಿಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗಲಿರುವ ಬಗ್ಗೆ ಬೆಸ್ಕಾಂ ಸೂಚನೆ ನೀಡಿದೆ. ಬೆಸ್ಕಾಂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಹಾಗೂ ನಾಳೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.
ಕಣ್ವ ಸೌಹಾರ್ದ ಬ್ಯಾಂಕ್ ವಿಚಾರದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಸಿಸಿಬಿಗೆ ದೂರು ನೀಡಿರುವವರು ಮತ್ತೆ ಸಿಐಡಿಗೆ ದೂರು ಸಲ್ಲಿಸುವ ಅಗತ್ಯವಿಲ್ಲ. ಹಾಗೆಯೇ, ಪೊಲೀಸ್ ಠಾಣೆ ಕಮಿಷನರ್ ಕಚೇರಿ, ಡಿಸಿಪಿ ಕಚೇರಿ ಅಥವಾ ಇನ್ನಾವುದೇ ಪೊಲೀಸ್ ವಿಭಾಗಗಳಲ್ಲಿ ದೂರು ಸಲ್ಲಿಸಿರುವವರು ಮತ್ತೆ ಸಿಐಡಿಗೆ ದಾಖಲೆ ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸೂಚಿಸಲಾಗಿದೆ. ದೂರಿನ ಪುನರಾವರ್ತನೆ ಆಗದಂತೆ ತಡೆಯಲು ಈ ಕ್ರಮ ಹೇಳಲಾಗಿದೆ. ಶ್ರೀ ಕಣ್ವ ಸೌಹಾರ್ದ ಠೇವಣಿದಾರರ ವೆಲ್ಫೇರ್ ಅಸೋಸಿಯೇಷನ್ ಈ ಸೂಚನೆ ನೀಡಿದೆ.
ಕಣ್ವ ಸಹಾರ್ದದಲ್ಲಿ ಠೇವಣಿ ಹೂಡಿಕೆ ಮಾಡಿರುವ ಹಿರಿಯ ನಾಗರಿಕರು, ಅಂಗವಿಕಲರು, ದೈಹಿಕ ಸಾಮರ್ಥ್ಯ ಹೊಂದಿರದವರು, ವಿದೇಶದಲ್ಲಿ ನೆಲೆಸಿರುವವರು ಸಿಐಡಿ ಕಚೇರಿಗೆ ತೆರಳಿ ದೂರು ನೀಡಲಾಗದಿದ್ದಲ್ಲಿ, ಅಂಥವರ ಪರವಾಗಿ ದೂರು ನೀಡಲು ಮತ್ತೊಬ್ಬ ಪ್ರತಿನಿಧಿಯನ್ನು ಕಳುಹಿಸಬಹುದಾಗಿದೆ. ಸೂಕ್ತ ದೃಢೀಕರಣ ದಾಖಲೆಗಳೊಂದಿಗೆ ಸಿಐಡಿಗೆ ದೂರು ದಾಖಲಿಸಬಹುದಾಗಿದೆ. ಶ್ರೀ ಕಣ್ವ ಸೌಹಾರ್ದ ಠೇವಣಿದಾರರ ವೆಲ್ಫೇರ್ ಅಸೋಸಿಯೇಷನ್ ಈ ಸೂಚನೆ ನೀಡಿದೆ.
ಭಾರತೀಯ ಮೂಲದ ವನಿತಾ ಗುಪ್ತಾ, ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಪ್ರಧಾನ ವಕೀಲೆಯಾಗಿ ನಾಮನಿರ್ದೇಶನಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಜೋ ಬಿಡೆನ್, ವನಿತಾ ಅತಿಯಾಗಿ ಗೌರವಿಸಲ್ಪಡುವ ನಾಗರಿಕ ಹಕ್ಕುಗಳ ನ್ಯಾಯವಾದಿಯಾಗಿದ್ದಾರೆ. ಅವರು ಭಾರತೀಯ ಮೂಲದ ಹೆಮ್ಮೆಯ ಮಗಳಾಗಿದ್ದಾರೆ ಎಂದು ಹೇಳಿದ್ದಾರೆ. ಸೆನೆಟ್ ಖಚಿತಪಡಿಸಿದರೆ, ವನಿತಾ ಗುಪ್ತಾ (46) ವರ್ಣದ ಮೊದಲ ಮಹಿಳೆಯಾಗಿ ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಯೋಜನಾ ಮಂಡಳಿಯ ಪ್ರಥಮ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಭಾಗವಹಿಸಲಿದ್ದಾರೆ.
ಇಂದು ಮಧ್ಯಾಹ್ನ 03.00 ಗಂಟೆಗೆ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಆರ್.ವಿ ಕಾಲೇಜು ಮೆಟ್ರೋ ಸ್ಟೇಷನ್ ಬಳಿಯ ಪೂರ್ಣಿಮ ಪ್ಯಾಲೇಸ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಕೇಂದ್ರ ಸರ್ಕಾರದ 2021 ಬಜೆಟ್ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ, ಆರ್ಥಿಕ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ. ಆರ್ಥಿಕ ಅಭಿವೃದ್ಧಿಗೆ ಕಾರಣವಾಗುವಂತಹ ಕ್ರಮ ಕೈಗೊಳ್ಳುವ ಕುರಿತಾಗಿ ಆರ್ಥಿಕ ಪರಿಣತರೊಂದಿಗೆ ಮೋದಿ ಮಾತನಾಡಲಿದ್ದಾರೆ. ಸಂಜೆ 4.30ಕ್ಕೆ ನಡೆಯಲಿರುವ ಸಭೆಯಲ್ಲಿ ನೀತಿ ಆಯೋಗದ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್ ಹುಟ್ಟುಹಬ್ಬ ಸಂಭ್ರಮವನ್ನು ಅಭಿಮಾನಿಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪಟಾಕಿ ಹೊಡೆದು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅನ್ನದಾನ, ರಕ್ತದಾನ ಮಾಡುತ್ತಿದ್ದಾರೆ. ಕರ್ನಾಟಕದ ಪ್ರತಿಜಿಲ್ಲೆಯಲ್ಲೂ ಬಿಗ್ ಸ್ಕ್ರೀನ್ ಮೇಲೆ ಕೆ.ಜಿ.ಎಫ್.2 ಟೀಸರ್ ಪ್ರದರ್ಶನವಾಗಲಿದೆ. ಬೆಂಗಳೂರಿನ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ರಿಲೀಸ್ ಆಗಲಿದೆ. ಕೆ.ಜಿ.ಎಫ್ ಖಳನಾಯಕ ಗರುಡ ರಾಮ್ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಥಿಯೇಟರ್ ಮುಂದೆ ಯಶ್ ಕಟೌಟ್ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯಪಾಲರ ಮಾತನ್ನು ಬಹಿಷ್ಕರಿಸಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸಿವೆ. ಕೇರಳ ವಿಧಾನಸಭೆಯ ಮುಂಭಾಗದಲ್ಲಿ, ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪ್ರತಿಭಟನೆ ನಡೆಸಿವೆ.
Thiruvananthapuram: Boycotting Kerala Governor's address Congress-led United Democratic Front (UDF) stages protest in front of Kerala Assembly demanding that Left government led by Pinarayi Vijayan should step down pic.twitter.com/nHHqetMprg
— ANI (@ANI) January 8, 2021
ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ದುಗ್ಗವತಿ ಗ್ರಾಮದ ಬಳಿ ಇರುವ ಕಾರ್ಖಾನೆಯಲ್ಲಿ ಈ ಘಟನೆಯಾಗಿದೆ. ಆಕಸ್ಮಿಕ ಬೆಂಕಿ ತಗುಲಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಹಲವಾಗಿಲು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ರಾಜ್ಯಕ್ಕೆ ನಾಳೆ ಕೊರೊನಾ ಲಸಿಕೆ ಬರಲಿದೆ. ಕೇಂದ್ರ ಸರ್ಕಾರದಿಂದ ನಾಳೆ, 13.90 ಲಕ್ಷ ಡೋಸ್ ಕೊರೊನಾ ಲಸಿಕೆ ಬರಲಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಚಹಾ ವಿರಾಮಕ್ಕೂ ಮುನ್ನ 9 ಓವರ್ಗಳನ್ನು ಆಡಿ, ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ.
ಯುವರಾಜ್ ಜೊತೆ ಆರ್ಥಿಕ ವ್ಯವಹಾರ ಸಂಬಂಧ, ಸಿಸಿಬಿ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಿತ್ತು. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ, ಬೆಂಗಳೂರಿನ ಸಿಸಿಬಿ ಕಚೇರಿಯತ್ತ ತೆರಳಿದ್ದಾರೆ.
ಕಳೆದ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟದ ತಪ್ಪಲಿನ ರೈತನ ತೋಟದ ಮನೆಯಲ್ಲಿ ಘಟನೆ ಸಂಭವಿಸಿದೆ. ತೋಟದ ಮನೆಗೆ ನುಗ್ಗಿದ ಚಿರತೆ, ಮೇಕೆ ಕುರಿಗಳ ಮೇಲೆ ದಾಳಿ ನಡೆಸಿದೆ. ಉಮೇಶ್ ಎಂಬ ರೈತನ ತೋಟದ ಮನೆಗೆ ನುಗ್ಗಿದ ಚಿರತೆ ದಾಳಿಯಿಂದ, ಮೂರು ಮೇಕೆ ಒಂದು ಕುರಿ ಸಾವನ್ನಪ್ಪಿದೆ. ರೈತನಿಗೆ 40 ಸಾವಿರ ಮೌಲ್ಯ ನಷ್ಟ ಅಂದಾಜಿಸಲಾಗಿದೆ.
ಇಂದು ಬೆಳಗಾವಿ ಜಿಲ್ಲೆಯ 7 ಕಡೆ ಕೊರೊನಾ ಲಸಿಕೆಯ ಡ್ರೈರನ್ ನಡೆಯಲಿದೆ. ಬೆಳಗಾವಿಯ ಜಿಲ್ಲಾ ಆರೋಗ್ಯ ಇಲಾಖೆ, ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಕೊರೊನಾ ಲಸಿಕೆ ತಾಲೀಮು ಬಗ್ಗೆ ಬೇಜವಾಬ್ದಾರಿ ತೋರಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ಇನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕೊರೊನಾ ಲಸಿಕೆಯ ಡ್ರೈರನ್, ಸಿಬ್ಬಂದಿಗಳ ಬೇಜವಾಬ್ದಾರಿಗೆ ತಡವಾಗಿದೆ.
ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಭಾಗಗಳಲ್ಲಿ, ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು 46ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ರೈತರೊಂದಿಗೆ ಇಂದು 8ನೇ ಸುತ್ತಿನ ಸಭೆ ನಡೆಸಲಿದೆ. ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ.
ಭಾರತವು ಕಡಿಮೆ ಸಮಯದಲ್ಲಿ ಕೊರೊನಾ ಲಸಿಕೆ ತಯಾರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮೊದಲ ಸಾಲಿನ ಕೊವಿಡ್ ವಾರಿಯರ್ಸ್ಗಳಿಗೆ ಲಸಿಕೆ ನೀಡಲಾಗುವುದು. ಮುಂದಿನ ಕೆಲ ದಿನಗಳಲ್ಲಿ ದೇಶದ ಜನರಿಗೆ ಲಸಿಕೆ ನೀಡುವಲ್ಲಿ ನಾವು ಸಮರ್ಥರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಸಂಕ್ರಾಂತಿಗೆ ಯಾವುದೇ ವಿಶೇಷ ಮಾರ್ಗಸೂಚಿ ಇರುವುದಿಲ್ಲ. ಇರುವ ನಿಯಾಮಾವಳಿಗಳನ್ನು ಪಾಲನೆ ಮಾಡಬೇಕು. ಜನ ಜಂಗುಳಿ ಇಲ್ಲದೇ ಸರಳವಾಗಿ ಹಬ್ಬ ಆಚರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಗೆಗಳ ಸಾವು ಹಾಗೂ ಹಕ್ಕಿ ಜ್ವರದ ವಿಚಾರವಾಗಿ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಪಕ್ಷಿಗಳು ಸತ್ತಿರುವುದು ಬೇರೆ ಕಾರಣಗಳಿಂದ. ಆದರೂ ರಾಜ್ಯದಲ್ಲಿ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಲಾಗಿದೆ. ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಡಾ.ಕೆ.ಸುಧಾಕರ್ ಮಾತನಾಡಿದ್ದಾರೆ. ಪಕ್ಷಿಗಳು ಅನುಮಾನಾಸ್ಪದವಾಗಿ ಸತ್ತಿದ್ದರೆ ಅದನ್ನು ಮುಟ್ಟಬೇಡಿ. ಕೋಳಿ ಮೊಟ್ಟೆ, ಮಾಂಸ ತಿನ್ನುವಾಗ ಹೆಚ್ಚು ಬೇಯಿಸಿ ತಿನ್ನಿ ಎಂದು ಸೂಚನೆ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ-ಆಸಿಸ್ ತೃತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಇಂದು ನಡೆಯುತ್ತಿದೆ. ಆಸ್ಟ್ರೇಲಿಯಾ 338 ರನ್ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ 131 ರನ್ ಗಳಿಸಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 62 ರನ್ ನೀಡಿ, 4 ವಿಕೆಟ್ ಕಬಳಿಸಿದ್ದಾರೆ.
A bullet throw ☄️from @imjadeja gets the centurion Steve Smith OUT??
That will be the end of the Australian innings ??
Jadeja, pick of the bowlers with 4️⃣ wickets in his bag?#TeamIndia #AUSvIND
Scorecard ? https://t.co/tqS209srjN pic.twitter.com/Iu45T2fp8c
— BCCI (@BCCI) January 8, 2021
ರಾಜ್ಯದ 263 ಸ್ಥಳಗಳಲ್ಲಿ ಕೊವಿಡ್ ಲಸಿಕೆ ಡ್ರೈ ರನ್ ಇಂದು ನಡೆಯಲಿದೆ. ಈ ಬಗ್ಗೆ, ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದ್ದಾರೆ. ಆರೋಗ್ಯ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಖಾಸಗಿ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡುತ್ತೇನೆ. ಯಾವುದೇ ಲೋಪದೋಷವಿಲ್ಲದಂತೆ, ತಾಂತ್ರಿಕ ಸಮಸ್ಯೆ ಇಲ್ಲದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಕಾಫಿ, ಭತ್ತ ಬೆಳೆ ನಾಶವಾಗಿದೆ. ಕಾಫಿ ಒಣಗಿಸಲಾಗದೇ ರೈತರು ಪರದಾಡುವಂತಾಗಿದೆ. ಮಳೆಯ ಅಬ್ಬರಕ್ಕೆ ಕಾಫಿ ಫಸಲು ಉದುರುತ್ತಿದೆ. ಕೊಯ್ಲು ಮಾಡಿದ ಭತ್ತ ಗದ್ದೆಯಲ್ಲಿ ಕರಗುತ್ತಿದೆ. ಮಳೆಯ ಹೊಡೆತಕ್ಕೆ ರೈತರ ಬದುಕು ಮೂರಾಬಟ್ಟೆಯಾಗಿದೆ.
ದೇಶಾದ್ಯಂತ ಇಂದು 3ನೇ ಹಂತದ ಕೊರೊನಾ ಲಸಿಕೆ ಡ್ರೈ ರನ್ ನಡೆಯಲಿದೆ. ತಮಿಳುನಾಡು, ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸಚಿವ ಡಾ.ಹರ್ಷವರ್ಧನ್ ಲಸಿಕೆ ತಾಲೀಮು ವೀಕ್ಷಿಸಿದ್ದಾರೆ.
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಪ್ರಸ್ತುತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ.
Published On - 8:09 pm, Fri, 8 January 21