ಬೆಂಗಳೂರು: ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ KSDL ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪ (Madal Virupakshappa) ಕಳೆದ ಆರು ದಿನಗಳಿಂದ ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಈ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಕೇವಲ 4 ದಿನಕ್ಕೆ ಪ್ರಕರಣದ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೌದು…40ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದು ಹಾಗೂ ಮನೆಯಲ್ಲಿ 8 ಕೋಟಿ ರೂ. ಅಧಿಕ ಹಣ ಸಿಕ್ಕಿದ್ದರ ಕುರಿತು ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಆದ್ರೆ, ಇದರ ಮಧ್ಯೆ ಪ್ರಕರಣದ ತನಿಖಾಧಿಕಾರಿಗಳಾಗಿದ್ದ DySP ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ ಕುಮಾರಸ್ವಾಮಿಯವರನ್ನು ಬದಲಾವಣೆ ಮಾಡಲಾಗಿದೆ. ಇವರ ಬದಲಿಗೆ DySP ಆಂಥೋನಿ ಜಾನ್, ಇನ್ಸ್ಪೆಕ್ಟರ್ ಬಾಲಾಜಿ ಬಾಬು ಅವರನ್ನು ನೇಮಕ ಮಾಡಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ತನಿಖಾಧಿಕಾರಿ ಬದಲಾವಣೆ ಸಾಕಷ್ಟು ಅನುಮಾನ ಮೂಡಿಸಿದೆ.
ಶಾಸಕನ ಪುತ್ರ ಮಾಡಾಳ್ ಪ್ರಶಾಂತ್ ಈಗಾಗಲೇ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಆದ್ರೆ ಎ1 ಆರೋಪಿ ಶಾಸಕ ವಿರೂಪಾಕ್ಷಪ್ಪ ಮಾತ್ರ ಇನ್ನೂ ಭೂಗತರಾಗಿದ್ದಾರೆ. ಮಾಡಾಳ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು ಎಲ್ಲಿದ್ದಾರೆ ಎನ್ನುವ ಸುಳಿವೇ ಸಿಗುತ್ತಿಲ್ಲ. ಶಾಸಕ ನಾಪತ್ತೆಯಾಗಿ 6 ದಿನ ಕಳೆದಿದೆ ಆದ್ರೂ ಪೊಲೀಸರ ಕೈಗೆ ಸಿಗುತ್ತಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ರು. ಆದ್ರೆ ಮಾಡಾಳ್ ಮಾತ್ರ ನೋಟಿಸ್‌ಗೆ ಕೇರ್ ಮಾಡುತ್ತಿಲ್ಲ. ವಿಚಾರಣೆಗೂ ಹಾಜರಾಗಿಲ್ಲ.
ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚಾವತಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ವಿರೂಪಕಾಕ್ಷಪ್ಪಗೆ ದಿನಗಳು ಉರುಳಿದಂತೆ ಬಂಧನ ಭೀತಿ ಎದರಾಗಿದೆ. ಲೋಕಾ ಬಂಧನದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಮಾಡಾಳ್, ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ. ವಕೀಲರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಇಂದು(ಮಾ.07) ಮಾಡಾಳ್ ನಿರೀಕ್ಷಣಾ ಅರ್ಜಿ ವಿಚಾರಣೆ ನಡೆಯಲಿದೆ.