ವಾಯು ವಿಹಾರಕ್ಕಾಗಿ ರುದ್ರಭೂಮಿಯತ್ತ ಮುಖಮಾಡಿದ ಜನರು; ಹೂವಿನ ಗಿಡಗಳಿಂದ ಕಂಗೊಳಿಸುತ್ತಿದೆ ಉಡುಪಿಯ ಮುಕ್ತಿದಾಮ

|

Updated on: May 08, 2021 | 9:21 AM

2 ಎಕರೆ 30 ಸೆಂಟ್ಸ್ ಸರ್ಕಾರಿ ಜಾಗದಲ್ಲಿರುವ ಈ ರುದ್ರಭೂಮಿಯಲ್ಲಿ ಸಿಸಿ ಕ್ಯಾಮರಾ, ವಿಶಾಲವಾದ ಪಾರ್ಕಿಂಗ್, ಸ್ನಾನ ಗ್ರಹ, ಉಚಿತ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ.

ವಾಯು ವಿಹಾರಕ್ಕಾಗಿ ರುದ್ರಭೂಮಿಯತ್ತ ಮುಖಮಾಡಿದ ಜನರು; ಹೂವಿನ ಗಿಡಗಳಿಂದ ಕಂಗೊಳಿಸುತ್ತಿದೆ ಉಡುಪಿಯ ಮುಕ್ತಿದಾಮ
ಕಟಪಾಡಿ ಸಮೀಪದ ಸರಕಾರಿ ಗುಡ್ಡೆ ಹಿಂದು ರುದ್ರಭೂಮಿ
Follow us on

ಉಡುಪಿ: ರುದ್ರಭೂಮಿ ಎಂದರೆ ಜೀವನದ ಕೊನೆಯ ಯಾತ್ರೆ ಮುಗಿಸುವ ಮುಕ್ತಿದಾಮ ಎಂದು ಹೇಳುತ್ತಾರೆ. ಹೀಗಾಗಿ ರುದ್ರಭೂಮಿ ಪ್ರದೇಶದಲ್ಲಿ ಕ್ರಿಯಾ ದಿನವನ್ನು ಹೊರತು ಪಡಿಸಿ ಉಳಿದ ದಿನ ಜನಸಂಚಾರ ವಿರಳ. ಆದರೆ ಉಡುಪಿಯ ಕಟಪಾಡಿ ಸಮೀಪದ ಸರಕಾರಿ ಗುಡ್ಡೆ ಹಿಂದು ರುದ್ರಭೂಮಿ ಇದಕ್ಕೆ ತದ್ವಿರುದ್ಧವಾಗಿದ್ದು, ರುದ್ರಭೂಮಿಯಲ್ಲಿ ದಿನನಿತ್ಯ ನೂರಾರು ಜನರು ಬಂದು ವಿಶ್ರಾಂತಿ ಪಡೆಯುತ್ತಾರೆ.

ಕಟಪಾಡಿ ಸಮೀಪದ ಈ ರುದ್ರಭೂಮಿಯಲ್ಲಿ ಸಂಜೆ ಆಗುತ್ತಿದ್ದಂತೆ ಸುತ್ತಮುತ್ತಲ ಜನರು ವಾಯುವಿಹಾರಕ್ಕೆ ಬರುತ್ತಾರೆ. ಈ ರುದ್ರಭೂಮಿಯಲ್ಲಿ ಆರಾಮವಾಗಿ ಕೂತು ಮಾತನಾಡಲು ಆಸನದ ವ್ಯವಸ್ಥೆಗಳಿವೆ. ವಿವಿಧ ಜಾತಿಯ ಹೂವಿನ ಗಿಡಗಳ ಜೊತೆಗೆ ಆಯುರ್ವೇದಿಕ್ ಸಂಬಂಧಪಟ್ಟ ಸಸಿಗಳನ್ನು ಕೂಡ ಇಲ್ಲಿ ಕಾಣಬಹುದು. ಇನ್ನು ಪಕ್ಷಿಗಳ ಬಾಯಾರಿಕೆ ನೀಗಿಸುವ ನಿಟ್ಟಿನಲ್ಲಿ ಮಡಿಕೆಯಲ್ಲಿ ನೀರು ಇಡಲಾಗಿದೆ. ಈ ಕಾರಣಕ್ಕೆ ಜನರು ಈ ಪ್ರದೇಶಕ್ಕೆ ಆಕರ್ಷಿತರಾಗಿ ಸಂಜೆ ವೇಳೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

2 ಎಕರೆ 30 ಸೆಂಟ್ಸ್ ಸರ್ಕಾರಿ ಜಾಗದಲ್ಲಿರುವ ಈ ರುದ್ರಭೂಮಿಯಲ್ಲಿ ಸಿಸಿ ಕ್ಯಾಮರಾ, ವಿಶಾಲವಾದ ಪಾರ್ಕಿಂಗ್, ಸ್ನಾನ ಗ್ರಹ, ಉಚಿತ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಕಟಪಾಡಿ ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್ ಚಾಲಕ ಮತ್ತು ದಾರಿದೀಪ ನಿರ್ವಹಣೆ ಮಾಡುವ ಉದ್ಯೋಗಿ ಕಿಶೋರ್ ತನ್ನ ಕೆಲಸದ ನಡುವೆಯೂ ಇಂದು ರುದ್ರಭೂಮಿಯ ನಿರ್ವಹಣೆ ನಡೆಸುತ್ತಿದ್ದಾರೆ. ಇನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ರಾವ್ ಇವರ ಜೊತೆಗೂಡಿ ಈ ರುದ್ರಭೂಮಿಯ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.

ರುದ್ರಭೂಮಿ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಕಟಪಾಡಿ ಗ್ರಾಮ ಪಂಚಾಯತ್ ವಿವಿಧ ಇಲಾಖೆಯ ಅನುದಾನದ ಜೊತೆಗೆ ದಾನಿಗಳ ಸಹಕಾರದೊಂದಿಗೆ ಹಿಂದೂ ರುದ್ರಭೂಮಿಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಈ ಆಂಬುಲೆನ್ಸ್​ನಲ್ಲಿ ಕಡುಬಡವರಿಗೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾವನ್ನಪ್ಪಿದವರ ದಹನ ಕಾರ್ಯವನ್ನು ಕೂಡ ಇಲ್ಲಿ ಮಾಡಲಾಗುತ್ತದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ಬೂಬಕ್ಕರ್ ಹೇಳಿದ್ದಾರೆ.

ಇದನ್ನೂ ಓದಿ:

ಏಳು ವರ್ಷಗಳಿಂದ ಸ್ಮಶಾನದಲ್ಲೇ ವಾಸ; ಮಾಜಿ ಯೋಧನ ಕಾರ್ಯಕ್ಕೆ ಉದ್ಯಾನವಾದ ರುದ್ರಭೂಮಿ

ಹೆಣ ಸುಡೋಕು ಹೆಣಗಾಟ ಶುರು? ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದ ಚಿತಾಗಾರ ಸಿಬ್ಬಂದಿ!