ಉಡುಪಿ: ಕಿರು ತೆರೆಯಲ್ಲಿ ಖ್ಯಾತಿಗಳಿಸಿ, ಬಿಗ್ ಬಾಸ್ ಸೀಸನ್ 7ನಲ್ಲಿ ಫೈನಲ್ ವರೆಗೂ ಹೋಗಿದ್ದ ಕರಾವಳಿ ಕುವರಿ ಭೂಮಿ ಶೆಟ್ಟಿ, ಕೊರೊನಾ ಬಂದಿದ್ದೇ ತಡ ಬೆಂಗಳೂರಿಂದ ತವರೂರಿಗೆ ಬಂದಿದ್ದಾರೆ. ಆರ್ಕ್ ಲೈಟ್‌ನಿಂದ ದೂರವಾಗಿ ಪ್ರಕೃತಿಯಲ್ಲಿ ಕೃಷಿ ಮೂಲಕ ಖುಷಿಯಾಗಿದ್ದಾರೆ.
ಹೌದು, ಸದ್ಯ ಸಿಲಿಕಾನ್ ಸಿಟಿಯಿಂದ ದೂರದ ತಮ್ಮ ಹುಟ್ಟೂರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬೀಜೂರು ಗ್ರಾಮಕ್ಕೆ ಬಂದಿದ್ದಾರೆ. ಬೀಜೂರಿನ ಗಂಟಿಹೊಳೆಯಿಂದ ದೂರದ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ನಟನೆ ಅಂತ ಸೆಟ್ಲ್ ಆಗಿದ್ದರು. ಆದ್ರೆ ಬೆಂಗಳೂರಿನಲ್ಲಿ ಲಾಕ್ ಡೌನ್ ಡಿಕ್ಲೇರ್ ಆಗುತ್ತಲೇ ಊರಿಗೆ ಬಂದಿದ್ದಾರೆ ಭೂಮಿ ಶೆಟ್ಟಿ.
ಹೀಗೆ ಊರಿಗೆ ಬಂದವಳು ನೀರಿಗೆ ಬರದೇ ಇರುತ್ತಾಳಾ ಎನ್ನುಂತೆ ಊರಿಗೆ ಬಂದ ಭೂಮಿ ಶೇಟ್ಟಿ, ಸುಮ್ಮನೆ ಕಾಲ ಕಳೆಯುವ ಬದಲು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಭೂಮಿ ಶೆಟ್ಟಿ ಅವರ ಅಜ್ಜ ಭತ್ತದ ಬೇಸಾಯ ಮಾಡುತ್ತಾರೆ. ಹೀಗಾಗಿ ಎಲ್ಲರೂ ಮನೆಯಲ್ಲೇ ಇದ್ದು ಯಾಕೆ ವ್ಯವಸಾಯದಲ್ಲಿ ತೊಡಗಬಾರದು ಅಂತಾ ಭೂಮಿ ಶೆಟ್ಟಿ ಅವರೇ ಮುಂದಾಳತ್ವ ವಹಿಸಿ, ಮನೆಯವರ ಸಹಕಾರದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಭೂಮಿ ಶೆಟ್ಟಿ ತಾವೇ ಸ್ವತಃ ಗೊಬ್ಬರ ಹೊತ್ತು ನಾಟಿ ಮಾಡುತ್ತಾರೆ. ಬೆಳಗಿನಿಂದ ಸಂಜೆವರೆಗೂ ಪಕ್ಕಾ ಕೃಷಿಕಳಂತೆ ಹೊಲದಲ್ಲಿ ದುಡಿದು ಬೆವರು ಸುರಿಸುತ್ತಿದ್ದಾರೆ. ಹೀಗೆ ಕೃಷಿಯಲ್ಲಿ ತೊಡಗಿಸಿಕೊಂಡ ಅಪರೂಪದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಏನೇ ಇರಲಿ ಕೊರೊನಾದ ಸಂಕಷ್ಟದ ಸಮಯದಲ್ಲಿ ಸಿಟಿ ಬಿಟ್ಟು ಹಳ್ಳಿಗೆ ಬಂದ ಭೂಮಿ ಶೇಟ್ಟಿ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿರೋದು ಇತರರಿಗೂ ಮಾದರಿಯನ್ನಬಹುದು -ಹರೀಶ್ ಪಾಲೆಚ್ಚಾರ್
Published On - 8:04 pm, Tue, 21 July 20