ಕೇರಳ ದಂಪತಿಯ ಸಾಂಸರಿಕ‌ ಬಿಕ್ಕಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು! ಸುಶಿಕ್ಷಿತ ಉಡುಪಿಯಲ್ಲಿ ಇದೆಂಥಾ ಪ್ರಸಂಗ!?

| Updated By: ಸಾಧು ಶ್ರೀನಾಥ್​

Updated on: Nov 04, 2023 | 1:10 PM

ನಾನಾ ರಾಜ್ಯಗಳು ಹಾಗೂ ರಾಜ್ಯದ ನಾನಾ ಮೂಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಕರಾವಳಿ ಜಿಲ್ಲೆ ಉಡುಪಿಯಲ್ಲಿ, ಸಾಂಸಾರಿಕ ಗದ್ದಲವೊಂದು ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಕೇರಳ ದಂಪತಿಯ ಸಾಂಸರಿಕ‌ ಬಿಕ್ಕಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು! ಸುಶಿಕ್ಷಿತ ಉಡುಪಿಯಲ್ಲಿ ಇದೆಂಥಾ ಪ್ರಸಂಗ!?
ಕೇರಳ ದಂಪತಿಯ ಸಾಂಸರಿಕ‌ ಬಿಕ್ಕಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು!
Follow us on

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು, ಈ ಸ್ಟೋರಿಗೆ ಹೇಳಿ ಮಾಡಿಸಿದಂತಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ನಡೆಸುವ ಕೇರಳ ಮೂಲದ ದಂಪತಿಗಳ ಸಾಂಸರಿಕ‌ ಬಿಕ್ಕಟ್ಟಿನಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು ಕವಿದಂತಾಗಿದೆ. ಕಾಲೇಜಿನ ಮುಖ್ಯಸ್ಥರು ಯಾರು? ಎಂಬ ವಿಷಯ ಇತ್ಯರ್ಥಕ್ಕಾಗಿ ಶುರುವಾಗಿರುವ ಗಲಾಟೆ ತಾರಕಕ್ಕೇರಿ ಇಂದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಭಾರಿ ಗದ್ದಲ ಉಂಟಾಯಿತು.

ನಾನು ಈ ಸಂಸ್ಥೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದಿರುವ ಈ ಮಹಿಳೆಯ ಹೆಸರು ಮಹಿಮಾ, ಮೂಲತಃ ಮುಸ್ಲಿಂ ಆದರೂ, ಮಧು ಎಂಬವರ ಜೊತೆ ಮದುವೆಯಾದ ಬಳಿಕ ತಮ್ಮ ಹೆಸರನ್ನು ಮಹಿಮಾ ಎಂದು ಬದಲಾಯಿಸಿಕೊಂಡಿದ್ದಾರೆ. ಎರಡು ದಶಕದ ದಾಂಪತ್ಯ ಜೀವನದ ಜೊತೆಗೆ, ಒಂದುವರೆ ದಶಕದಿಂದ ಜಂಟಿಯಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕೇರಳದಲ್ಲಿ ನೋಂದಣಿ ಮಾಡಿಕೊಂಡಿರುವ ಈ ಸಂಸ್ಥೆ ಸದ್ಯ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಸಮೀಪದ ಮಧುವನದಲ್ಲಿ 18 ಎಕರೆ ವಿಸ್ತಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ದುರಾದೃಷ್ಟವಷಾತ್ ಕಳೆದ ಎರಡು ವರ್ಷಗಳಿಂದ ಇವರ ದಾಂಪತ್ಯದಲ್ಲಿ ಬಿರುಕು ಕಂಡು ಬಂದಿದೆ. ಪತಿಗೆ ಅಕ್ರಮ ಸಂಬಂಧ ಇರುವುದೇ ಇದಕ್ಕೆ ಕಾರಣ ಎಂದು ಮಹಿಮಾ ಆರೋಪಿಸಿದ್ದಾರೆ. ಹಾಗಾಗಿ ಆತನನ್ನು ಕಾಲೇಜು ಚೇರ್ಮನ್ ಹುದ್ದೆಯಿಂದ ಹೊರ ಹಾಕಿರುವುದಾಗಿ ಹೇಳುತ್ತಾರೆ. ಈ ಸಂಸ್ಥೆಗೆ ನಾನೇ ಅಧ್ಯಕ್ಷೆ, ಹೊಸ ಆಡಳಿತ ಮಂಡಳಿಯ ಮೂಲಕ ಕಾಲೇಜು ನಡೆಸುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇಂದು ಕಾಲೇಜಿನ ನೂರಾರು ವಿದ್ಯಾರ್ಥಿಗಳ ಬೆಂಬಲದೊಂದಿಗೆ, ಕ್ಯಾಂಪಸ್ ಗೆ ಬಂದ ಮಹಿಮಾಗೆ ಪೊಲೀಸರು ಅಡ್ಡಿಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು. ಈ ವೇಳೆ ಕ್ಯಾಂಪಸ್ ನಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ನರ್ಸಿಂಗ್, ಏವಿಯೇಷನ್ ಸೇರಿದಂತೆ ಹಲವು ಪದವಿಗಳನ್ನು ಕಲಿಯುತ್ತಿದ್ದಾರೆ. ಆದರೆ ದಂಪತಿಯ ನಡುವಿನ ಕಚ್ಚಾಟ ಆರಂಭವಾದ ನಂತರ, ಮಕ್ಕಳ ಭವಿಷ್ಯ ಮಂಕಾಗಿದೆ. ಕಾಲೇಜಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುತ್ತಾರೆ. ಪಾಠದ ವ್ಯವಸ್ಥೆ ಸರಿಯಾಗಿಲ್ಲ, ಸಂಸ್ಥೆ ಬಿಟ್ಟು ಹೋದರೆ ಟಿ ಸಿ ಕೊಡಲ್ಲ ಎಂದು ಊರು ಮತ್ತು ಪರ ಊರಿನ ವಿದ್ಯಾರ್ಥಿಗಳು ದೂರಿಕೊಂಡಿದ್ದಾರೆ. ಇನ್ನೂಈ ಕಾಲೇಜಿಗೆ ನಾನೇ ಅಧ್ಯಕ್ಷೆ, ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಕಸಿದುಕೊಂಡು ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡದೆ ಮಕ್ಕಳ ಭವಿಷ್ಯದ ಜೊತೆ ಮಧು ಚೆಲ್ಲಾಟವಾಡುತ್ತಿದ್ದಾನೆ ಎಂದು ಮಹಿಮಾ ಆರೋಪಿಸಿದರು.

ಮಹಿಮಾ ಅವರ ಕಾಲೇಜು ಪ್ರವೇಶವನ್ನು ಸದ್ಯ ಆಡಳಿತ ನಡೆಸುತ್ತಿರುವ ಮಂಡಳಿಯವರು ವಿರೋಧಿಸಿದ್ದಾರೆ. ಕೌಟುಂಬಿಕ ಕಲಹವನ್ನು ಕಾಲೇಜಿಗೆ ತಂದು ಗದ್ದಲ ಎಬ್ಬಿಸುತ್ತಾರೆ. ಮಹಿಮಾ ಅವರ ಆರೋಪದಲ್ಲಿ ಹುರುಳಿಲ್ಲ, ನಕಲಿ ದಾಖಲೆ ಇಟ್ಟುಕೊಂಡು ತಾನೇ ಅಧ್ಯಕ್ಷೆ ಎಂದು ಹೇಳುತ್ತಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು ನ್ಯಾಯ ನಮ್ಮ ಪರವಾಗಿದೆ ಎಂದು ಹಾಲಿ ಅಧ್ಯಕ್ಷ ಮಧು ಅವರ ಒಡನಾಡಿಗಳು ಹೇಳುತ್ತಾರೆ.

ಕೇರಳ ಸೇರಿದಂತೆ ಅನೇಕ ರಾಜ್ಯಗಳು ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಕರಾವಳಿ ಜಿಲ್ಲೆ ಉಡುಪಿಯಲ್ಲಿ, ಸಾಂಸಾರಿಕ ಗದ್ದಲವೊಂದು ಶಿಕ್ಷಣ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.