ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 11, 2024 | 10:28 PM

ಕರಾವಳಿ ಜಿಲ್ಲೆಗಳಲ್ಲಿ ನಾಗಾರಾಧನೆಗೆ ಮಹತ್ವದ ಸ್ಥಾನವಿದೆ. ಇಲ್ಲಿನ ಎಲ್ಲಾ ಕುಟುಂಬಗಳಿಗೂ ಮೂಲನಾಗ ದೇವರ ಆರಾಧನೆ ಖಡ್ಡಾಯ. ವೈದಿಕರ ಮೂಲಕ ನಾಗನ ಪೂಜೆ ಮಾಡಿಸೋದು ಪದ್ದತಿ. ಆದರೆ, ಉಡುಪಿ ಜಿಲ್ಲೆಯ ಕುತ್ಯಾರಿನಲ್ಲಿ ಹಿಂದುಳಿದ ಮುಗ್ಗೇರ ಜನಾಂಗದವರೇ ನಡೆಸುವ ಒಂದು ನಾಗಾರಾಧನೆ ಇದೆ. ತುಳುನಾಡಿನ ಮೂಲಜನಾಂಗದವರಾದ ಇವರು ನಡೆಸುವ ಈ ಜನಪದೀಯ ನಾಗಪೂಜೆ ವಿಶಿಷ್ಟವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ; ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆಯಲ್ಲಿದೆ ವಿಶಿಷ್ಟ ಹರಕೆ
ಮುಗ್ಗೇರ ಜನಾಂಗ ಆರಾಧಿಸುವ ಈ ನಾಗಾರಾಧನೆ
Follow us on

ಉಡುಪಿ, ಜೂ.11: ಜಿಲ್ಲೆಯ ಕುತ್ಯಾರಿನಲ್ಲಿ ಮುಗ್ಗೇರ(Mugger) ಸಮಾಜದವರು ಆರಾಧಿಸುವ ಒಂದು ನಾಗಬನ ಇದಾಗಿದ್ದು, ಪ್ರಕೃತಿಯ ಪೂಜೆ ನಾಗಾರಾಧನೆ(Nagaradhane)ಯ ಉದ್ದೇಶವಾಗಿದೆ. ದಟ್ಟ ಕಾಡಿನ ನಡುವೆ ಇರುವ ಈ ನಾಗಶಿಲೆಗಳಿಗೆ ನಾಗಬನ ಎನ್ನುತ್ತಾರೆ. ಭಕ್ತಿಯ ಜೊತೆಗೆ ಈ ಆರಾಧನೆಯಲ್ಲಿ ಒಂದಿಷ್ಟು ನಿಗೂಢತೆಯೂ ಅಡಗಿದೆ. ಈ ಬನದಲ್ಲಿ ನಾಗನ ಕಲ್ಲುಗಳ ಜೊತೆ ಅದೆಷ್ಟೋ ಮಡಕೆಗಳಿವೆ. ಇದು ಈ ಬನದ ವಿಶಿಷ್ಟ ಹರಕೆ. ಇದಕ್ಕೆ ಮುರಿ ಎಂದು ಕರೆಯುತ್ತಾರೆ. ಎಂತಹ ಸಂಕಷ್ಟ ಎದುರಾದರೂ ಮುರಿ ಹರಕೆ ಹೇಳಿಕೊಂಡರೆ ಪರಿಹಾರ ಶತಸಿದ್ಧ ಎನ್ನುವ ನಂಬಿಕೆ ಇಲ್ಲಿನ ಭಕ್ತರಿಗಿದೆ.

ನಾಗರ ಪಂಚಮಿಯಂದು ಇಲ್ಲಿ ನಡೆಯಲ್ಲ ಪೂಜೆ

ಇಲ್ಲಿರುವ ನಾಗಬನಕ್ಕೆ ವರ್ಷದ ಮೊದಲ ನಾಗಾರಾಧನೆ ನಡೆಯುತ್ತದೆ. ಸಾಮಾನ್ಯವಾಗಿ ನಾಗರ ಪಂಚಮಿಯಂದು ಎಲ್ಲೆಡೆ ನಾಗನನ್ನು ಪೂಜಿಸಲಾಗುತ್ತದೆ. ಆದರೆ, ನಾಗರ ಪಂಚಮಿಯ ದಿನ ಇಲ್ಲಿ ಯಾವುದೇ ಪೂಜೆ ನಡೆಯುವುದಿಲ್ಲ. ಇಲ್ಲಿ ನಾಗನಿಗೆ ಪೂಜೆ ನಡೆಸುವವರು ಹಿಂದುಳಿದ ಮುಗೇರ ಸಮಾಜದವರೇ ಹೊರತು ವೈದಿಕರಲ್ಲ. ಇಲ್ಲಿಗೆ ಯಾರೇ ಬಂದರೂ ಇವರ ಮೂಲಕವೇ ಪೂಜೆ ನಡೆಯಬೇಕು.

ಇದನ್ನೂ ಓದಿ:ನಾಗಮಂಡಲದ ಮೂಲಸ್ವರೂಪ ಹಾಲಿಟ್ಟು ಸೇವೆ; ನಾಗಾರಾಧನೆ ಬಗ್ಗೆ ಇಲ್ಲಿದೆ ವಿವರ ಗಮನಿಸಿ

ವರ್ಷದಲ್ಲೊಮ್ಮೆ ಮಾತ್ರ ಈ ಬನಕ್ಕೆ ಪ್ರವೇಶ

ವರ್ಷದಲ್ಲೊಮ್ಮೆ ಮಾತ್ರ ಈ ಬನಕ್ಕೆ ಪ್ರವೇಶವಿರುತ್ತದೆ. ದೇವರಿಗೆ ಯಾವುದೇ ಜಾತಿ ಬೇಧಗಳಿಲ್ಲ, ಅವನ ಮುಂದೆ ಎಲ್ಲರೂ ಸಮಾನರು ಅನ್ನೋದು ಈ ಆರಾಧನೆಯಿಂದ ಅರಿವಾಗುತ್ತದೆ. ಭಕ್ತರು ಈ ನಾಗಬನಕ್ಕೆ ಬಂದು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ಪ್ರಾರ್ಥನೆ ಸಲ್ಲಿಸಿ ಹೋಗುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಹರಕೆ ಸಲ್ಲಿಸಿದವರ ಸಂಕಷ್ಟ ದೂರವಾದರೆ ಮುರಿ ಸೇವೆಯನ್ನು ಸಲ್ಲಿಸುತ್ತಾರೆ. ಮುರಿ ಎಂದರೆ ನಾಗನ ಹೆಡೆಯನ್ನು ಹೊಂದಿರುವ ಮಡಕೆ. ಈ ಹರಕೆ ಹೊತ್ತವರು ಶ್ರದ್ಧಾ ಭಕ್ತಿಗಳಿಂದ ತಲೆಯಲ್ಲಿ ಮಡಿಕೆ ಹೊತ್ತು ತರುತ್ತಾರೆ. ಈ ಮಡಕೆಯನ್ನು ಸದ್ಯ ಒಂದು ಕುಂಬಾರ ಮನೆಯವರು ಮಾತ್ರ ತಯಾರಿಸುತ್ತಾರೆ.

ಕಾಯಿಲೆಗಳು ವಾಸಿ

ಇದರ ತಯಾರಿಕೆಗೂ ಕೆಲವೊಂದು ನಿಯಮವಿದೆ. ಮಡಕೆಯನ್ನು ತಯಾರಿಸಿದ ಕುಂಬಾರ ಕೆಲವು ವಿಧಿ ವಿಧಾನಗಳನ್ನು ನೆರವೇರಿಸಿ ಹರಕೆ ಹೊತ್ತವರ ತಲೆಗಿಡುತ್ತಾರೆ. ಬಳಿಕ ನಾಗಬನಕ್ಕೆ ತಂದು ಮುರಿಯನ್ನು ನಾಗನ ಕಲ್ಲಿನ ಸಮೀಪ ಇಟ್ಟು ಪೂಜಿಸಲಾಗುತ್ತೆ. ಇಲ್ಲಿ ಮುರಿ ಸೇವೆಯನ್ನು ಒಪ್ಪಿಸಿ ಅದೆಷ್ಟೋ ಜನರ ಕಾಯಿಲೆಗಳು ವಾಸಿಯಾಗಿದ್ದು, ಸಂಕಷ್ಟಗಳು ದೂರವಾಗಿವೆ. ಅಧುನಿಕತೆ ಬೆಳೆದಂತೆ ನಾಗನ ಅರಾಧನೆ ಕ್ರಮ ವೈಧಿಕ ಪದ್ದತಿಯಂತೆ ನಡೆಯುತ್ತದೆ.

ನಾಗಮಂಡಲದ ಸ್ವರೂಪ ಪಡೆದುಕೊಂಡು ವೈಧಿಕರು ವೈಭವದಿಂದ ನಡೆಸಿಕೊಂಡು ಬಂದರೂ ಮೂಗೇರ ಜನಾಂಗ ಮೂಲ ಅಚರಣೆಯನ್ನು ಉಳಿಸಿಕೊಂಡಿದೆ. ಇಂದಿನ ದಿನಗಳಲ್ಲಿ ಪ್ರಾಕೃತಿಕ ಬನಗಳೇ ಮಾಯವಾಗಿವೆ. ನಾಗ ಮತ್ತು ಪ್ರಕೃತಿಯ ಸಂಯೋಗದ ವಿಶಿಷ್ಟ ಆರಾಧನಾ ತಾಣ ಬನ. ಸದ್ಯ ಕಾಂಕ್ರೀಟೀಕರಣದಿಂದ ಬನಗಳು ಕಾಣದಾಗಿವೆ. ಈ ಸಂದರ್ಭದಲ್ಲಿ ಪ್ರಕೃತಿಯ ಮಡಿಲಲ್ಲಿರುವ ಈ ಕುತ್ಯಾರಿನ ನಾಗಬನದ ವಿಶಿಷ್ಟ ರೀತಿಯ ಹರಕೆ ಮತ್ತು ಆರಾಧನಾ ಪದ್ಧತಿ ವಿಶೇಷವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ