ನಾಗಮಂಡಲದ ಮೂಲಸ್ವರೂಪ ಹಾಲಿಟ್ಟು ಸೇವೆ; ನಾಗಾರಾಧನೆ ಬಗ್ಗೆ ಇಲ್ಲಿದೆ ವಿವರ ಗಮನಿಸಿ

ಆವೇಶಭರಿತ ನಾಗಪಾತ್ರಿ ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ಅದ್ದೂರಿ ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ.

ನಾಗಮಂಡಲದ ಮೂಲಸ್ವರೂಪ ಹಾಲಿಟ್ಟು ಸೇವೆ; ನಾಗಾರಾಧನೆ ಬಗ್ಗೆ ಇಲ್ಲಿದೆ ವಿವರ ಗಮನಿಸಿ
ನಾಗಾರಾಧನೆ
Follow us
TV9 Web
| Updated By: preethi shettigar

Updated on: Dec 13, 2021 | 11:54 AM

ಉಡುಪಿ: ನಂಬಿಕೆ ಮತ್ತು ಬುದ್ಧಿವಂತಿಕೆ ಎರಡೂ ಮನೋಧರ್ಮಗಳು ಬಲವಾಗಿ ಬೇರೂರಿರುವ ಸ್ಥಳ ಕರಾವಳಿ. ಕರಾವಳಿಯ ನಾಗಮಂಡಲ ಆಚರಣೆ ಇಲ್ಲಿನ ಜನರ ನಂಬಿಕೆಯ ಪ್ರತೀಕ. ನಾಗ ದೇವರ ಪ್ರೀತ್ಯರ್ಥ ನಡೆಯುವ ಈ ನಾಗಾರಾಧನೆ ಒಂದು ಅದ್ದೂರಿ ಆಚರಣೆ. ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎನ್ನುತ್ತಾರೆ. ಉಡುಪಿಯ ಶ್ರೀ ಕ್ಷೇತ್ರ ಹೆಬ್ರಿಯಲ್ಲಿ ನಡೆದ ಅಪರೂಪದ ನಾಗಾರಾಧನೆಯ ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.

ಕರಾವಳಿ ಭೂ ಪ್ರದೇಶದ ಒಡೆಯ ನಾಗದೇವರು ಎನ್ನುವುದು ಇಲ್ಲಿನ ಬಲವಾದ ನಂಬಿಕೆ. ಮನುಷ್ಯರನ್ನು ಬಾಧಿಸುವ ಪ್ರತಿಯೊಂದು ದೋಷಗಳಿಗೂ ನಾಗ ದೇವರೇ ಕಾರಣ ಎನ್ನುವುದು ಇಲ್ಲಿನ ಜನರ ಮಾತು. ಹಾಗಾಗಿ ಬಗೆಬಗೆಯಲ್ಲಿ ನಾಗದೇವರ ಆರಾಧನೆ ನಡೆಸಲಾಗುತ್ತದೆ. ನಾಗಾರಾಧನೆಯ ಅತ್ಯುನ್ನತ ಆಚರಣೆ ಅಂದರೆ ನಾಗಮಂಡಲ. ಲೋಕಕಲ್ಯಾಣಾರ್ಥ ನಡೆಯುವ ನಾಗಮಂಡಲ ಹಲವು ವೈಶಿಷ್ಟ್ಯಗಳ ಆಗರವಾಗಿದೆ. ನಾಗದೇವರ ಮುಂದೆ ನಡೆಸುವ ನರ್ತನ ಸೇವೆ ನಾಗಮಂಡಲದ ವಿಶೇಷ.

ಆವೇಶಭರಿತ ನಾಗಪಾತ್ರಿ ಮತ್ತು ನಾಗಕನ್ನಿಕೆ ವೇಷಧಾರಿಯ ನರ್ತನ ನಾಗಮಂಡಲದ ಪ್ರಧಾನ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ಅದ್ದೂರಿ ನಾಗಮಂಡಲದ ಮೂಲಸ್ವರೂಪವನ್ನು ಹಾಲಿಟ್ಟು ಸೇವೆ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ. ಉಡುಪಿಯ ಸಗ್ರಿ ಕ್ಷೇತ್ರದಲ್ಲಿ ನಾಗದೇವರ ಸನ್ನಿಧಾನದಲ್ಲಿ ನಡೆದ ಅಪರೂಪದ ಹಾಲಿಟ್ಟು ಸೇವೆ ಕಂಡು ಭಕ್ತರು ಪುನೀತರಾದರು.

ಹಾಲಿಟ್ಟು ಸೇವೆ ಎಂದರೇನು? ಜೀವಂತ ಜನಪದದ ಸಾಕ್ಷಿರೂಪ ಈ ಹಾಲಿಟ್ಟು ಸೇವೆ. ಪ್ರಾಕೃತಿಕ ಅಲಂಕಾರ, ಪಾಕೃತಿಕ ಬಣ್ಣದ ಮಂಡಲದ ನಡುವೆ ಮಧ್ಯರಾತ್ರಿಯಲ್ಲಿ ನಡೆಯುವ ಈ ದೇವರ ಸೇವೆಯನ್ನು ಕಾಣಲು ನೂರಾರು ಜನರು ಬರುತ್ತಾರೆ. ಪಾಕೃತಿಕ ಬಣ್ಣಗಳಿಂದ ರಚಿಸುವ ನಾಗಮಂಡಲವೆಂಬ ಮಹಾರಂಗವಲ್ಲಿಯ ರಚನೆಗೆ ಅನುಗುಣವಾಗಿಯೇ ದೇವರು ಕುಣಿಯುತ್ತಾರೆ. ನಾಗದೇವರ ಸಂಪ್ರೀತಿಗೆ ಈ ಕುಣಿತ ಸೇವೆ ನಡೆಸಲಾಗುತ್ತದೆ. ಪೂಜಾ ಪದ್ಧತಿಯ ಜೊತೆಗೆ ಪ್ರದರ್ಶನ ಕಲೆಯಾಗಿಯೂ ನಾಗಮಂಡಲ ಗಮನಸೆಳೆಯುತ್ತದೆ. ಕಂಚಿನ ಡಮರುಗ ಹಿಡಿದು ದೇವರನ್ನು ಕುಣಿಸುವ ನಾಗಕನ್ನಿಕೆ ಮತ್ತು ಹಿಂಗಾರದ ಹೂವಿನ ರಾಶಿಯಲ್ಲಿ ಮಿಂದೇಳುವ ನಾಗಪಾತ್ರಿಯ ಆವೇಶ ಮೈ ನವಿರೇಳಿಸುವಂತಿರುತ್ತದೆ.

ಇಷ್ಟೊಂದು ಅದ್ದೂರಿ ಜನಪದ ಆಚರಣೆ ಬೇರೆಲ್ಲೂ ಕಾಣಸಿಗುವುದಿಲ್ಲ ಎನ್ನುವುದು ಈ ಭಾಗದ ಜನರ ಮಾತು. ವೈದಿಕತೆಯ ಪ್ರಭಾವದಿಂದ ನಾಗಮಂಡಲದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಜನಸಾಮಾನ್ಯರು ಈ ಸೇವೆಯನ್ನು ನಡೆಸುವುದು ದುಸ್ಥರವೆಂದೇ ಹೇಳಬೇಕು. ಲೋಕಕಲ್ಯಾಣಾರ್ಥ ಸಾಮೂಹಿಕ ಧನಸಂಗ್ರಹದ ಮೂಲಕ ಈಗಲೂ ಕರಾವಳಿಯಲ್ಲಿ ಈ ಅಪರೂಪದ ಆಚರಣೆ ನಡೆಸಲಾಗುತ್ತದೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ: ಮಂಗಳೂರು: ನಾಗನ ಕಲ್ಲಿಗೆ ದುಷ್ಕರ್ಮಿಗಳಿಂದ ಹಾನಿ; ಬಸವರಾಜ ಬೊಮ್ಮಾಯಿಗೆ ವಿಹೆಚ್​ಪಿ ಮುಖಂಡ ಎಚ್ಚರಿಕೆ

ಪ್ರತ್ಯಂಗೀರಾದೇವಿ ಸನ್ನಿಧಿಯಲ್ಲಿ ನಡೆಯುತ್ತದೆ ಒಣ ಮೆಣಸಿನಕಾಯಿ ಹೋಮ; ವಿಶೇಷ ಪೂಜೆಯಲ್ಲಿ ಶಬರಿಮಲೈ ಪ್ರಧಾನ ಅರ್ಚಕರು ಭಾಗಿ