ಉಡುಪಿ, ಅ.10: ಚಿತ್ರದುರ್ಗದಲ್ಲಿ ಆರಂಭವಾದ ವಿಶ್ವ ಹಿಂದೂ ಪರಿಷತ್- ಬಜರಂಗದಳ (VHP) ಬೃಹತ್ ಶೌರ್ಯ ಯಾತ್ರೆಯು ಉಡುಪಿಯಲ್ಲಿ ನಡೆಯುವು ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಳ್ಳಲಿದೆ. ಆದರೆ, ಈ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಹಿನ್ನೆಲೆ ವಿಎಚ್ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell) ಅವರಿಗೆ ಉಡುಪಿ (Udupi) ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ವಿಎಚ್ಪಿ ಅಸ್ತಿತ್ವಕ್ಕೆ ಬಂದು 60 ವರ್ಷ ಪೂರ್ಣ ಹಿನ್ನೆಲೆ ಚಿತ್ರದುರ್ಗದಿಂದ ಆರಂಭಿಸಲಾದ ಶೌರ್ಯ ಯಾತ್ರೆ ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಿದೆ. ಈ ಯಾತ್ರೆ ಇಂದು ಸಂಜೆ ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವದ ಮೂಲಕ ಸಮಾರೋಪಗೊಳ್ಳಳಿದೆ. ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ.
ಇತ್ತೀಚೆಗಷ್ಟೇ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯ ಶೌಚಾಶಲಯದಲ್ಲಿರುವ ವಿಡಿಯೋ ಮಾಡಿದ ಪ್ರಕರಣ ಸಂಬಂಧದಲ್ಲಿ ಶರಣ್ ಪಂಪ್ವೆಲ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ ಘಟನೆ ಮಂಗಳೂರಿನಲ್ಲಿ ಆಗುತ್ತಿದ್ದರೆ ದಂಗೆಕೋರರ ಮೈ ಹುಡಿಯಾಗುತ್ತಿತ್ತು: ಶರಣ್ ಪಂಪ್ವೆಲ್
ಸದ್ಯ ಷರತ್ತುಬದ್ದ ಜಾಮೀನಿನಲ್ಲಿರುವ ಶರಣ್ ಪಂಪ್ವೆಲ್ ಅವರು ಇಂದು ಮತ್ತೆ ಉಡುಪಿ ಸಮಾವೇಶದಲ್ಲಿ ಭಾಗಿಯಾದರೆ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಜಾಮೀನು ನಿಯಮ ಉಲ್ಲಂಘನೆ ಮಾಡಿ ಭಾಷಣ ಮಾಡಿದರೆ ಅವರ ಬಂಧನ ಆಗುವ ಸಾಧ್ಯತೆಯೂ ಇದೆ.
ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಪೊಲೀಸರು ಆದೇಶ ಹೊರಡಿಸಿದ ಬಗ್ಗೆ ತಿಳಿದ ಶರಣ್ ಪಂಪ್ವೆಲ್ ಅವರು ಹೆಜಮಾಡಿಯಿಂದ ಮಂಗಳೂರಿಗೆ ವಾಪಸ್ ಆಗಿದ್ದಾರೆ. ವೇದಿಕೆಯ ಅತಿಥಿಗಳ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಸಮಾವೇಶದಲ್ಲಿ ಶರಣ್ ಪಂಪ್ವೆಲ್ ಅವರು ಭಾಗಿಯಾಗಬೇಕಿದ್ದರು.
ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ ಸಂಬಂಧ ಶರಣ್ ಪಂಪ್ವೆಲ್ ಅವರಿಗೆ ಉಡುಪಿ ಜಿಲ್ಲಾ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಸ್ವ ವಿಳಾಸದ ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರ ಹೋಗದಂತೆ ಷರತ್ತು ವಿಧಿಸಿತ್ತು. ಅದರಂತೆ ಶರಣ್ ಪಂಪ್ ವೆಲ್ ಅವರಿಗೆ ಉಡುಪಿ ಪ್ರವೇಶ ನಿರ್ಬಂಧ ವಿಧಿಸಲಾಗಿದ್ದು, ಉಡುಪಿ ಪ್ರವೇಶ ಮಾಡಿದ್ದಲ್ಲಿ ಪೊಲೀಸರು ಅವರನ್ನು ಬಂಧಿಸುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ