ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟದ ಕೃಷಿ ಜಮೀನಿನಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ಸುಮಾರು ಒಂದು ಎಕರೆ ಅಡಿಕೆ ತೋಟ ನಾಶವಾಗಿದ್ದು 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಹಿಂದಿನ ವರ್ಷದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಬಿರುಕು ಬಿಟ್ಟಿದ್ದ ಭೂಮಿಯಲ್ಲಿ ಇಂದು ದಿಢೀರ್ ಭೂಕುಸಿತವಾಗಿ ಅಡಿಕೆ ತೋಟ ನಾಶವಾಗಿರುವ ಘಟನೆ ನಡೆದಿದೆ.
ಮತ್ತಿಘಟ್ಟ ಗ್ರಾಮದ ಕೆಳಗಿನಕೇರಿಯ ಮಧುಸೂದನ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಸುಮಾರು ಒಂದು ಎಕರೆ ಅಡಿಕೆ ತೋಟನಾಶವಾಗಿದ್ದು 20 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಭೂಮಿ ಬಿರುಕು ಬಿಟ್ಟಿತ್ತು. ಆದರೆ ಇಂದು ದಿಢೀರ್ ಭೂ ಕುಸಿತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಪ್ರತಿವರ್ಷವೂ ಉತ್ತರ ಕನ್ನಡದಲ್ಲಿ ಒಂದಿಲ್ಲೊಂದು ಭೂಕುಸಿತಗಳು ಸಂಭವಿಸುತ್ತಿವೆ. ಹಿಂದಿನ ಮಳೆಗಾಲದಲ್ಲಿ ಯಲ್ಲಾಪುರ ತಾಲೂಕಿನ ಡಬ್ಗುಳಿ, ಅರಬೈಲ್ ಘಾಟ್, ಕೊಡ್ಲಗದ್ದೆ, ಶಿರಸಿ ತಾಲೂಕಿನ ಜಾಜಿಗುಡ್ಡೆ ಬಳಿ ಬುಕುಸಿತವಾಗಿತ್ತು. ಮಲೆನಾಡಿನ ಬೆಟ್ಟ ಗುಡ್ಡಗಳ ಮಣ್ಣು ಶಿಥಿಲವಾಗುತ್ತಿದ್ದು ಅಪಾಯದ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಸತತ ಮಳೆಗೆ ಉತ್ತರ ಕನ್ನಡದಲ್ಲಿ 1.5ಕಿ.ಮೀ. ಭೂಕುಸಿತ, ಆತಂಕದಲ್ಲಿ ಸ್ಥಳೀಯರು
Published On - 6:04 pm, Tue, 23 March 21