Uttarakhand Glacier Burst: ಉತ್ತರಾಖಂಡ ದುರಂತಕ್ಕೆ ಏನು ಕಾರಣ? ಭೂಕುಸಿತವೇ? ಹಿಮನದಿ ಸ್ಫೋಟವೇ? ಇಲ್ಲಿದೆ ತಜ್ಞರ ವಿಶ್ಲೇಷಣೆ

ಉತ್ತರಾಖಂಡದಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಹಿಮಸ್ಫೋಟ (Glacial Outburst) ಕಾರಣವೇ ಅಥವಾ ಭೂಕುಸಿತದಿಂದಾಗಿ ಪ್ರವಾಹವುಂಟಾಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸಿರುವ ತಜ್ಞರು ಹೀಗೆ ಹೇಳುತ್ತಾರೆ.

Uttarakhand Glacier Burst: ಉತ್ತರಾಖಂಡ ದುರಂತಕ್ಕೆ ಏನು ಕಾರಣ? ಭೂಕುಸಿತವೇ? ಹಿಮನದಿ ಸ್ಫೋಟವೇ? ಇಲ್ಲಿದೆ ತಜ್ಞರ ವಿಶ್ಲೇಷಣೆ
ಉತ್ತರಾಖಂಡದಲ್ಲಿ ಉಂಟಾಗಿದ್ದ ದಿಢೀರ್ ಪ್ರವಾಹ (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 08, 2021 | 8:31 PM

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ದುರಂತಕ್ಕೆ ಭೂಕುಸಿತ ಕಾರಣವಾಗಿರಬಹುದು. ಹಿಮನದಿ ಸ್ಫೋಟದಿಂದ ಈ ದುರಂತ ಸಂಭವಿಸಿಲ್ಲ ಎಂದು ಅಂತರಾಷ್ಟ್ರೀಯ ಭೂಗರ್ಭ ಶಾಸ್ತ್ರಜ್ಞರು ಮತ್ತು ಗ್ಲೇಶಿಯಾಲಜಿಸ್ಟ್ (ಮಂಜುಗಡ್ಡೆಯ ಚಲನೆಯ ಅಧ್ಯಯನ ಮಾಡುವ ತಜ್ಞರು) ಅಭಿಪ್ರಾಯ ಪಟ್ಟಿದ್ದಾರೆ. ಉತ್ತರಾಖಂಡ ದುರಂತ ಬಗ್ಗೆ ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡಿ ಅವರು ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

ಹಿಮನದಿ ಮತ್ತು ಭೌಗೋಳಿಕ ಪರಿಸರ ತಜ್ಞ ಕಲ್ಗಾರಿ ವಿಶ್ವವಿದ್ಯಾನಿಲಯದ ಡಾ.ಡಾನ್ ಶುಗಾರ್ ಅವರು ಈ ಬಗ್ಗೆ ಅಭಿಪ್ರಾಯ ದಾಖಲಿಸಿದವರಲ್ಲಿ ಮೊದಲಿಗರು. ಉತ್ತರಾಖಂಡದಲ್ಲಿ ದುರಂತ ಸಂಭವಿಸುವುದಕ್ಕಿಂತ ಮುನ್ನ ಮತ್ತು ನಂತರ ಹೇಗಿತ್ತು ಎಂಬುದರ ಬಗ್ಗೆ ಪ್ಲಾನೆಟ್ ಲ್ಯಾಬ್ಸ್ (Planet Labs) ಪ್ರಕಟಿಸಿದ ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿದ ಅವರು ಅಲಕಾನಂದ ಮತ್ತು ಧೌಲಿಗಂಗಾ ನದಿಗಳಲ್ಲಿ ದಿಢೀರ್ ಪ್ರವಾಹಕ್ಕೆ ಕಾರಣ ಭೂಕುಸಿತ ಎಂದು ಹೇಳಿದ್ದಾರೆ. ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಪ್ರದೇಶದಲ್ಲಿ ಧೂಳಿನ ಕಣ ಇರುವುದನ್ನು ಕಾಣಬಹುದು ಎಂದಿದ್ದಾರೆ.

ಉತ್ತರಾಖಂಡದಲ್ಲಿ ದಿಢೀರ್ ಪ್ರವಾಹಕ್ಕೆ ಹಿಮನದಿ ಸ್ಫೋಟವೇ (GLOF) ಕಾರಣ ಎಂದು ಈ ಹಿಂದೆ ಹೇಳಲಾಗಿತ್ತು. ಅಂದರೆ ನೀರ್ಗಲ್ಲು ಕರಗಿ ನೈಸರ್ಗಿಕ ಸರೋವರವೊಂದು ನಿರ್ಮಾಣವಾಗುತ್ತದೆ. ಆದಾಗ್ಯೂ, ಪ್ರವಾಹಕ್ಕೆ ಮುನ್ನ ಯಾವುದೇ ನೀರ್ಗಲ್ಲ ಕಣಿವೆ ಅಲ್ಲಿರುವುದು ಸದ್ಯ ಲಭ್ಯವಿರುವ ಉಪಗ್ರಹ ಚಿತ್ರದಲ್ಲಿ ಕಾಣಿಸುವುದಿಲ್ಲ. ಇದರ ಬದಲು ಗ್ಲೇಶಿಯಾಲಜಿಸ್ಟ್ ಮತ್ತು ಭೂಗರ್ಭ ಶಾಸ್ತ್ರಜ್ಞರು ಕಡಿದಾದ ನೀರ್ಗಲ್ಲಿನಲ್ಲಿ ಬಿರುಕು ಕಾಣಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಭೂಕುಸಿತಕ್ಕೆ ಇದು ಮುಖ್ಯ ಕಾರಣ ಎನ್ನಲಾಗಿದೆ, ಈ ಬಿರುಕಿನಿಂದಲೇ ನೀರ್ಗಲ್ಲು ಸ್ಫೋಟವಾಗಿ ದಿಢೀರ್ ಪ್ರವಾಹವುಂಟಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಕೋಪರ್ನಿಕಸ್ ಸೆಂಟಿನಲ್ 2 ಉಪಗ್ರಹ ಕಳಿಸಿದ ಚಿತ್ರದಲ್ಲಿ ನಂದಾದೇವಿ ನೀರ್ಗಲ್ಲಿನಲ್ಲಿ ಬಿರುಕು ಬಿಟ್ಟಿರುವುದು ಕಾಣಿಸುತ್ತದೆ. ಇದೇ ಭೂಕುಸಿತಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಏನಾಗಿರಬಹುದು? ನಂದಾದೇವಿ ನೀರ್ಗಲ್ಲಿನ ಇಳಿಜಾರು ತ್ರಿಶೂಲಿಯಲ್ಲಿ ಒಡೆದು ಹೋಗಿದೆ. ಇಳಿಜಾರಿನಿಂದ ಕಲ್ಲು ಬೇರ್ಪಟ್ಟಿರುವ (rockslope detachment) ಸ್ಥಿತಿ ಇದಾಗಿದೆ. ಸರಿಸುಮಾರು 2,00,000 ಚದರ ಮೀಟರ್​ನಷ್ಟಿರುವ ಮಂಜು ಲಂಬವಾಗಿ 2 ಕಿಮೀನಷ್ಟು ಬಿದ್ದಾಗ ಅಲ್ಲಿ ಭೂಕುಸಿತವುಂಟಾಗಿ, ಕಣಿವೆಯ ಭೂಭಾಗ ಕದಲಿರಬಹುದು. ಪಳೆಯುಳಿಕೆ, ಕಲ್ಲು ಮತ್ತು ಮಂಜು ಕೆಳಮುಖವಾಗಿ ಚಲಿಸಿ ಅಲ್ಲಿ ಹಿಮಸ್ಫೋಟವುಂಟಾಗುತ್ತದೆ. ಇದನ್ನು ಪುಷ್ಠೀಕರಿಸುವಂತೆ ಆ ಜಾಗದಲ್ಲಿ ಧೂಳಿನ ಕಣಗಳಿರುವುದನ್ನು ಉಪಗ್ರಹದ ಚಿತ್ರಗಳಲ್ಲಿ ಕಾಣಬಹುದು.

ಹಿಮಸ್ಫೋಟವು ನೀರ್ಗಲ್ಲಿನತ್ತ ಹರಿಯುತ್ತದೆ. ಈ ರೀತಿ ಹರಿಯುವಾಗ ಕಲ್ಲುಗಳ ಘರ್ಷಣೆಯಿಂದಾಗಿ ಉಷ್ಣತೆ ಉತ್ಪಾದನೆಯಾಗಿ ಮಂಜುಗಡ್ಡೆ ಕರಗಲು ಕಾರಣವಾಗುತ್ತದೆ. ಈ ಸ್ಥಿತಿಯು ನೀರಿನ ಹರಿವು ಅಸ್ಥಿರವಾಗುವಂತೆ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಮಂಜುಗಡ್ಡೆಯಿರುವ  ಕಲ್ಲು, ಧೂಳಿನ ನಿಕ್ಷೇಪ (moraine) ಆವೃತವಾಗಿರುವ ಕೆಸರು ಉಂಟಾಗುತ್ತದೆ ಎಂದು ನೋರ್ಥುಂಬಿಯಾ ವಿಶ್ವವಿದ್ಯಾಲಯದ ನಿರ್ಗಲ್ಲು ವಿಶ್ಲೇಷಕ ಮತ್ತು ಭೌಗೋಳಿಕ ಪ್ರಾಧ್ಯಾಪಕ ಮಾಟ್ ವೆಸ್ಟೋಹಿ ಹೇಳಿದ್ದಾರೆ.

ಸುಮಾರು 3.5 ಕಿಮೀವರೆಗೆ ವ್ಯಾಪಿಸಿರುವ ಮಂಜುಗಡ್ಡೆಯು ಭೂಕುಸಿತ ಮತ್ತು ಹಿಮಸ್ಫೋಟದ ವೇಳೆ ಸಂಭವಿಸಿದ ಉಷ್ಣತೆಯಿಂದಾಗಿ ಕರಗುತ್ತದೆ. ಹೀಗೆ ಕರಗಿದ ನೀರು ನದಿಗಳಲ್ಲಿ ಪ್ರವಾಹವನ್ನುಂಟುಮಾಡುತ್ತದೆ. ಈ ವಾದವನ್ನು ಭೂಕುಸಿತ ತಜ್ಞರೂ ದೃಢೀಕರಿಸಿದ್ದಾರೆ. ಶೆಫೆಲ್ಡ್ ವಿಶ್ವವಿದ್ಯಾನಿಲಯದ ಡೇವ್ ಪೆಟ್ಲೆ ಅವರ ಪ್ರಕಾರ 2012ರಲ್ಲಿ ನೇಪಾಳದ ಸೆತಿ ನದಿಯಲ್ಲಿಯೂ ಇದೇ ರೀತಿ ಪ್ರವಾಹವುಂಟಾಗಿತ್ತು. ಇಳಿಜಾರಿನ ಕಲ್ಲು ಬೇರ್ಪಟ್ಟಿರುವುದೇ ಇದಕ್ಕೂ ಕಾರಣವಾಗಿತ್ತು.

ನೀರ್ಗಲ್ಲಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ಐಐಟಿ- ರೂರ್ಕಿಯ ಅಸಿಸ್ಟೆಂಟ್ ಪ್ರೊಫೆಸರ್ ಸೌರಭ್ ವಿಜಯ್ ಪ್ರಕಾರ ಕಳೆದವಾರದಲ್ಲಿ ಬಿದ್ದ ಭಾರೀ ಹಿಮದಿಂದಾಗಿ ಹಿಮಸ್ಫೋಟ ಮತ್ತು ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ಭೂಕುಸಿತವುಂಟಾಗಿ ನೀರು ಹರಿಯುವಾಗ ಅಲ್ಲಿ ಉಷ್ಣ ಉತ್ಪಾದನೆಯಾಗುವುದರ ಜತೆಗೆ ಅಸ್ಥಿರ ಅಣೆಕಟ್ಟು ನಿರ್ಮಾಣವಾಗಿ ನೀರು ಸಂಗ್ರಹವಾಗುತ್ತದೆ. ಈ ನೀರು ಏಕಕಾಲಕ್ಕೆ ಧುಮುಕಿದಾಗ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಇದು ಹಿಮನದಿ ಸ್ಫೋಟ ಅಲ್ಲ.

rescue operation in Uttarakhand Chamoli district

ಉತ್ತರಾಖಂಡದ ಚಮೋಲಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಏನಿದು ನೀರ್ಗಲ್ಲ ಕಣಿವೆ ಸ್ಫೋಟವಾಗಿ ಪ್ರವಾಹ? (Glacial lake outburst flood) ನೀರ್ಗಲ್ಲು ಕರಗಿದ ನೀರಿನಿಂದ ನೈಸರ್ಗಿಕ ಸರೋವರವೊಂದು ರೂಪುಗೊಳ್ಳುತ್ತದೆ. ಇಲ್ಲಿನ ನೀರು ಒಮ್ಮೆಲೆ ಹೊರಹರಿವುದನ್ನು ನೀರ್ಗಲ್ಲ ಸರೋವರದ ಪ್ರವಾಹ ಎಂದು ಹೇಳುತ್ತಾರೆ. ಪರ್ವತದ ತುದಿ ಮತ್ತು ಬದಿಯಲ್ಲಿ ನಿರಂತರ ಸುರಿಯುವ ಹಿಮ ಒಂದೆಡೆ ಸಂಗ್ರಹವಾಗಿ ನೀರ್ಗಲ್ಲು ಉಂಟಾಗುತ್ತದೆ. ಈ ಮಂಜುಗಡ್ಡೆಯು ಕರಗುತ್ತಾ ನದಿಗಳ ಮೂಲಕ ಹರಿಯುತ್ತದೆ. ಈ ಪ್ರಕ್ರಿಯೆಯು ನಿರಂತರವಾಗಿದ್ದು ಭೂಮಿಯ ನೈಸರ್ಗಿಕ ನೀರಿನ ಚಕ್ರವಾಗಿರುತ್ತದೆ.

ನೀರ್ಗಲ್ಲು ಕರಗುತ್ತಾ ಬಂದು ಅದರ ಗಾತ್ರ ಕಡಿಮೆಯಾಗುತ್ತಿದ್ದಂತೆ ಕೆಸರು, ಜೇಡಿಮಣ್ಣು, ಕಲ್ಲು, ಬಂಡೆ, ಜಲ್ಲಿ ಕಲ್ಲು ಮೊದಲಾದ ನಿಕ್ಷೇಪಗಳನ್ನು ಒಂದೆಡೆ ಸಂಗ್ರಹವಾಗುತ್ತವೆ. ನಿಕ್ಷೇಪಗಳು ನೈಸರ್ಗಿಕ ಅಣೆಕಟ್ಟುಗಳನ್ನು ರೂಪಿಸುತ್ತದೆ. ಮೊರೈನ್ಸ್ ಎಂದು ಕರೆಯುವ ಇವುಗಳಲ್ಲಿ ಹಿಮಕರಗಿದ ನೀರು ಇರುತ್ತದೆ.

ನೈಸರ್ಗಿಕ ಅಣೆಕಟ್ಟು ಅಥವಾ ನೀರ್ಗಲ್ಲ ಕಣಿವೆ ಧುಮ್ಮಿಕ್ಕಿ ಹರಿದಾಗ ಪ್ರವಾಹವುಂಟಾಗುತ್ತದೆ. ಹಿಮಪಾತ, ಭೂಕಂಪ ಅಥವಾ ನೀರ್ಗಲ್ಲಿನ ಮೇಲಿರುವ ಕಲ್ಲು, ಧೂಳು (moraine) ನೀರಿನ ಅಧಿಕ ಒತ್ತಡದಿಂದ ಕುಸಿದರೆ ಮೊರೈನ್​ನಲ್ಲಿ ಒಡಕು ಕಾಣಿಸಿಕೊಳ್ಳುತ್ತದೆ. ಮಾನವನ ಚಟುವಟಿಕೆಗಳಾದ ಅರಣ್ಯ ನಾಶ, ವಾಯುಮಾಲಿನ್ಯ, ಹವಾಮಾನ ವೈಪರೀತ್ಯ ಕೂಡಾ ಹಿಮನದಿ ಸ್ಫೋಟಕ್ಕೆ ಕಾರಣವಾಗುತ್ತದೆ. ವಾಯುಮಾಲಿನ್ಯದಿಂದಾಗಿ ಮಸಿಕಣಗಳು (black soot particles) ಮಂಜುಗೆಡ್ಡೆ ಮೇಲೆ ಕುಳಿತು ಹೆಚ್ಚಿನ ಉಷ್ಣತೆಯನ್ನು ಹೀರುವ ಮೂಲಕ ಹಿಮ ಕರಗುವಿಕೆಗೆ ಕಾರಣವಾಗುತ್ತದೆ.

ನೀರ್ಗಲ್ಲಿನ ವಿಘಟನೆಯು ಮೊರೈನ್​ನ ಅಂಚಿನಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತದೆ. ಇದು ಅಲೆಗಳನ್ನು ಕದಲಿಸಿ ಅಣೆಕಟ್ಟಿಗೆ ಹಾನಿಯುಂಟುಮಾಡುತ್ತದ. ಚಮೋಲಿಯಲ್ಲಿ ಈ ರೀತಿ ಸಂಭವಿಸಿರುವ ಸಾಧ್ಯತೆ ಇದೆ. ಭೂಕುಸಿತವೇ ಈ ದುರಂತಕ್ಕೆ ಕಾರಣ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಉಪಗ್ರಹ ಕಳಿಸಿದ ಚಿತ್ರಗಳು, ಸಮೀಕ್ಷೆಯ ಮಾಹಿತಿಗಳು ಮತ್ತು ಇತರ ತನಿಖೆಗಳು ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಬಹುದು ಎಂಬ ನಿರೀಕ್ಷೆ ಇದೆ.

Uttarakhand Glacier Burst ಮಿತಿಮೀರಿದ ಮಾನವ ಚಟುವಟಿಕೆ ತಾಳಿಕೊಳ್ಳುವ ಶಕ್ತಿ ಹಿಮಾಲಯದ ಮಣ್ಣಿಗಿಲ್ಲ | ಉಷಾ ಕಟ್ಟೆಮನೆ ಬರಹ