Karwar: ಅಳಿವಿನಂಚಿನಲ್ಲಿರುವ “ಹಾರುವ ಅಳಿಲಿ”ಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ಅರಣ್ಯ ವೀಕ್ಷಕ

| Updated By: ವಿವೇಕ ಬಿರಾದಾರ

Updated on: Jan 09, 2023 | 5:43 PM

ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್‌ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ಗಾಯಗೊಂಡಿದ್ದ ಹಾರುವ ಅಳಿಲನ್ನು ರಕ್ಷಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಪುನಃ ಕಾಡಿಗೆ ಬಿಟ್ಟಿದ್ದಾರೆ.

Karwar: ಅಳಿವಿನಂಚಿನಲ್ಲಿರುವ ಹಾರುವ ಅಳಿಲಿಗೆ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ಅರಣ್ಯ ವೀಕ್ಷಕ
ಹಾರುವ ಅಳಿಲು
Follow us on

ಕಾರವಾರ: ಕಾರವಾರ (Karwar) ತಾಲೂಕಿನ ಕದ್ರಾ (Kadra) ಅರಣ್ಯ ವಲಯದ ವಿರ್ಜೆ ಬೀಟ್‌ನ ಅರಣ್ಯ ವಿಕ್ಷಕ ಬಿಲಾಲ್ ಶೇಖ್ ಅವರು ಗಾಯಗೊಂಡಿದ್ದ ಹಾರುವ ಅಳಿಲನ್ನು ರಕ್ಷಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಪುನಃ ಕಾಡಿಗೆ ಬಿಟ್ಟಿದ್ದಾರೆ. ಈ ಹಾರುವ ಅಳಿಲು ಮರದಿಂದ ಮರಕ್ಕೆ ಹಾರುವ ವೇಳೆ ಆಕಸ್ಮಿಕವಾಗಿ ರೆಂಬೆಗಳಿಗೆ ತಾಗಿ ಗಾಯಗೊಂಡು ಮಲ್ಲಾಪುರ ಟೌನ್‌ಶಿಪ್‌ನ ಎನ್‌ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಮೇಲೆ ಬಿದ್ದಿತ್ತು.

ಈ ಬಗ್ಗೆ ಸ್ಥಳೀಯರು ಅರಣ್ಯ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿ ತಿಳಿಸಿದ್ದರು. ನಾಗರಾಜ್ ಅವರು ಬಿಲಾಲ್ ಅವರಿಗೆ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ತೆರಳಿ ಹಾರುವ ಅಳಿಲಿಗೆ ಅಗತ್ಯ ಚಿಕಿತ್ಸೆ ನೀಡಿ, ವಲಯ ಅರಣ್ಯ ಅಧಿಕಾರಿ ಲೋಕೇಶ್ ಪಾಟಣಕರ್ ಅವರ ಮಾರ್ಗದರ್ಶನದಲ್ಲಿ ಪುನಃ ಕಾಡಿಗೆ ಬಿಟ್ಟಿದ್ದಾರೆ. ಹಾರುವ ಅಳಿಲಗಳು ಸಂಪೂರ್ಣವಾಗಿ ನಿಶಾಚರಿಯಾಗಿದ್ದು, ಹಗಲಿನಲ್ಲಿ ಗೊಚರಿಸುವುದು ತುಂಬಾ ವಿರಳವಾಗಿದೆ. ಈ ಅಳಿಲು ಗಾಯಗೊಂಡಿದ್ದ ಪರಿಣಾಮ ಹಾರಲಾಗದೇ ಮನೆಯ ಬಳಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಹಾರುವ ಅಳಿಲುಗಳನ್ನ ಸ್ಥಳೀಯವಾಗಿ ಹಾರುವ ಬೆಕ್ಕು ಎಂದು ಸಹ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಪೆಟೌರಿಸ್ಟಾ ಫಿಲಿಪೆನ್ಸಿಸ್(Petaurista philippensis) ಎಂದು ಕರೆಯಲ್ಪಡುವ ಹಾರುವ ಅಳಿಲುಗಳು ವಾಸ್ತವವಾಗಿ ಪಕ್ಷಿಗಳ ರೀತಿ ಸಂಪೂರ್ಣವಾಗಿ ಹಾರುವ ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಅವುಗಳು ತಮ್ಮ ವಿಶಿಷ್ಟ ರೀತಿಯ ಚರ್ಮದ ರಚನೆಯಿಂದಾಗಿ ಅದನ್ನು ರೆಕ್ಕೆಯಂತೆ ಅಗಲವಾಗಿಸಿಕೊಂಡು ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತವೆ. ಜೊತೆಗೆ ಕೈಕಾಲು ಮತ್ತು ಬಾಲದ ಸಹಾಯದಿಂದ ಹಾರುವ ದಿಕ್ಕನ್ನು ನಿಯಂತ್ರಿಸುತ್ತವೆ. ಇದು ದೂರದಿಂದ ನೋಡಿದಾಗ ಅಳಿಲು ಹಾರುತ್ತಿರುವಂತೆ ಕಾಣುತ್ತದೆ.

ಪಶ್ಚಿಮ ಘಟ್ಟಗಳಲ್ಲಿ ಭಾರತೀಯ ದೈತ್ಯ ಹಾರುವ ಅಳಿಲು (Indian Giant Flying Squirrel) ಎಂದು ಗುರುತಿಸಲಾಗಿರುವ ಈ ಜೀವಿಯು ಈ ಭಾಗದಲ್ಲಿ ಇರುವ ಅತ್ಯಂತ ಚಿಕ್ಕ ಹಾರುವ ಅಳಿಲುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ಅಳಿಲು ಕೇವಲ 32 ಸೆಂ.ಮೀ ಉದ್ದವಿದ್ದು, ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ವಿಶಿಷ್ಟ ಜಾತಿಯ ಅಳಿಲುಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಕಾಣಿಸಿಕೊಳ್ಳುವ ಎರಡು ವಿಧದ ಅಳಿಲುಗಳ ಪೈಕಿ ಒಂದು ಟ್ರಾವಂಕೂರ್ ಹಾರುವ ಅಳಿಲು (Tranvancore Flying Squirrel) ಎಂದು ಗುರುತಿಸಿಕೊಂಡಿದ್ದರೆ, ಇನ್ನೊಂದು ಭಾರತೀಯ ದೈತ್ಯ ಹಾರುವ ಅಳಿಲು (Indian Giant Flying Squirrel) ಎಂದು ಕರೆಸಿಕೊಂಡಿದೆ. ಅಳಿವಿನ ಅಂಚಿನಲ್ಲಿರುವ ಈ ಟ್ರಾವಂಕೂರ್ ಹಾರುವ ಅಳಿಲು ದಕ್ಷಿಣ ಕನ್ನಡದ ಸುಳ್ಯ ಹಾಗೂ ಕೇರಳದ ಪಶ್ಚಿಮ ಘಟ್ಟಗಳಲ್ಲಿ ಕಂಡುಬಂದಿತ್ತು.

ವರದಿ-ವಿನಾಯಕ ಬಡಿಗೇರ್​ ಟಿವಿ9 ಕಾರವಾರ