ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆ ಇಲಿ ಜ್ವರದ ಹಾವಳಿ; ಕೆಲವೇ ದಿನಗಳಲ್ಲಿ 34 ಜನರಲ್ಲಿ ಕಾಣಿಸಿಕೊಂಡ ಇಲಿ ವ್ಯಾಧಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆ ಇಲಿ ಜ್ವರದ ಆರ್ಭಟ ಶುರುವಾಗಿದೆ. ಕೆಲವೇ ದಿನಗಳಲ್ಲಿ ಸುಮಾರು 34 ಜನರಲ್ಲಿ ಕಾಣಿಸಿಕೊಂಡಿರುವ ಇಲಿ ಜ್ವರ, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಇಲಿ ಜ್ವರದ ಬಗ್ಗೆ ಸಕಾಲದಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸದೆ ಇದ್ದಿದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆ ಇಲಿ ಜ್ವರದ ಹಾವಳಿ; ಕೆಲವೇ ದಿನಗಳಲ್ಲಿ 34 ಜನರಲ್ಲಿ ಕಾಣಿಸಿಕೊಂಡ ಇಲಿ ವ್ಯಾಧಿ
ಉತ್ತರ ಕನ್ನಡದಲ್ಲಿ ಇಲಿ ಜ್ವರ ಹಾವಳಿ
Edited By:

Updated on: Sep 21, 2023 | 6:55 PM

ಉತ್ತರ ಕನ್ನಡ, ಸೆ.21: ಜಿಲ್ಲೆಯಾದ್ಯಂತ ಕಳೆದ ಎರಡು ತಿಂಗಳಿನಿಂದ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದು ಕಡೆ ಡೆಂಗ್ಯೂ, ಮಲೇರಿಯಾ ಕಂಡುಬಂದು ಜನರಲ್ಲಿ ಆತಂಕ ಮೂಡುವಂತೆ ಮಾಡಿದರೆ, ಇದೀಗ ಇಲಿ ಜ್ವರ(Rat fever)ದಂತಹ ಗಂಭೀರ ಪ್ರಕರಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿವೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 34 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು. ಅದರಲ್ಲಿ ಅಂಕೋಲ 1, ಭಟ್ಕಳ 3, ಹೊನ್ನಾವರ 8, ಜೋಯಿಡಾ 1, ಕಾರವಾರದಲ್ಲಿ 8, ಕುಮಟಾ 7, ಶಿರಸಿ 3, ಸಿದ್ದಾಪುರ 3 ಪ್ರಕರಣಗಳು ಕಂಡುಬಂದಿವೆ.

ಮತ್ತಷ್ಟು ಇಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಜನ ಭಯಗೊಂಡಿದ್ದಾರೆ. ಇನ್ನು ಈ ಕಾಯಿಲೆ ಹರಡುವುದಕ್ಕೆ ಪ್ರಮುಖ ಕಾರಣ ಅಂದರೆ, ಇಲಿ ಮೂತ್ರದಿಂದ ಲೆಪ್ಟೊಸ್ಪಿರೋಸಿಸ್ (Leptospirosis) ಹೊರಬಂದಾಗ ಅದು ಕುಡಿಯುವ ನೀರಿನ ಜೊತೆ ಅಥವಾ ಆಹಾರ ಪದಾರ್ಥಗಳ ಜೊತೆ ಸೇರಿದಾಗ ಅದು ಕಲುಷಿತಗೊಳ್ಳುತ್ತದೆ. ಒಂದು ವೇಳೆ ಅದನ್ನ ಮನುಷ್ಯ ಸೇವನೆ ಮಾಡಿದ್ರೆ, ವೈರಸ್ ಅಟ್ಯಾಕ್ ಆಗಿ ಇಲಿ ಜ್ವರಕ್ಕೆ ತುತ್ತಾಗುತ್ತಾನೆ. ಇನ್ನು ಇಲಿ ಜ್ವರದ ಪ್ರಮುಖ ಲಕ್ಷಣಗಳು ಅಂದರೆ, ಅತಿಯಾದ ಜ್ವರ, ಮೈ ಕೈ ನೋವು, ರಕ್ತ ಸ್ರಾವ(ಮೂಗು, ಬಾಯಿ) 20 ದಿನಗಳಾದರು ವಾಸಿಯಾಗದ ಜ್ವರ, ಈ ರೀತಿ ಕಂಡುಬರುತ್ತದೆ. ಇನ್ನು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ಎಲ್ಲೆಡೆ ಹೆಚ್ಚುತ್ತಿದೆ ವೈರಲ್ ಜ್ವರ; ಏನಿದರ ಲಕ್ಷಣ? ಮುನ್ನೆಚ್ಚರಿಕಾ ಕ್ರಮಗಳೇನು?

ಇನ್ನು ಮನಷ್ಯನಲ್ಲಿ ಎರಡನೇ ಭಾರಿ ಇಲಿ ಜ್ವರ ಪತ್ತೆಯಾದರೆ, ಅದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ‌‌. ಇದರಿಂದ ಲಿವರ್ ಡ್ಯಾಮೇಜ್, ಜಾಂಡೀಸ್, ಕಿಡ್ನಿ ವೈಪಲ್ಯ, ಮೆದುಳು ಜ್ವರ ಬಂದು ಮನುಷ್ಯ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನರು ಸಣ್ಣ ಜ್ವರ ಎಂದು ನಿರ್ಲಕ್ಷ್ಯ ಮಾಡದೆ. ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸುವ ಮೂಲಕ ಅದು ಡೆಂಗ್ಯೂ ಜ್ವರ, ಮಲೇರಿಯಾ, ಇಲಿ ಜ್ವರನಾ ಅಥವಾ ಇತ್ತಿಚೆಗೆ ಕಂಡು ಬರುತ್ತಿರುವ ನಿಫಾನಾ ಎಂಬುದರ ಬಗ್ಗೆ ಪರೀಕ್ಷೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇನ್ನು ನೀರನ್ನು ಬಿಸಿ ಮಾಡಿ ಕುಡಿಯುವುದು. ಜೊತೆಗೆ ಆಹಾರ ಪಾದಾರ್ಥಗಳನ್ನು ಮುಚ್ಚಿಟ್ಟು ಸೇವನೆ ಮಾಡಬೇಕು. ಪಾದ ರಕ್ಷೆಗಳಿಲ್ಲದೆ ಹೊರ ಓಡಾಡಬಾರದು ಎಂದು ವೈದ್ಯರು ಹೇಳಿದ್ದಾರೆ. ಅಂದಹಾಗೆ ಜಿಲ್ಲೆಯಲ್ಲಿ ಇಲಿ ಜ್ವರದಂತಹ ಪ್ರಕರಣಗಳು ಕಂಡುಬರುತ್ತಿರುವುದಕ್ಕೆ ಆರೋಗ್ಯ ಇಲಾಖೆಯೇ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಯಾಕೆಂದರೆ ಸೂಕ್ತ ಸಮಯದಲ್ಲಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಇಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ರಕ್ತ ಪರೀಕ್ಷೆ ಮಾಡುವ ಉಪಕರಣಗಳು ಇಲ್ಲ. ಹೀಗೆ ಹತ್ತು ಹಲವು ಕಾರಣಗಳಿವೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡದೆ ಜನರ ಆರೋಗ್ಯ ಕಾಪಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ 34 ಇಲಿ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು ಜನ ಸುರಕ್ಷಿತರಾಗಿರಬೇಕು. ಸಣ್ಣ ಜ್ವರ ಎಂದು ನಿರ್ಲಕ್ಷ್ಯ ಮಾಡದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಜೀವವೇ ಹಾನಿಯಾಗುವ ಸಾಧ್ಯತೆ ಇರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:54 pm, Thu, 21 September 23