ವಾಲ್ಮೀಕಿ ನಿಗಮ ಹಗರಣ: ನಕಲಿ ಖಾತೆ ತೆರೆದಿದ್ದ ಆರೋಪಿ ಬಂಧನ, 16 ಕೆಜಿ ಚಿನ್ನ, 10 ಕೋಟಿ ನಗದು ಜಪ್ತಿ

| Updated By: ಗಣಪತಿ ಶರ್ಮ

Updated on: Jun 12, 2024 | 10:51 AM

Valmiki corporation sacm: ವಾಲ್ಮೀಕಿ ನಿಗಮ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮಹತ್ವದ ಪ್ರಗತಿ ಕಂಡಿರುವ ಎಸ್​ಐಟಿ, ಅಕ್ರಮ ಹಣ ವರ್ಗಾವಣೆಯಾಗಿದ್ದ 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಆರೋಪಿಯನ್ನು ಹೈದರಾಬಾದ್​ನಲ್ಲಿ ಬಂಧಿಸಿದೆ. ಆತನಿಂದ 16 ಕೆಜಿ ಚಿನ್ನ, 10 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ವಿವರಗಳಿಗೆ ಮುಂದೆ ಓದಿ.

ವಾಲ್ಮೀಕಿ ನಿಗಮ ಹಗರಣ: ನಕಲಿ ಖಾತೆ ತೆರೆದಿದ್ದ ಆರೋಪಿ ಬಂಧನ, 16 ಕೆಜಿ ಚಿನ್ನ, 10 ಕೋಟಿ ನಗದು ಜಪ್ತಿ
ವಾಲ್ಮೀಕಿ ನಿಗಮ ಹಗರಣ: ನಕಲಿ ಖಾತೆ ತೆರೆದಿದ್ದ ಆರೋಪಿ ಬಂಧನ, 16 ಕೆಜಿ ಚಿನ್ನ ವಶ
Follow us on

ಬೆಂಗಳೂರು, ಜೂನ್ 12: ಬಹುಕೋಟಿ ರೂಪಾಯಿ ವಾಲ್ಮೀಕಿ ನಿಗಮ ಅವ್ಯವಹಾರ ಪ್ರಕರಣಕ್ಕೆ (Valmiki corporation sacm) ಸಂಬಂಧಿಸಿ ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ (SIT), ನಕಲಿ ಖಾತೆ ತೆರೆದ ಆರೋಪದಲ್ಲಿ ಸತ್ಯನಾರಾಯಣ ವರ್ಮ (Satyanarayana Verma) ಎಂಬಾತನನ್ನು ಹೈದರಾಬದ್​ನಲ್ಲಿ (Hyderabad) ಬಂಧಿಸಿದೆ. ಈತ ವಿವಿಧ ಕಂಪೆನಿಗಳ ಹೆಸರಿನಲ್ಲಿ 18 ಬ್ಯಾಂಕ್ ಖಾತೆ ತೆರೆದಿದ್ದ. ಎಲ್ಲಾ 18 ಬ್ಯಾಂಕ್ ಖಾತೆಗಳಿಗೂ ವಾಲ್ಮೀಕಿ ನಿಗಮದಿಂದ ಹಣ ವರ್ಗಾವಣೆ ಆಗಿತ್ತು.

ಅಕೌಂಟ್ ನಂಬರ್ ಪರಿಶೀಲನೆ ವೇಳೆ ನಕಲಿ ಖಾತೆ ತೆರೆದಿರುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ನಕಲಿ ಖಾತೆ ತೆರೆದ ವ್ಯಕ್ತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎಸ್​ಐಟಿ, ಆತನ ಪತ್ತೆಗೆ ಬಲೆ ಬೀಸಿತ್ತು.

ಬಂಧಿತ ಸತ್ಯನಾರಾಯಣ ಬಳಿಯಿಂದ 16 ಕೆಜಿ ಚಿನ್ನ, 10 ಕೋಟಿ ನಗದು ಜಪ್ತಿ ಮಾಡಲಾಗಿದೆ. ಇಂದು ಸತ್ಯನಾರಾಯಣನನ್ನು ಎಸ್​ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಎಂಜಿ ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹಣ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು. ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಈಗಾಗಲೇ ಎಸ್‌ಐಟಿ ಬಂಧಿಸಿದ್ದು ವಿಚಾರಣೆಗೆ ಒಳಪಡಿಸಿದೆ.

ಇದನ್ನೂ ಓದಿ: ಶರಣಪ್ರಕಾಶ್ ಪಾಟೀಲ ಹೆಸರು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಉಲ್ಲೇಖವಾದಾಕ್ಷಣ ಅರೋಪಿಯಲ್ಲ: ಜಿ ಪರಮೇಶ್ವರ್

ಈ ಮಧ್ಯೆ, ಹಗರಣ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆಯನ್ನೂ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:51 am, Wed, 12 June 24