
ಹಂಪಿ, ನ.11: 14ರಿಂದ 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಾಗೂ ಯುನೆಸ್ಕೋ (UNESCO) ವಿಶ್ವ ಪಾರಂಪರಿಕ ತಾಣವಾದ ಹಂಪಿಯ ಐತಿಹಾಸಿಕ ಸ್ಮಾರಕಗಳ ಸಮಗ್ರ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ ಬೃಹತ್ ಯೋಜನೆ ರೂಪಿಸಿದೆ. ಹೇಮಕೂಟ ಬೆಟ್ಟದ ಮೇಲಿರುವ ಜೈನ ದೇವಾಲಯಗಳು ಹಾಗೂ ಸಿಂಗನಾಯಕರಹಳ್ಳಿಯ ಸರಸ್ವತಿ ದೇವಾಲಯ ಸೇರಿದಂತೆ ಹಂಪಿಯ ಪ್ರಮುಖ ಪಾರಂಪರಿಕ ಸ್ಮಾರಕಗಳನ್ನು ಈ ಸಮಗ್ರ ಸಂರಕ್ಷಣಾ ಯೋಜನೆಯಡಿ ಅಭಿವೃದ್ಧಿಪಡಿಸಲು ಇಲಾಖೆ ತೀರ್ಮಾನಿಸಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಸಾಂಸ್ಕೃತಿಕ ನಿಧಿ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದಕ್ಕೆ ಭಾರಿ ಆರ್ಥಿಕ ನೆರವು ದೊರೆತಿದೆ. ಯೋಜನೆಯ ಜಾರಿಗೆ ಒಟ್ಟು 38 ಕೋಟಿ ರೂ. ಅನುದಾನ ಲಭ್ಯವಾಗಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಸಿಎಸ್‌ಆರ್ (CSR) ನಿಧಿ ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅಡಿಯಲ್ಲಿ ಈ ಮೊತ್ತ ಕ್ರೋಡೀಕರಿಸಲ್ಪಡಲಿದೆ. ಇದರಲ್ಲಿ ಸುಮಾರು ₹19 ಕೋಟಿ ರೂಪಾಯಿ ನಿಧಿಯು MPLADS ಮೂಲಕ ಬರಲಿದೆ.
ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕೆ ತಾಂತ್ರಿಕ ಸ್ಪಷ್ಟತೆ ನೀಡಲು ಶೀಘ್ರದಲ್ಲೇ ಕೇಂದ್ರ ಸಚಿವಾಲಯವು ಪಾರಂಪರಿಕ ಸಂರಕ್ಷಣಾ ವಾಸ್ತುಶಿಲ್ಪಿಯನ್ನು ನೇಮಕ ಮಾಡಲಿದೆ. ನೇಮಕಗೊಳ್ಳುವ ವಾಸ್ತುಶಿಲ್ಪಿಯು ಸ್ಮಾರಕಗಳ ಪ್ರಸ್ತುತ ಸ್ಥಿತಿಗತಿಗಳ ಪರಿಶೀಲನೆ, ಸಂರಕ್ಷಣಾ ಯೋಜನೆ ಹಾಗೂ ತಾಂತ್ರಿಕ ದಾಖಲಾತಿಗಳನ್ನು ಒಳಗೊಂಡ ವಿಸ್ತೃತ ಯೋಜನಾ ವರದಿಯನ್ನು ಹಂತ-ಹಂತವಾಗಿ ಸಿದ್ಧಪಡಿಸಲಿದ್ದಾರೆ.
ಇದನ್ನೂ ಓದಿ: ಬಂಟ್ವಾಳದ ಬಿ.ಸಿ. ರೋಡ್ಬಳಿ ಭೀಕರ ಅಪಘಾತ: 40 ಅಡಿ ಎತ್ತರದ ಫ್ಲೈಓವರ್ ಮೇಲಿಂದ ಬಿದ್ದರೂ ಬದುಕುಳಿದ ಬೈಕ್ ಸವಾರ!
ವಿರೂಪಾಕ್ಷ ದೇವಾಲಯದ ಉತ್ತರ ಬಜಾರ್ ಮತ್ತು ದಕ್ಷಿಣ ಬಜಾರ್ ಭಾಗಗಳ ಸಂಪೂರ್ಣ ಉದ್ದದ ರಕ್ಷಣೆ. ವಿಜಯ ವಿಠಲ ದೇವಾಲಯ ಸಂಕೀರ್ಣದ ಬಳಿ ಇರುವ ಶ್ರೀ ಭಾಷ್ಯಕಾರ ಗುಡಿಯ ಪಶ್ಚಿಮ ಭಾಗದ ಕುಸಿದು ಬಿದ್ದಿರುವ ಮಂಟಪದ ಪುನರ್ನಿರ್ಮಾಣ. ಹೇಮಕೂಟ ಬೆಟ್ಟದಲ್ಲಿರುವ ಜೈನ ದೇವಾಲಯಗಳು ಹಾಗೂ ಸಿಂಗನಾಯಕರಹಳ್ಳಿಯ ಸರಸ್ವತಿ ದೇವಾಲಯ ಸಂಕೀರ್ಣಗಳ ನವೀಕರಣ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ