ಬಂಟ್ವಾಳದ ಬಿ.ಸಿ. ರೋಡ್ಬಳಿ ಭೀಕರ ಅಪಘಾತ: 40 ಅಡಿ ಎತ್ತರದ ಫ್ಲೈಓವರ್ ಮೇಲಿಂದ ಬಿದ್ದರೂ ಬದುಕುಳಿದ ಬೈಕ್ ಸವಾರ!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್ ಫ್ಲೈಓವರ್ ಮೇಲೆ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ, 40 ಅಡಿ ಎತ್ತರದಿಂದ ಸರ್ವೀಸ್ ರಸ್ತೆಗೆ ಬಿದ್ದ ಬೈಕ್ ಸವಾರ ಪವಾಡಸದೃಶವಾಗಿ ಪಾರಾಗಿದ್ದಾರೆ. ಫ್ಲೈಓವರ್‌ನಿಂದ ಬೈಕ್ ಸವಾರ ಸರ್ವಿಸ್ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತ ರೈಡಿಂಗ್ ಗೇರ್ ಧರಿಸಿದ್ದ ಹಿನ್ನೆಲೆ ಅಪಘಾತದ ವೇಳೆ ಹೆಚ್ಚಿನ ಗಾಯ ಆಗಿಲ್ಲ ಎನ್ನಲಾಗಿದೆ.

ಮಂಗಳೂರು, ನವೆಂಬರ್ 11: ಫ್ಲೈಓವರ್‌ನಿಂದ 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದರೂ ಬೈಕ್ ಸವಾರನೋರ್ವ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ನಲ್ಲಿ ನಡೆದಿದೆ. ಫ್ಲೈಓವರ್‌ನ ಮಧ್ಯಭಾಗದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಆರ್ವಿನ್ ಅತ್ತಾವರ ಎಂಬಾತ ಹಾರಿ ಫ್ಲೈಓವರ್‌ನಿಂದ ನೇರವಾಗಿ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಆ ಕ್ಷಣದಲ್ಲಿ ಸರ್ವೀಸ್ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುತ್ತಿರದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಇನ್ನು ಆರ್ವಿನ್ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಬರಲು ಬುಲೆಟ್ ಬೈಕ್‌ನಲ್ಲಿ ಹಾಸನಕ್ಕೆ ತೆರಳಿ ಹಿಂದಿರುಗುತ್ತಿದ್ದ. ಆತ ಮತ್ತು ಸ್ನೇಹಿತೆ ಇಬ್ಬರೂ ಪ್ರತ್ಯೇಕ ಬೈಕ್‌ಗಳಲ್ಲಿ ಬಂಟ್ವಾಳದ ಮೂಲಕ ಸಾಗುತ್ತಿದ್ದ ವೇಳೆ ಬಿ.ಸಿ.ರೋಡ್ ಫ್ಲೈಓವರ್‌ನಲ್ಲಿ ಅಪಘಾತ ಸಂಭವಿಸಿದೆ. ಆರ್ವಿನ್ ರೈಡಿಂಗ್ ಗೇರ್ ಧರಿಸಿದ್ದ ಹಿನ್ನೆಲೆ ಅಪಘಾತದ ವೇಳೆ ಹೆಚ್ಚಿನ ಗಾಯ ಆಗಿಲ್ಲ ಎನ್ನಲಾಗಿದೆ. ಸುಮಾರು 40 ಅಡಿ ಎತ್ತರದಿಂದ ಬಿದ್ದಿದ್ದರೂ ಬೈಕ್ ಸವಾರ ಬದುಕಿರೋದು ನಿಜಕ್ಕೂ ಪವಾಡವೇ ಸರಿ ಎಂಬ ಮಾತುಗಳು ಕೇಳಿಬಂದಿವೆ.
ಇದನ್ನೂ ಓದಿ: ಸೌಜನ್ಯ ಕೇಸ್: ಮಹೇಶ್ ಶೆಟ್ಟಿ ತಿಮರೋಡಿ, ವಿಟ್ಠಲ್ ಗೌಡ ವಿರುದ್ದ ಎಸ್ಐಟಿಗೆ ದೂರು
ಬೆಚ್ಚಿ ಬೀಳಿಸುವಂತಿದೆ ಸಿಸಿ ಕ್ಯಾಮರಾ ದೃಶ್ಯಾವಳಿ
ಇನ್ನು ಫ್ಲೈಓವರ್‌ನಿಂದ ಬೈಕ್ ಸವಾರ ಆರ್ವಿನ್ ಹಾರಿ ಸುಮಾರು 40 ಅಡಿ ಕೆಳಗಿರುವ ಸರ್ವಿಸ್ ರಸ್ತೆಗೆ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜನ ನಿಬಿಡ ರಸ್ತೆಯಲ್ಲಿ ಆಕಾಶದಿಂದ ಉದುರಿದಂತೆ ಏಕಾಏಕಿ ಬಿದ್ದ ಬೈಕ್ ಸವಾರನನ್ನು ಕಂಡು ರಸ್ತೆಯ ಅಕ್ಕಪಕ್ಕದಲ್ಲಿದ್ದವರು ಅರೆ ಕ್ಷಣ ಕಂಗಾಲಾಗಿದ್ದಾರೆ. ಈತ ಮೇಲ್ಸೇತುವೆಯಿಂದ ಬಿದ್ದವ ಎಂಬುದು ಅರಿವಾಗುತ್ತಿದ್ದಂತೆ ಆತನ ರಕ್ಷಣೆಗೆ ಮುಂದಾಗಿದ್ದು, ಘಟನೆ ಸಂಬಂಧ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
