ವಿಜಯಪುರ: ಜಿಲ್ಲೆಯಲ್ಲಿ ವಿವಿಧ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೊಂದ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಒಟ್ಟು 75.36 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದೆ. ನಿನ್ನೆ (ಮಾರ್ಚ್ 25) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ. 2020 ರ ಏಪ್ರಿಲ್ 1 ರಿಂದ 2021 ರ ಫೆಬ್ರವರಿ 28ರ ವರೆಗೆ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಒಟ್ಟು 59 ಪ್ರಕರಣಗಳ ಪೈಕಿ 48 ಪ್ರಕರಣಗಳಿಗೆ ಸುಮಾರು 75.36 ಲಕ್ಷ ರೂಪಾಯಿ ಪರಿಹಾರ ಧನ ವಿತರಿಸಲಾಗಿದೆ. ಇನ್ನುಳಿದ 11 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಹಾಯ ಮಾಡಲು ಸೂಚನೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸಾಲ ಸೌಲಭ್ಯ ಕೋರಿ ವಿವಿಧ ಬ್ಯಾಂಕ್ಗಳಿಗೆ ಹೋದ ಸಂದರ್ಭದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ಕಲ್ಪಿಸಿ ಅರ್ಹ ಫಲಾನುಭವಿಗಳಿಗೆ ನೆರವಾಗಬೇಕೆಂದು ಡಿಸಿ ಪಿ.ಸುನಿಲಕುಮಾರ ಜಿಲ್ಲಾಡಳಿತದ ಹಾಗೂ ಇತರೆ ಇಲಾಖೆ ಆಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿಧ ಬ್ಯಾಂಕ್ಗಳಿಗೆ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಸಕಾಲಕ್ಕೆ ಅವರಿಗೆ ಸ್ಪಂದಿಸುವಂತಾಗಬೇಕು. ವಿವಿಧ ಬ್ಯಾಂಕ್ಗಳ ಮೂಲಕ ಸಕಾರಾತ್ಮಕ ಸ್ಪಂದನೆಯಾಗುವಂತೆ ನೋಡಿಕೊಳ್ಳಲು ತಿಳಿಸಿದರು. ಈ ವಿಚಾರದಲ್ಲಿ ಇದರಲ್ಲಿ ಯಾವುದೇ ರೀತಿಯ ಲೋಪವನ್ನು ಸಹಿಸಲಾಗುವುದಿಲ್ಲ. ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪಾರದರ್ಶಕತೆಗೆ ಒತ್ತು
ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕುರಿತು ಚರ್ಚೆ ನಡೆಯಿತು. ಇಲ್ಲಿ ಮಧ್ಯವರ್ತಿಗಳ ಹಾವಳಿ ಜೋರಾಗಿದೆ. ಆಧಿಕಾರಿಗಳ ಗಮನಕ್ಕೆ ಬಾರದಂತೆ ಮಧ್ಯವರ್ತಿಗಳು ಫಲಾನುಭವಿಗಳಿಗೆ ಮೋಸ ಮಾಡಿರುತ್ತಾರೆ. ಇವೆಲ್ಲ ವಿಚಾರಗಳ ಮೇಲೆ ಆಧಿಕಾರಿಗಳು ಕಣ್ಣಿಟ್ಟಿರಬೇಕೆಂದು ಸಭೆಯಲ್ಲಿ ನಿರ್ಣಯ ಮಾಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಪಾರದರ್ಶಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈಗಾಗಲೇ ಸಿಸಿಟಿವಿ ಕ್ಯಾಮರಾ ಕಡ್ಡಾಯ ಅಳವಡಿಕೆಗೆ ಕ್ರಮಕೈಗೊಂಡಿದೆ. ಭೂ ಒಡೆತನ ಯೋಜನೆ ಸೇರಿದಂತೆ ವೈಯುಕ್ತಿಕ ಸೌಲಭ್ಯಗಳ ಬಗ್ಗೆ ಕಾನೂನಿನ ರೀತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ಸೇರಿದಂತೆ ಸಾಕ್ಷಾಧಾರಿತ ದೂರು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಂತ್ರಸ್ತರಿಗೆ, ಸಾಕ್ಷಿಧಾರರಿಗೆ ಪ್ರಯಾಣ ಭತ್ಯೆ
ನ್ಯಾಯಾಲಯಗಳಿಗೆ ಸಾಕ್ಷಿಗಾಗಿ ಹಾಜರಾಗುವ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಸೂಕ್ತ ಮಾಹಿತಿಯನ್ನು, ನಿಯಮಾನುಸಾರ ಪ್ರಯಾಣ ಭತ್ಯೆ ಮಂಜೂರಾತಿ ಬಗ್ಗೆ ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ಸಂತ್ರಸ್ತರಿಗೆ ಹಾಗೂ ಸಾಕ್ಷಿದಾರರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ಹಾಗೂ ಭತ್ಯೆ ನೀಡುತ್ತಿಲ್ಲವೆಂಬ ದೂರುಗಳಿವೆ. ಕಾರಣ ಮುಂದಿನ ದಿನಗಳಲ್ಲಿ ಈ ಕುರಿತು ಯಾವುದೇ ಸಮಸ್ಯೆ ಆಗಿ ದೂರು ಕೇಳಿಬರದಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಯಿತು. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಭೆಯಲ್ಲಿ ಸಮಸ್ಯೆಗಳನ್ನು ಹೊತ್ತು ತಂದ ಎಸ್ಸಿ, ಎಸ್ಟಿ ಸಮುದಾಯದ ಜನರಿಗೆ ಅಗತ್ಯ ಪೊಲೀಸ್ ಇಲಾಖೆ ಸಹಕಾರ, ಭದ್ರತೆ ನೀಡುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ರಾಹುಲ್ ಸಿಂಧೆ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಡಿವೈಎಸ್ಪಿ ಟಿ.ಎಸ್ ಸುಲ್ಪಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಅಡಿವೆಪ್ಪ ಸಾಲಗಲ್, ಅರವಿಂದ ಸಾಲವಾಡಗಿ, ಸುರೇಶ ಮಣೂರ, ಮುತ್ತಣ್ಣ ಸಾಸನೂರ, ಬಸವರಾಜಪೂಜಾರಿ, ವಿನಾಯಕ ಗುಣಸಾಗರ, ಗಣಪತಿ ಬಾಣಿಕೋಲ, ರಾಜಶೇಖರ ಕೂಚಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ
BBK8: ಬಿಗ್ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!
ಕುದುರೆ ಅಂದ್ರೆ ಅಶ್ವ, ಕ್ಯಾಪ್ಟನ್ ಅಂದ್ರೆ ವಿಶ್ವ; ಕಳಪೆ ಎಂದವರಿಗೆ ಕ್ಯಾಪ್ಟನ್ ಆಗುವ ಮೂಲಕ ಕೊಟ್ರು ಉತ್ತರ