ವಿಜಯಪುರ: ನಾನು ಮುಂದಿನ ಚುನಾವಣೆಗೆ ಭಾಷಣ ಮಾಡ್ತೀನೋ ಗೊತ್ತಿಲ್ಲ. 2023ರ ಚುನಾವಣೆಯಲ್ಲಿ ನಾನು ಇರ್ತಿನೋ ಇಲ್ವೊ ಗೊತ್ತಿಲ್ಲ. ನನ್ನ ಜೀವನದ ಅಂತ್ಯದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲವನ್ನ ನೀಡಿ ಎಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಭಾಷಣ ಮಾಡಿದ್ದಾರೆ. ಟೀಕೆ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ನವರ ಮಾತಿಗೆ ಯಾವುದೇ ಮನ್ನಣೆ ಕೊಡಬೇಕಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಬರುತ್ತಾರೆ: ಹೆಚ್ಡಿ ಕುಮಾರಸ್ವಾಮಿ ಹೇಳಿಕ
ಅಕ್ಟೋಬರ್ 30 ರಂದು ವಿಜಯಪುರ ಜಿಲ್ಲೆ ಸಿಂದಗಿ ಉಪಚುನಾವಣೆ ನಡೆಯಲಿದೆ. ನಾಳೆಯಿಂದ ಹಣ ಹಂಚಲು ಶುರು ಮಾಡುತ್ತಾರೆ. ಕಾಂಗ್ರೆಸ್, ಬಿಜೆಪಿಯವರು ಹಣ ಹಂಚಲು ಆರಂಭಿಸ್ತಾರೆ. ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳೋಕೆ ಏನೂ ಇಲ್ಲ. ಹೀಗಾಗಿ ಹಣ ಹಂಚಿ ಮತ ಕೇಳಲು ನಿಮ್ಮ ಬಳಿ ಬರ್ತಾರೆ ಎಂದು ಸಿಂದಗಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ನಿಜ ಬಣ್ಣ ಬಯಲು: ಈಶ್ವರ ಖಂಡ್ರೆ ವಾಗ್ದಾಳಿ
ಉಪಚುನಾವಣೆಯಿಂದ ಜೆಡಿಎಸ್ ನಿಜ ಬಣ್ಣ ಬಯಲಾಗಿದೆ ಎಂದು ವಿಜಯಪುರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸಮಾನಾಂತರ ವೈರಿಗಳು ಅಂದಿದ್ದಾರೆ. ಬಿಜೆಪಿ ಜೊತೆ ಯಾಕೆ ಹೊಂದಾಣಿಕೆ ಮಾಡಿಕೊಂಡರು? ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ವೈರಿಯಾಗಿದ್ದರೆ ಯಾಕೆ ಅವರ ಜತೆ ಮೈತ್ರಿ ಮಾಡಿಕೊಂಡ್ರಿ? ಪರಿಷತ್ ಸಭಾಪತಿ ಚುನಾವಣೆಯಲ್ಲಿ ಯಾಕೆ ಮೈತ್ರಿ? ಜನರು, ಅಲ್ಪಸಂಖ್ಯಾತರು ಅರ್ಥ ಮಾಡಿಕೊಂಡಿದ್ದಾರೆ. ಎಷ್ಟೇ ನಾಟಕ ಮಾಡಿದರೂ ಪರಿಣಾಮ ಬೀರುವುದಿಲ್ಲ. ಚುನಾವಣೆಯಲ್ಲಿ ಜೆಡಿಎಸ್ ಠೇವಣಿ ಸಹ ಉಳಿಯಲ್ಲ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಕಾಂಗ್ರೆಸ್ ಭಾರತಕ್ಕೆ ಭಯೋತ್ಪಾದನೆ, ಬಡತನ, ಭ್ರಷ್ಟಾಚಾರವನ್ನು ಕೊಡುಗೆಯಾಗಿ ನೀಡಿದೆ
ಕಾಂಗ್ರೆಸ್ ಸರ್ಕಾರ ಈ ದೇಶಕ್ಕೆ ಭಯೋತ್ಪಾದನೆ, ಬಡತನ, ಭ್ರಷ್ಟಾಚಾರ, ನಿರುದ್ಯೋಗವನ್ನು ಕೊಡುಗೆಯಾಗಿ ನೀಡಿದೆ. ಸುದೀರ್ಘ ಆಡಳಿತ ನಡೆಸಿದ್ರೂ ಅವರ ಬಳಿ ಸಾಧನೆ ಇಲ್ಲ. ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ ಎಂದು ಸಿಂದಗಿ ಪಟ್ಟಣದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದ್ದಾರೆ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಟಿಪ್ಪು ಜಯಂತಿ ಮೂಲಕ ಒಡೆಯುವ ಕೆಲಸ ಮಾಡಿದೆ. ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ: ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಮತದಾರರ ಅಂಕಿ-ಅಂಶ; ಸಂಪೂರ್ಣ ವಿವರ ಇಲ್ಲಿದೆ
Published On - 6:24 pm, Wed, 27 October 21