ವಿಜಯಪುರ, ಜ.14: ಇತ್ತೀಚೆಗೆ ಇಸ್ಲಾಂ ಧರ್ಮದಂತೆ ಮೌಲ್ವಿ ಪ್ರಾರ್ಥನೆ ಮಾಡಿದ ನಂತರ ಅಧಿಕಾರ ಸ್ವೀಕರಿಸಿ ಸುದ್ದಿಯಾಗಿದ್ದ ವಿಜಯಪುರ (Vijayapura Municipal Corporation) ಮಹಾನಗರ ಪಾಲಿಕೆ ಮೇಯರ್ ಮಾಹೇಜಬೀನ್ ಹೊರ್ತಿ ಇದೀಗ ತನ್ನ ಸರ್ಕಾರಿ ವಾಹನದ ನಾಮಫಲಕದಲ್ಲಿ ಪೂಜ್ಯ ಮಹಾಪೌರರೆಂದು ನಮೂದಿಸಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕಳೆದ ಜನೇವರಿ 9 ರಂದು ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿರುವ ಮಾಹೇಜಬೀನ್ ಹೊರ್ತಿ ಅವರಿಗೆ ಸರ್ಕಾರಿಂದ ನೀಡಲಾಗಿರುವ ವಾಹನಕ್ಕೆ ಅಳವಡಿಸಿರುವ ಬೋರ್ಡ್ನಲ್ಲಿ ಪೂಜ್ಯ ಮಹಾಪೌರರು ಎಂದು ನಮೂದು ಮಾಡಲಾಗಿದೆ. ಕಾನೂನು ಪ್ರಕಾರ ಮಹಾಪೌರರು ಎಂದಷ್ಟೇ ಬರೆಸಬೇಕು.
ಉಳಿದಂತೆ, ಸರ್ಕಾರಿ ವಾಹನದ ನಾಮಫಲಕವನ್ನು ಹೊರತುಪಡಿಸಿ ಇತರೆ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯಲ್ಲಿ ಪೂಜ್ಯ ಮಹಾಪೌರರು ಎಂದು ನಮೂದಿಸಬಹುದು. ಆದರೆ ಮೇಯರ್ ಅವರಿಗೆ ನೀಡಲಾಗಿರುವ ಸರ್ಕಾರಿ ವಾಹನದ ಬೋರ್ಡ್ನಲ್ಲಿ ಪೂಜ್ಯ ಮಹಾಪೌರರು ಎಂದು ಬರೆಸಿದ್ದನ್ನು ವಿಪಕ್ಷ ಬಿಜೆಪಿ ಸದಸ್ಯರು ವಿರೋಧಿಸುತ್ತಿದ್ದು, ಆಯುಕ್ತರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮಸೀದಿಗಳಾದ ದೇವಸ್ಥಾನಗಳು: ಉತ್ಖನನ ನಡೆಸುವಂತೆ ಪುರಾತತ್ವ ಇಲಾಖೆಗೆ ಯತ್ನಾಳ್ ಪತ್ರ
ಬಿಜೆಪಿ ಹಿಡಿತದಲ್ಲಿದ್ದ ವಿಜಯಪುರ ಮಹಾನಗರ ಪಾಲಿಕೆ ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಕಾಂಗ್ರೆಸ್ ಮಾಹೇಜಬೀನ್ ಹೊರ್ತಿ ಅವರು ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜನವರಿ 12 ರಂದು ಮಾಹೇಜಬೀನ್ ಹೊರ್ತಿ ಅವರು ಇಸ್ಲಾಂ ಧರ್ಮದಂತೆ ಮೌಲ್ವಿ ಪ್ರಾರ್ಥನೆ ಮಾಡಿದ ಬಳಿಕ ಅಧಿಕಾರ ಸ್ವೀಕರಿಸಿದ್ದರು. ಇದು ಕೆಲವರ ಆಕ್ರೋಶಕ್ಕೂ ಕಾರಣವಾಗಿತ್ತು.
ಜನವರಿ 09 ನಡೆದಿದ್ದ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮಹೆಜಬೀನ್ ಹೊರ್ತಿ ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರು. ಎಸ್ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದರು.
10 ಕಾಂಗ್ರೆಸ್ ಸದಸ್ಯರು ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ವಿಜಯಪುರ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ಬಿತ್ತು. ಬಿಜೆಪಿ ಬಹುಮತ ಇದ್ದರೂ ಸಹ ಚುನಾವಣೆ ಬಹಿಷ್ಕರಿಸಿ ಅಧಿಕಾರ ಕಳೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ