ವಿಜಯಪುರ: ಕಳೆದ ವರ್ಷ ವಿಪರೀತವಾದ ಮುಂಗಾರು ಮಳೆಯಿಂದಾಗಿ ನಿರೀಕ್ಷೆ ಮೀರಿ ಪ್ರವಾಹ ಸೃಷ್ಟಿಯಾಗಿತ್ತು. ಪರಿಣಾಮ ಕೇವಲ ನಮ್ಮ ರಾಜ್ಯ ಮಾತ್ರವಲ್ಲ, ಇಡೀ ದೇಶವೇ ಪ್ರವಾಹಕ್ಕೆ ತಲ್ಲಣಗೊಂಡಿತ್ತು. ಅದೇ ರೀತಿ ಈ ವರ್ಷವೂ ಪ್ರವಾಹ ಬರಬಹುದಾ ಎಂಬ ಚರ್ಚೆ ಈಗ ವಿಜಯಪುರ ಜಿಲ್ಲೆಯಲ್ಲಿ ಶುರವಾಗಿದೆ. ಇದಕ್ಕೆ ಕಾರಣ ಅಲ್ಪ ಪ್ರಮಾಣದ ಮಳೆಯಾದ್ರೂ ಆಲಮಟ್ಟಿ ಡ್ಯಾಂಗೆ ನೀರು ಹರಿದು ಬರಲಾರಂಬಿಸಿರೋದು.
ಹೌದು, ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರೋದ್ರಿಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಜೂನ್ 15ರ ನಂತರ ಮಳೆ ಪ್ರಮಾಣ ಜಾಸ್ತಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ.
ಮಹಾರಾಷ್ಟ್ರದಲ್ಲಿ ಮಳೆ ಆಲಮಟ್ಟಿಯಲ್ಲಿ ನೀರು
ಇತ್ತ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಕಟ್ಟಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಒಳ ಹರಿವು ಹೆಚ್ಚಾಗುತ್ತಿದೆ. ವಾಡಿಕೆಯಂತೆ ಇನ್ನೂ ಒಂದು ತಿಂಗಳ ನಂತರ ಡ್ಯಾಂಗೆ ಒಳ ಹರಿವು ಆರಂಭವಾಗಬೇಕಿತ್ತು. ಆದರೆ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸುರಿಯುತ್ತಿರುವ ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಕೃಷ್ಣಾ ನದಿಯ ಒಳ ಹರಿವು ಕೂಡಾ ಹೆಚ್ಚಾಗುತ್ತಿದೆ. ಈ ಕಾರಣದಿಂದ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರಕ್ಕೆ ಒಳ ಹರಿವು ಈಗಾಗಲೇ ಆರಂಭವಾಗಿದೆ. ಆದರೆ ಇದು ಮುಂದಿನ ದಿನಗಳಲ್ಲಿ ಕಳೆದ ವರ್ಷದಂತೆ ಮತ್ತೇ ಪ್ರವಾಹ ಉಂಟಾಗುವ ಸಾಧ್ಯತೆಯ ಆತಂಕ ಹೆಚ್ಚಿಸಿದೆ.
ನಾಲ್ಕೇ ದಿನಗಳಲ್ಲಿ 42 ಸಾವಿರ ಕ್ಯುಸೆಕ್ ಹೆಚ್ಚಿದ ಒಳಹರಿವು
ಸದ್ಯ ಮಹಾರಾಷ್ಟ್ರ ದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯದ ಒಳಹರಿವು ಜೂನ್ 16 ರಂದು 530 ಕ್ಯೂಸೆಕ್ ದಾಖಲಾಗಿತ್ತು. ಅಷ್ಟೇ ಪ್ರಮಾಣದ ಹೊರ ಹರಿವನ್ನೂ ಬಿಡಲಾಗಿತ್ತು. ಜೂನ್ 17 ರಂದು 9,916 ಕ್ಯೂಸೆಕ್ ಒಳ ಹರಿವು ದಾಖಲಾಗಿ 530 ಕ್ಯೂಸೆಕ್ ನೀರು ಹೊರ ಬಿಡಲಾಗಿತ್ತು.
ಜೂನ್ 18 ರಂದು ಒಳ ಹರಿವಿನ ಪ್ರಮಾಣ ಮತ್ತೇ ಏರಿಕೆಯಾಗಿ ಅಂದು 15,391 ಕ್ಯೂಸೆಕ್ ಒಳ ಹರಿವು ದಾಖಲಾಗಿ 530 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಈಗ ಜೂನ್ 19 ರಂದು ನಿರೀಕ್ಷೆಗೂ ಮೀರಿ ಒಳ ಹರಿವು ದಾಖಲಾಗಿದೆ. ಬೆಳಿಗ್ಗೆ 42,659 ಕ್ಯೂಸೆಕ್ ಒಳ ಹರಿವು ದಾಖಲಾಗಿದ್ದು, ಜಲಾಶಯದಿಂದ 5390 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಈಗಾಗಲೇ 511.85 ಮೀಟರ್ ನೀರು ಸಂಗ್ರಹ
ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರ ಸದ್ಯ 519.60 ಮೀಟರ್ ಸಾಮರ್ಥ್ಯವಿದ್ದು, ಒಳ ಹರಿವು ಹೆಚ್ಚಾದ ಕಾರಣ 511.85 ಮೀಟರ್‌ನಷ್ಟು ನೀರು ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಮಳೆಯಾಗುತ್ತಿದ್ದರೆ ಜುಲೈ ಅಂತ್ಯದ ವೇಳೆಗೆ ಡ್ಯಾಂ ಸಂಪೂರ್ಣ ಭರ್ತಿಯಾಗಲಿದೆ. ಮಳೆಯ ಪ್ರಮಾಣವೇನಾದ್ರೂ ಮತ್ತಷ್ಟು ಹೆಚ್ಚಾದರೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗೋದು ಮಾತ್ರ ಖಂಡಿತ.
ಕೃಷ್ಣಾ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ
ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಜಿಲ್ಲಾಡಳಿತ ನದಿ ತಟದ ಗ್ರಾಮಗಳಲ್ಲಿನ ಜನರ ಸುರಕ್ಷತೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಆರಂಭಿಸಿದೆ. ನದಿ ತಟದಲ್ಲಿ ಯಾರೂ ವಾಸ ಮಾಡಬಾರದೆಂದು ಸೂಚನೆ ನೀಡಿದೆ. ಹಾಗೇನೇ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದರೆ ಯಾರೂ ನದಿಗೆ ಇಳಿಯಬಾರದೆಂದು ಆದೇಶ ಮಾಡಿದೆ. -ಅಶೋಕ ಯಡಳ್ಳಿ.