ಮಗಳ ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ; ಚಿಕಿತ್ಸೆ ಫಲಿಸದೆ ಯುವಕ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 09, 2024 | 6:07 PM

ಕಳೆದ ಮೇ.26 ರಂದು ಮುದ್ದೇಬಿಹಾಳ(Muddebihal) ಪಟ್ಟಣದಲ್ಲಿ ಮಗಳ ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕಿತ್ಸೆ ಫಲಿಸದೆ ಯುವಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮಗಳ ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ; ಚಿಕಿತ್ಸೆ ಫಲಿಸದೆ ಯುವಕ ಸಾವು
ಮೃತ ಯುವಕ
Follow us on

ವಿಜಯಪುರ, ಜೂ.09: ಪ್ರೀತಿ-ಪ್ರೇಮದ(Love) ವಿಚಾರದಲ್ಲಿ ಮಗಳ ಪ್ರಿಯಕರನಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಸುಟ್ಟುಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ರಾಹುಲ್, ಇಂದು(ಜೂ.09) ಚಿಕಿತ್ಸೆ ಫಲಿಸದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕಳೆದ ಮೇ.26 ರಂದು ಮುದ್ದೇಬಿಹಾಳ(Muddebihal) ಪಟ್ಟಣದಲ್ಲಿ ಮೃತ ರಾಹುಲ್​ ​ಯುವತಿ ನಿವಾಸಕ್ಕೆ ಮಾತುಕತೆಗೆ ತೆರಳಿದ್ದ. ಈ ವೇಳೆ ನಡೆದ ಗಲಾಟೆಯಲ್ಲಿ ರಾಹುಲ್ ಹಾಗೂ ಯುವತಿಯ ಮೂವರು ಕುಟುಂಬಸ್ಥರು ಬೆಂಕಿಗಾಹುತಿಯಾಗಿದ್ದರು.

ಬಳಿಕ ಈ ಕುರಿತು ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದಿಂದ ಬೆಂಗಳೂರಿಗೆ ಮೇ.28 ರಂದು ಯುವಕ ರಾಹುಲ್​ನನ್ನು ರವಾನಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ರಾಹುಲ್ ಬಿರಾದಾರ್ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಯುವತಿಯ ಚಿಕ್ಕಮ್ಮ ಸೀಮಾ, ಚಿಕ್ಕಪ್ಪ ಮುತ್ತಣ್ಣ ಹಾಗೂ ಕೆಲಸಗಾರ ನೀಲಕಂಠ ಅವರಿಗೆ ಸುಟ್ಟ ಗಾಯವಾಗಿತ್ತು.
ಈ ಪೈಕಿ ಸೀಮಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ, ಉಳಿದವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ:ಮಗಳ ಪ್ರಿಯಕರನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರಾ? ಯುವತಿ ಪೋಷಕರ ವಿರುದ್ಧ ಗಂಭೀರ ಆರೋಪ

ಘಟನೆ ವಿವರ

ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಮಗಳನ್ನು ಪ್ರೀತಿಸಿದ್ದ ಯುವಕನಿಗೆ ಪೆಟ್ರೋಲ್ ಸುರಿದು ಯುವತಿ ಪೋಷಕರ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ರಾಹುಲ್​​ಗೆ ಬೆಂಕಿ ಹಚ್ಚುವ ವೇಳೆ ಯುವತಿಯ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಮನೆಗೆಲಸ ಮಾಡುತ್ತಿದ್ದವನಿಗೂ ಬೆಂಕಿ ತಾಗಿದ್ದು, ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಐದಾರು ವರ್ಷಗಳಿಂದ ರಾಹುಲ್ ಹಾಗೂ ಐಶ್ವರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಎರಡೂ ಮನೆಯವರಿಗೆ ಗೊತ್ತಾಗಿ ಕಳೆದ ಒಂದು ವರ್ಷದ ಹಿಂದೆಯೇ ಹಿರಿಯರು ರಾಜಿ ಮಾಡಿದ್ದರು. ಆಗ ಐಶ್ವರ್ಯ ಪ್ರಿಯಕರ ರಾಹುಲ್​​ನನ್ನು ಮದುವೆ ಆಗಲ್ಲ, ಪೋಷಕರು ಹೇಳಿದ ಯುವಕನನ್ನು ಮದುವೆ ಆಗುವೆ ಎಂದು ಬ್ರೇಕ್ ಅಪ್ ಮಾಡಿಕೊಂಡಿದ್ದಳು.

ಕಳೆದ ಒಂದು ವರ್ಷದಿಂದ ಇಬ್ಬರ ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ರಾಹುಲ್, ಐದಾರು ವರ್ಷ ನನ್ನ ಜೊತೆಗೆ ಓಡಾಡಿ ಹಣ ಖರ್ಚು ಮಾಡಿಸಿದ್ದೀಯಾ ಎಂದು ಯುವತಿ ಮೇಲೆ ಸಿಟ್ಟಾಗಿದ್ದ. ಇತ್ತೀಚೆಗೆ ಯುವತಿ ಮನೆ ಬಳಿ ಹೆಚ್ಚು ಓಡಾಡುತ್ತಿದ್ದ. ಯಾಕೆ ಓಡಾಡುತ್ತಿದ್ದೀಯಾ ಎಂದು ಯುವತಿ ಮನೆಯವರು ರಾಹುಲ್​​ಗೆ ನಿನ್ನೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ನಿಮ್ಮ ಮನೆಗೆ ಬರುವೆ ಎಂದು ಯುವತಿ ಮನೆಗೆ ಹೋಗಿದ್ದಾನೆ. ಆಗ ಐಶ್ವರ್ಯ ಮನೆಯವರೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ಯುವತಿ ತಂದೆ ಅಪ್ಪು ಮದರಿ ರಾಹುಲ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆಂದು ಆರೋಪಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sun, 9 June 24