
ವಿಜಯಪುರ, ಅಕ್ಟೋಬರ್ 02: ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ವಾತಾವರಣ ಮನೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಂಟಾಗುತ್ತಿದ್ದ ಭೂಕಂಪನದ ಅನುಭವ ಇದೀಗ ಮತ್ತೆ ಶುರುವಾಗಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ರಿಕ್ಟರ್ ಮಾಪನದಲ್ಲಿ ದಾಖಲಾಗಿದ್ದು, ಜನರು ಭಯಗೊಳ್ಳುವಂತೆ ಮಾಡಿದೆ.
ಕಳೆದ ಕೆಲ ವರ್ಷಗಳಿಂದ ವಿಜಯಪುರ ಜಿಲ್ಲೆಯ ತಿಕೋಟಾ, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕಿನ ಭಾಗಗಳಲ್ಲಿ ಭೂಕಂಪನವಾಗಿರುವ ವರದಿಯಾಗಿದೆ. ಇದೀಗ ಬಸವನಬಾಗೇವಾಡಿ ತಾಲೂಕಿನಲ್ಲಿ ಸೆಪ್ಟೆಂಬರ್ನಲ್ಲಿ ಮೂರು ಬಾರಿ ಭೂಕಂಪನವಾಗಿರುವ ವರದಿಯಾಗಿದೆ. ಸೆಪ್ಟೆಂಬರ್ 30ರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಬಸವನಬಾಗೇವಾಡಿ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3.9 ಕಿ.ಮೀ ದೂರದ ಕೇಂದ್ರಬಿಂದುವಿನಲ್ಲಿ ಭೂಕಂಪನ ಸಂಭವಿಸಿದೆ. ಸೆಪ್ಟೆಂಬರ್ ಒಂದೇ ತಿಂಗಳಲ್ಲೇ ಮೂರು ಬಾರಿ ಲಘು ಭೂಕಂಪನ ಸಂಭವಿಸಿದೆ. ಹೀಗೆ ಪದೇ ಪದೇ ಭೂಮಿ ಕಂಪಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: Earthquake in Karnataka: ಕಲಬುರಗಿ ಮತ್ತು ವಿಜಯಪುರದಲ್ಲಿ ಕಂಪಿಸಿದ ಭೂಮಿ
ಭೂಮಿಯಿಂದ 10 ಕಿ.ಮೀ ಆಳದಲ್ಲಿ ಸಂಭವಿಸಿರುವ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 28ರ ಮಧ್ಯರಾತ್ರಿ 12.26ರ ಸುಮಾರಿಗೆ ತಾಲೂಕಿನ ದಿಂಡಿವಾರ ಗ್ರಾಮ ಪಂಚಾಯಿತಿ ಕಚೇರಿಯಿಂದ ಸುಮಾರು 1.1 ಕಿ.ಮೀ ನೈಋತ್ಯ ದಿಕ್ಕಿನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿತ್ತು. ಇದರ ತೀವ್ರತೆಯೂ 3.5ರಷ್ಟಿತ್ತು. ಅಷ್ಟೇ ಅಲ್ಲದೆ ಸೆಪ್ಟೆಂಬರ್ 17ರಂದು ನಸುಕಿನ ಜಾವ 5.30ರ ಸುಮಾರಿಗೆ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸಮೀಪದಲ್ಲಿ 3.7 ತೀವ್ರತೆಯ ಲಘು ಭೂಕಂಪನ ಸಂಭವಿಸಿತ್ತು. ಹೀಗೆ ಒಂದೇ ತಿಂಗಳಲ್ಲಿ ತಾಲೂಕಿನಲ್ಲಿ ಮೂರು ಬಾರಿ ಭೂಮಿ ಕಂಪಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
‘ಇನ್ನು ಪದೇ ಪದೇ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಭೂಕಂಪನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಅಧ್ಯಯನ ನಡೆಸಬೇಕು. ಭೂಕಂಪನಕ್ಕೆ ಕಾರಣವೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಿ, ಸಾರ್ವಜನಿಕರಲ್ಲಿರುವ ಆತಂಕವನ್ನು ದೂರ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಲಘು ಭೂಕಂಪನ ಹಿನ್ನೆಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಭೂವಿಜ್ಞಾನಿಗಳ ತಂಡ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ, ಭೂಕಂಪನದ ಸ್ವರೂಪ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ತಹಶೀಲ್ದಾರ್ ವೈ ಎಸ್ ಸೋಮನಕಟ್ಟಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆ ಮಾಡಿದ್ದಾರೆ. ಈ ವೇಳೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಚಂದ್ರಶೇಖರ ಕೆ. ಹಾಗೂ ಹಿರಿಯ ಭೂವಿಜ್ಞಾನಿ ಮಹೇಶ ಬಿರಾಜನವರ ಭೂಕಂಪನದ ಕುರಿತು ಮಾಹಿತಿ ನೀಡಿದರು.
‘ಭೂಕಂಪನ ಆಗುತ್ತಿರುವ ಕಾರಣ ಮಣ್ಣಿನ ಗುಣ, ಭೂ ಚಲನೆ’ ಕುರಿತು ಭೂವಿಜ್ಞಾನಿ ಚಂದ್ರಶೇಖರ ಅವರು ಮಾಹಿತಿ ನೀಡಿದರು. ‘ಭೂಮಿಯಾಳದಲ್ಲಿ ಸುಣ್ಣದ ಕಲ್ಲುಗಳ ಮಾದರಿ ಮಣ್ಣಿನ ಗುಣವಿದೆ. ಕಲ್ಲು ಪದರುಗಳಿದ್ದು, ಭೂಮಿ ಚಲನೆ ವೇಳೆ ನಡೆಯುವ ಸಹಜ ಪ್ರಕ್ರಿಯೆ ಇದಾಗಿದೆ. ಸದ್ಯ 3.7 ಗರಿಷ್ಟ ತೀವ್ರತೆಯ ಕಂಪನವಾಗಿದೆ. ಇದರಿಂದ ಯಾವುದೇ ತೊಂದರೆಯಿಲ್ಲ, ಜನರು ಭಯಗೊಳ್ಳಬಾರದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಗುಂಡಿನ ಮೊರೆತ: ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ ಫೈರಿಂಗ್; ಆರೋಪಿ ಅರೆಸ್ಟ್
ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿರುವ ಭೂಕಂಪನ ಎಲ್ಲರ ಭಯಕ್ಕೆ ಕಾರಣವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಈಗ ಸಂಭವಿಸುತ್ತಿರುವ ಮತ್ತು ದಾಖಲಾಗಿರುವ ಭೂಕಂಪನ ಯಾವುದೇ ರೀತಿಯ ಮಾರಕವಲ್ಲ ಎಂದಿದ್ದಾರೆ. ಆದರೂ ಜನರು ಭಯಗೊಂಡಿದ್ದಾರೆ. ಹೆಚ್ಚಿನ ತೀವ್ರತೆಯ ಕಂಪನವಾದರೆ ಅಪಾಯ ಎಂದು ಜನರು ಚರ್ಚೆ ಮಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.