ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ

ವಿಜಯಪುರ ಜಿಲ್ಲೆಯಲ್ಲಿ ಬಸ್-ಬೈಕ್ ಡಿಕ್ಕಿಯಾಗಿ 25 ವರ್ಷದ ಯುವಕ ಸಜೀವ ದಹನವಾಗಿದ್ದಾನೆ. ಮೇಲ್ನೋಟಕ್ಕೆ ಅಪಘಾತವೆನಿಸಿದರೂ, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ತನ್ನ ಸಾವಿಗೆ ಕೆಲವರನ್ನು ದೂಷಿಸಿ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರೋದು ಅನುಮಾನಕ್ಕೆ ಇಂಬು ನೀಡಿದೆ. ಹೀಗಾಗಿ ಪೊಲೀಸರು ಅಪಘಾತ ಹಾಗೂ ಆತ್ಮಹತ್ಯೆ ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಬಸ್​​ಗೆ ಬೈಕ್​​ ಡಿಕ್ಕಿಯಾಗಿ ಯುವಕ ಸಾವು: ಇದು ಅಪಘಾತವೋ? ಆತ್ಮಹತ್ಯೆಯೋ? ಎಂಬುದೇ ಈಗ ಅನುಮಾನ
ಮೃತ ಯುವಕ
Image Credit source: Tv9 Kannada
Edited By:

Updated on: Mar 31, 2026 | 4:17 PM

ವಿಜಯಪುರ, ಮಾರ್ಚ್​​ 31: ಸಾರಿಗೆ ಬಸ್​, ಬೈಕ್​ ನಡುವೆ ಡಿಕ್ಕಿಯಾದ ಪರಿಣಾಮ ಹೊತ್ತಿಕೊಂಡ ಬೆಂಕಿಯಲ್ಲಿ ಬೈಕ್​​ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್‌ಗೇಟ್ ಬಳಿ ನಡೆದಿದೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್​​ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್​​ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್​​ ಕೂಡ ಬೆಂಕಿಗೆ ಆಹುತಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಭೀಕರ ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕೆಲ ಕಾಲ ಟ್ರಾಫಿಕ್​​ ಜಾಮ್​​ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಮೃತ ಬೈಕ್​​ ಸವಾರ ಯಾರೆಂಬ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಆ ಬಗ್ಗೆ ತನಿಖೆಗಿಳಿದ ಪೊಲೀಸರು ಮೃತನನ್ನು ಅಭಿಷೇಕ ನಾಗರಾಳ ಎಂದು ಖಚಿತಪಡಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ವಿಜಯಪುರದಲ್ಲೊಂದು ಮನಕಲಕುವ ಘಟನೆ; ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಆತ್ಮಹತ್ಯೆ ಶಂಕೆ

ಇನ್ನು ಮೇಲ್ನೋಟಕ್ಕೆ ಇದೊಂದು ಅಪಘಾತ ಎಂಬಂತೆ ಕಂಡುಬಂದರೂ ಪ್ರೀತಿ ವಿಚಾರಕ್ಕೆ ಅಭಿಷೇಕ್​ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಂಜನಾ ಎಂಬ ಯುವತಿಯನ್ನು‌ ನನ್ನಿಂದ ದೂರ ಮಾಡಿದ್ದಾರೆ. ಹಾಗಾಗಿ ನಾನು ಬದುಕಲ್ಲ ಎಂದು ವಿಡಿಯೋ ಮಾಡಿ ಅದನ್ನು ಆತ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದ. ಹೀಗಾಗಿ ಬೇಕಂತಲೇ ಬಸ್​ಗೆ ಬೈಕ್​ ಡಿಕ್ಕಿ ಹೊಡೆದಿರುವ ಅನುಮಾನ ಬಂದಿದೆ. ಸಂಜನಾಳನ್ನು ನನ್ನಿಂದ ದೂರು ಮಾಡಿದವರೇ ನನ್ನ ಸಾವಿಗೆ ಕಾರಣ. ವೀರೇಶ್ ನಂದೂರ್, ಚೈತ್ರಾ ನಂದೂರ್, ಸಂಬಂಧಿ ನವೀನ್‌ಕುಮಾರ್ ಪಾಟೀಲ್ ಅವರೇ ಆಕೆಯನ್ನು ತನ್ನಿಂದ ದೂರ ಮಾಡಿದ್ದು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಸಾಯುತ್ತೇನೆ ಎಂದು ಅಭಿಷೇಕ್ ವಿಡಿಯೋ ಪೋಸ್ಟ್ ಮಾಡಿದ್ದ. ಹೀಗಾಗಿ ಎಲ್ಲ ಆಯಾಮಗಳಲ್ಲಿಯೂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಆ ಬಳಿಕವೇ ಗೊತ್ತಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us