ವಿಜಯಪುರ: ಮನೆಯ ವಿದ್ಯುತ್ ಬಿಲ್ ಕಟ್ಟದ ಕಾರಣ ಮನೆಗೆ ಬಂದಿದ್ದ ಹೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಮಚ್ಚು ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ನಡೆದಿದೆ. ಒಂದು ವಾರದ ಹಿಂದೆಯೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭೀಮು ಮನಗಳೂಳಿಎನ್ನುವ ವ್ಯಕ್ತಿ ಮನೆಯ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡ ಹಿನ್ನಲೆಯಲ್ಲಿ ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಆತ, ನಮ್ಮ ಮನೆಯ ವಿದ್ಯುತ್ನ್ನು ಹೇಗೆ ಕಟ್ ಮಾಡುತ್ತೀರಾ ಎಂದು ಬೆದರಿಕೆ ಹಾಕಿದ್ದಾನೆ. ಇದೇ ವೇಳೆ ಮಚ್ಚು ತೋರಿಸಿ ಅಧಿಕಾರಿಗಳನ್ನು ಹೆದರಿಸಿದ್ದಾನೆ. ಹೆಸ್ಕಾಂ ಎಇಇಎ ಎಸ್ ದೊಡಮನಿ ಹಾಗೂ ಇತರ ಸಿಬ್ಬಂದಿಗಳು ಭೀಮು ಮನೆಗೆ ವಿಚಾರಿಸಲು ಭೇಟಿ ನೀಡದ ವೇಳೆ ಈ ಘಟನೆ ನಡೆದಿದೆ.
ಭೀಮು ಮಚ್ಚು ತೋರಿಸುತ್ತಿದ್ದಂತೆಯೇ ಸಿಟ್ಟಿಗೆದ್ದ ಅಧಿಕಾರಿಗಳು ತಾಕತ್ತಿದ್ದರೆ ಕೊಚ್ಚು ಎಂದು ಸವಾಲು ಹಾಕುವ ಮೂಲಕ ಭೀಮು ಮನೆಯ ಎದುರು ಹೋಗಿದ್ದಾರೆ. ಕೈಗೆ ಸಿಕ್ಕ ಕಟ್ಟಿಗೆಗಳನ್ನು ಹಿಡಿದು ಹೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿ ಭೀಮುಗೆ ಮರು ಸವಾಲು ಹಾಕಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ಭೀಮು ಮನೆಯವರು ಆತನನ್ನು ತಡೆದು ಮನೆಯೊಳಗೆ ಕರೆದೊಯ್ದಿದ್ದಾರೆ. ಗಲಾಟೆ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಗ್ರಾಮಸ್ಥರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಭೀಮು ಮನಗೂಳಿ ಮೇಲೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸದಂತೆ ಕೇಳಿಕೊಂಡಿದ್ದಾರೆ. ಗ್ರಾಮಸ್ಥರ ಮನವಿ ಮೇರೆಗೆ ಪೊಲೀಸರಿಗೆ ದೂರು ನೀಡದೆ ಹೆಸ್ಕಾಂ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು
ಚಾಮರಾಜನಗರ: ವಾಣಿಜ್ಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚಾಮರಾಜನಗರದ ವಾಣಿಜ್ಯ ತೆರಿಗೆ ಇಲಾಖೆಯ ರವಿಕುಮಾರ್ ಹಾಗೂ ಅವಿನಾಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ಚಾಮರಾಜನಗರ ತಾಲೂಕಿನ ನಾಗವಳ್ಳಿಯ ಆಟೋಪಾರ್ಟ್ಸ್ ಅಂಗಡಿ ಮಾಲೀಕ ತೌಸಿಫ್ ಎನ್ನುವವರ ಬಳಿ ಜಿಎಸ್ಟಿ ಹಣ ಕಟ್ಟದೆ ತಮಗೆ ನೀಡುವಂತೆ ಅಧಿಕಾರಿಗಳು ಹಣ ವಸೂಲಿ ಮಾಡಿದ್ದರು. ಒಟ್ಟು 7ಸಾವಿರ ರೂ ಲಂಚ ಪಡೆದು, 2 ಸಾವಿರ ರೂ ಹಾಗೂ ಅವಿನಾಶ್ 3 ಸಾವಿರ ರೂ. ಗಳಂತೆ ತೆಗೆದುಕೊಂಡಿದ್ದರು. ಈ ವೇಳೆ ಎಸಿಬಿ ಬಲೆಗೆ ಇಬ್ಬರು ಅಧಿಕಾರಿಗಳು ಸಿಕ್ಕಿಬಿದ್ದಿದ್ದು, ಇಬ್ಬರನ್ನೂ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Published On - 6:07 pm, Sat, 4 December 21