ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞ ಡಾ ವಿವೇಕ್ ಜವಳಿ ಅವರು ಮೂರನೇ ಅಲೆ ಬಗ್ಗೆ ಎಚ್ಚರಿಸಿದ್ದು ಜನರು ಎರಡನೇ ಅಲೆಯ ತೀವ್ರತೆ ಕೊನೆಗೊಂಡ ನಂತರ ಯಾವ ಕಾರಣಕ್ಕೂ ಯಾಮಾರಬಾರದೆಂದು ಹೇಳಿದ್ದಾರೆ. ಫೇಸ್ಬುಕ್ನಲ್ಲಿ ಅವರು ಒಂದು ಪೋಸ್ಟ್ ಮೂಲಕ ಮೂರನೇ ಅಲೆಯ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಅಲೆ ಭಾರತವನ್ನು ತಲ್ಲಣಿಸುವಂತೆ ಮಾಡಿದೆ ಎಂದು ಹೇಳಿರುವ ಅವರು, ದೇಶದ ಎಲ್ಲಾ ಮೂಲೆಗಳಲ್ಲಿ ಜನರು ಭೀತಿಗೊಳಗಾಗಿದ್ದಾರೆ ಎಂದಿದ್ದಾರೆ.
ಸುಮಾರು 4 ತಿಂಗಳ ಕಾಲ (120 ದಿನ) ಕಾಡಲಿರುವ ಎರಡನೇ ಅಲೆಯು ಮೊದಲ ಅಲೆಗಿಂತ ವೇಗವಾಗಿ ತನ್ನ ಕದಂಬ ಬಾಹುಗಳನ್ನು ಚಾಚಿದೆ. ಕೊರೊನಾ ರೂಪಾಂತರಿ ವೈರಸ್ ಭಾರತದಲ್ಲಿ ಮೊದಲು ಪ್ರವೇಶವಾಗಿದ್ದು ಮುಂಬೈ ಮಹಾನಗರಿಯಲ್ಲಿ ಎಂದು ಹೇಳಿರುವ ಡಾ ಜವಳಿ ಮುಂದಿನ 20-25 ದಿನಗಳಲ್ಲಿ ಇದರ ತೀವ್ರತೆ ಇಳಿಮುಖಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಬಹುದು ಎನ್ನುತ್ತಾರೆ.
ಮೂರನೇ ಅಲೆ ಬಗ್ಗೆ ಪ್ರಪಂಚದ ಎಲ್ಲ ಜನರಿಗೆ ಗೊತ್ತಿದೆ ಅದು ಎರಡನೆ ಅಲೆ ತಗ್ಗಿದ ಸುಮಾರು 100 ದಿಗಳ ನಂತರ ಆರಂಭವಾಗಲಿದೆ. ಹೀಗಾಗಿ ಅದನ್ನು ಎದುರಿಸಲು ನಾವು ಸನ್ನದ್ಧರಾಗಿರಬೇಕು, ಯಾವ ಕಾರಣಕ್ಕೂ ಪೀಡೆ ತೊಲಗಿತು ಎಂಬ ನಿರಾಳ ಭಾವ ತಾಳಬಾರದೆಂದು ಡಾ ಜವಳಿ ಹೇಳುತ್ತಾರೆ. ಮೂರನೇ ಅಲೆ ವಿರುದ್ಧ ನಾವು ಜಯಿಸಬೇಕಾದರೆ, ಮುಂದಿನ ಮೂರು ತಿಂಗಳ ಅವಧಿಯಲ್ಲಿ ಎಲ್ಲ ಭಾರತೀಯರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಕೊವಿಡ್-19 ಪಿಡುಗಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಅವು ಅನೂಚಾನಾಗಿ ಜಾರಿಗೊಳ್ಳವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಮೂರನೆ ಅಲೆಯ ಸಂದರ್ಭದಲ್ಲಿ ಜನರು ವರ್ತನೆ ಹೇಗಿಬೇಕೆನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಜನರಿಗೆ ರವಾನೆಯಾಗಬೇಕು ಎಂದು ಡಾ ಜವಳಿ ಹೇಳಿದ್ದಾರೆ. ಎರಡನೇ ಮತ್ತು ಮೂರನೇ ಅಲೆಗಳ ನಡುವಿನ ಸಮಯವನ್ನು ಸೋಂಕನ್ನು ಎದುರಿಸುವ ತಯಾರಿಗೋಸ್ಕರ ಬಳಸಿಕೊಳ್ಳುವ ಗಂಭೀರ ಪ್ರಯತ್ನ ಮಾಡಬೇಕು ಎಂದು ಅವರು ಹೇಳುತ್ತಾರೆ.
ಕೊವಿಡ್ ವಿರುದ್ಧ ನಾವೆಲ್ಲ ಸಮರದಲ್ಲಿ ಭಾಗಿಯಾಗಿದ್ದೇವೆ, ಹಾಗಾಗಿ ಈ ಹೋರಾಟದಲ್ಲಿ ಚಿಲ್ಲರೆ ರಾಜಕಾರಣಕ್ಕೆ, ದೋಷಾರೋಪಣೆಗಳಿಗೆ ಆಸ್ಪದ ನೀಡದೆ, ಎಲ್ಲರೂ ಒಗ್ಗಟ್ಟಿನಿಂದ, ಒಂದೇ ಮನಸ್ಸಿನಿಂದ ಹೋರಾಡಿದಲ್ಲಿ ಮಾತ್ರ ಅದು ಮಾಡಬಹುದಾದ ಹಾನಿಯನ್ನು ಕಡಿಮೆ ಮಾಡಬಹುದು ಎಂದು ಡಾ ಜವಳಿ ಹೇಳಿದ್ದಾರೆ. ಹಿಂದೆ ಆಗಬೇಕಿದ್ದೆಲ್ಲ ಆಗಿ ಹೋಗಿದೆ, ಮಾಡಬೇಕಾಗಿದ್ದನ್ನು ಮಾಡಿಯಾಗಿದೆ. ಆದರೆ ಆಗ ಕಲಿತಿರುವ ಪಾಠಗಳನ್ನು ನಾವು ಯಾವತ್ತೂ ಮರೆಯಬಾರದು ಎಂದು ಹೇಳುತ್ತಾ ಡಾ ವಿವೇಕ್ ಜವಳಿ ಅವರ ಸೈನ್ ಆಫ್ ಮಾಡಿದ್ದಾರೆ.
Published On - 10:40 pm, Fri, 23 April 21