AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಹೆಚ್ಚುವರಿ ರೆಮ್​ಡೆಸಿವಿರ್ ಒದಗಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ; ಮೈಲಾನ್ ಕಂಪನಿಗೆ ಸಚಿವ ಸದಾನಂದಗೌಡ ಭೇಟಿ

ಫಾರ್ಮಾ ಕಂಪನಿಗಳು ತಮ್ಮ ರೆಮ್​ಡೆಸಿವಿರ್ ಉತ್ಪಾದನೆಯಲ್ಲಿ ಶೇ 70ರಷ್ಟನ್ನು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.

ಕರ್ನಾಟಕಕ್ಕೆ ಹೆಚ್ಚುವರಿ ರೆಮ್​ಡೆಸಿವಿರ್ ಒದಗಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ; ಮೈಲಾನ್ ಕಂಪನಿಗೆ ಸಚಿವ ಸದಾನಂದಗೌಡ ಭೇಟಿ
ರೆಮ್​ಡೆಸಿವಿರ್ ಇಂಜೆಕ್ಷನ್ (ಪ್ರಾತಿನಿಧಿಕ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 23, 2021 | 11:12 PM

Share

ಬೆಂಗಳೂರು: ಮೈಲಾನ್ ರೆಮ್​ಡೆಸಿವಿರ್ ಉತ್ಪಾದನಾ ಘಟಕಕ್ಕೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಶುಕ್ರವಾರ ಭೇಟಿ ನೀಡಿದರು. ಈ ವೇಳೆ ರಾಜ್ಯದ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ಔಷಧಿ ಒದಗಿಸಲು ಕಂಪನಿ ಸಮ್ಮತಿಸಿತು. ರಾಜ್ಯಕ್ಕೆ ಇಂದು 15,000 ರೆಮ್​ಡೆಸಿವಿರ್ ಬಾಟಲಿಗಳನ್ನು ಒದಗಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ರೆಮ್​ಡೆಸಿವಿರ್ ಉತ್ಪಾದನೆ ಮತ್ತು ಪೂರೈಕೆ ಏರುಪೇರಾದ ಕಾರಣ ಕಳೆದ ವಾರದಿಂದ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಫಾರ್ಮಾ ಕಂಪನಿಗಳು ತಮ್ಮ ರೆಮ್​ಡೆಸಿವಿರ್ ಉತ್ಪಾದನೆಯಲ್ಲಿ ಶೇ 70ರಷ್ಟನ್ನು ಕೇಂದ್ರ ಸರ್ಕಾರವು ಸೂಚಿಸುವ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ. ಇನ್ನುಳಿದ ಶೇ 30ರಷ್ಟು ಉತ್ಪಾದನೆಯ ವಿತರಣೆಯನ್ನು ಕಂಪನಿಗಳ ವಿವೇಚನೆಗೆ ಬಿಡಲಾಗಿದೆ.

ಕಳೆದ ಬುಧವಾರ ಕೇಂದ್ರವು ಕರ್ನಾಟಕಕ್ಕೆ ಏಪ್ರಿಲ್ 30ರವರೆಗಿನ ಬಳಕೆಗಾಗಿ 25,352 ರೆಮ್​ಡೆಸಿವಿರ್ ಬಾಟಲಿಗಳನ್ನು ಹಂಚಿಕೆ ಮಾಡಿತ್ತು. ಆದರೆ ರಾಜ್ಯವು ಹೆಚ್ಚುವರಿ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಔಷಧ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡರು ಮಧ್ಯಪ್ರವೇಶಿಸಬೇಕಾಗಿ ಬಂತು. ಹೀಗಾಗಿ ರಾಜ್ಯಕ್ಕೆ ನಿನ್ನೆ ಗುರುವಾರ ಹೆಚ್ಚುವರಿಯಾಗಿ 25,000 ರೆಮ್​ಡೆಸಿವಿರ್ ಬಾಟಲಿಗಳ ಹಂಚಿಕೆಯಾಯಿತು. ಈ ವಾರದ ಬಳಕೆಗಾಗಿ ರಾಜ್ಯಕ್ಕೆ ಹಂಚಿಕೆಯಾದ ಒಟ್ಟು 50,352 ರೆಮ್​ಡೆಸಿವಿರ್​ನಲ್ಲಿ ಮುಕ್ಕಾಲು ಭಾಗವನ್ನು ಮೈಲಾನ್ ಕಂಪನಿಯೇ ಪೂರೈಸಬೇಕಿದೆ.

ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಮೈಲಾನ್ ಕಂಪನಿ ಔಷಧ ಉತ್ಪಾದನಾ ಘಟಕಕ್ಕೆ ಇಂದು ಭೇಟಿ ನೀಡಿದ ಸದಾನಂದ ಗೌಡರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಬೊಮ್​ಜೈ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯಕ್ಕೆ ಇಂದು 15000 ವೈಯಲ್ಸ್ ರೆಮ್​ಡೆಸಿವಿರ್ ಬಿಡುಗಡೆ ಆಗಿದೆ. ಮೈಲಾನ್ ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಂಪನಿಯು ವಿವೇಚನಾಧೀಕಾರದಲ್ಲಿ ಬರುವ ಶೇ 30ರಷ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್ ವೈಯಲ್ಸ್ ಒದಗಿಸಲು ಒಪ್ಪಿಕೊಂಡಿದೆ ಎಂದರು.

ಅದೇ ರೀತಿ ಅಮೆರಿಕದ ಗಿಲೀಡ್ ಸೈಯನ್ಸಸ್ ಕಂಪನಿಯಿಂದ ರೆಮ್ಡೆಸಿವಿರ್ ಉತ್ಪಾದನೆಯ ಲೈಸನ್ಸ್ ಪಡೆದಿರುವ ಭಾರತದ ಇತರ ಫಾರ್ಮಾ ಕಂಪನಿಗಳ ಜೊತೆಗೂ ಹೆಚ್ಚುವರಿ ಚುಚ್ಚುಮದ್ದು ಪೂರೈಸುವ ಬಗ್ಗೆ ಮಾತುಕತೆ ನಡೆದಿದೆ. ಹಾಗಾಗಿ ಇನ್ನೊಂದು ವಾರದಲ್ಲಿ ಈ ಚುಚ್ಚುಮದ್ದು ವಿಪುಲವಾಗಿ ಲಭ್ಯವಾಗಲಿದೆ. ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಪ್ರಶ್ನೆಯೊಂದಿಗೆ ಉತ್ತರಿಸಿದ ಸಚಿವರು ರೆಮ್​ಡೆಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ. ಕಳೆದ ಹಂಗಾಮಿನಲ್ಲಿ ರಸಗೊಬ್ಬರ ಕಾಳಸಂತೆ ಮಾಡಿದ ನೂರಕ್ಕೂ ಹೆಚ್ಚು ವಿತರಕರ ಲೈಸನ್ಸ್ ರದ್ದುಗೊಳಿಸಲಾಗಿತ್ತು. ಈ ವಿಚಾರವಾಗಿಯೂ ಕಠಿಣ ಕ್ರಮ ಜಾರಿಗೊಳ್ಳಲಿದೆ ಎಂದರು. ಸಂಸದ ಪಿ.ಸಿ.ಮೋಹನ್, ಶಾಸಕ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎನ್.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ದುಪ್ಪಟ್ಟಾಗಲಿದೆ ರೆಮ್​ಡೆಸಿವಿರ್ ಉತ್ಪಾದನಾ ಸಾಮರ್ಥ್ಯ ದೆಹಲಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್​ ಔಷಧವನ್ನು ಇನ್ನೂ 25 ಹೊಸ ಸ್ಥಳಗಳಲ್ಲಿ ಉತ್ಪಾದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪ್ರತಿ ತಿಂಗಳಿಗೆ ರೆಮ್​ಡೆಸಿವಿರ್ ಉತ್ಪಾದನಾ ಸಾಮರ್ಥ್ಯವನ್ನು 40 ಲಕ್ಷ ಬಾಟಲಿಯಿಂದ ತಿಂಗಳಿಗೆ 90 ಲಕ್ಷ ಬಾಟಲಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಜೀವರಕ್ಷಕ ಔಷಧಿಯ ಸರಾಸರಿ ಉತ್ಪಾದನೆ ದೇಶದಲ್ಲಿ ಶೀಘ್ರದಲ್ಲಿಯೇ ದುಪ್ಪಟ್ಟಾಗಲಿದೆ. ಪ್ರತಿದಿನದ ಉತ್ಪಾದನೆಯು ಶೀಘ್ರದಲ್ಲಿಯೆ 3 ಲಕ್ಷ ಬಾಟಲಿಗೆ ಏರಿಕೆಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ.

(More Remdesivir to Karnataka Central govt interferes Minister Sadananda Gowda visits to Mylan company)

ಇದನ್ನೂ ಓದಿ: Explainer: ಕೊವಿಡ್ ಚಿಕಿತ್ಸೆಗಾಗಿ ಸ್ಟೆಪ್ ಡೌನ್ ಆಸ್ಪತ್ರೆ; ಯಾರು ಕೊಡ್ತಾರೆ ಚಿಕಿತ್ಸೆ? ಎಷ್ಟಿರುತ್ತೆ ದರ? ದಾಖಲಾಗುವುದು ಹೇಗೆ?

ಇದನ್ನೂ ಓದಿ: Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ