ಹಳ್ಳಿಗಳಲ್ಲಿ ರೈತರು ಅಥವಾ ಜಮೀನು ಮಾಲೀಕರು ಆಗಾಗ “ಪೋಡಿ” ಮಾಡಿಸಬೇಕು ಎಂಬ ಪದವನ್ನು ಬಳಕೆ ಮಾಡುತ್ತಿರುತ್ತಾರೆ. ಹಾಗಿದ್ದರೆ, ಈ ಪೋಡಿ ಎಂದರೇನು? ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿಯಿಂದಾಗುವ ಉಪಯೋಗಗಳೇನು? ಎಂಬುವುದರ ಮಾಹಿತಿ ಇಲ್ಲಿ ವಿವರಿಸಲಾಗಿದೆ.
ಪೋಡಿ ಎಂದರೆ ಜಮೀನಿನ ದುರಸ್ತಿ ಭಾಗ ಮಾಡುವುದು ಎಂದರ್ಥ. ಉದಾ: ಒಂದು ಸರ್ವೆನಂಬರ್ನಲ್ಲಿ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.
ಒಂದು ಸರ್ವೆ ನಂಬರ್ನಲ್ಲಿ ಹಲವಾರು ಹಿಸ್ಸಾ ಸಂಖ್ಯೆಗಳಿರುತ್ತವೆ. ಆದರೆ, ಭೂ ಮಾಲಿಕತ್ವದ ಹೆಸರು ಒಂದೇ ಪಹಣಿಯಲ್ಲಿರುತ್ತದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಮತ್ತು ಸರ್ಕಾರದ ಸೌಲಭ್ಯಗಳು ಕೂಡ ದೊರೆಯುವುದಿಲ್ಲ. ಹೀಗಾಗಿ, ಜಮೀನಿನ ಮಾಲೀಕರು ಪೂಡಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುತ್ತದೆ. ಆಗ, ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಡಿ ಏಕ ಮಾಲೀಕತ್ವದ ಪಹಣಿ ದೊರೆಯುತ್ತದೆ.
ಉದಾಹರಣೆ: ಒಂದು ಸರ್ವೆನಂಬರ್ನಲ್ಲಿ ಐದು ಹಿಸ್ಸಾಗಳಿವೆ. ಆದರೆ, ಪ್ರತ್ಯೇಕ ಪಹಣಿ ಇರುವುದಿಲ್ಲ. ಐದು ಹಿಸ್ಸಾ ಸಂಖ್ಯೆಗಳು ಅಥವಾ ಮಾಲೀಕರ ಹೆಸರುಗಳು ಮತ್ತು ಜಮೀನಿನ ವಿವರ ಒಂದೇ ಪಹಣಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಸರ್ವೆ ನಂಬರ್ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತಾತ್ಕಾಲಿಕ ಪೋಡಿ ಮಾಡಿಸಬೇಕು.
ಜಮೀನು ಮಾಲೀಕನ ಆಧಾರ ಕಾರ್ಡ್ ಹಾಗೂ ಪಹಣಿ ಕಡ್ಡಾಯವಾಗಿ ಬೇಕು. ಇನ್ನೂ ಹೆಚ್ಚಿನ ದಾಖಲಾತಿಗಳ ಮಾಹಿತಿಗಾಗಿ ತಹಸೀಲ್ದಾರ ಕಚೇರಿ ಅಥವಾ ನಾಡಕಚೇರಿಗೆ ಸಂಪರ್ಕಿಸಿ. ಪೋಡಿ ಮಾಡಿಸಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಪೋಡಿಯಲ್ಲಿ ಹೆಸರು ಬದಲಾವಣೆಯಾಗುವುದಿಲ್ಲ. ಕೇವಲ ಗಡಿ ರೇಖೆ ಮಾತ್ರ ಗುರುತು ಮಾಡಲಾಗುತ್ತದೆ.
ಏಕ ಮಾಲಿಕತ್ವವಿದ್ದರೆ ಕಿಸಾನ್ ಕ್ರೇಡಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲೀಕತ್ವ ಖಾತ್ರಿ ಪಡೆದುಕೊಳ್ಳಬಹುದು. ಒತ್ತುವರಿಯಾಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳು ಪಡೆಯಲು ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಪೋಡಿ ಮಾಡುವುದು ಕಡ್ಡಯವಾಗಿದೆ. ಪೋಡಿ ಮಾಡಿಸುವುದರಿಂದ ಒಂದು ಆರ್ಟಿಸಿ ಒಂದು ನಕ್ಷೆ ದೊರೆಯುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:09 am, Sat, 11 January 25