ಬೀದರ್: ಶತಮಾನಗಳಷ್ಟು ಪುರಾತನವಾದ ಬಾವಿಗಳು ಜಿಲ್ಲೆಯಲ್ಲಿ ಸಾಕಷ್ಟಿವೆ. ಎಂತಹ ಭೀಕರ ಬರಗಾಲದಲ್ಲಿಯೂ ಇಲ್ಲಿನ ಬಾವಿಯಲ್ಲಿ ನೀರು ಖಾಲಿಯಾಗಲ್ಲ. ಆದರೆ ಈಗ ಅಪರೂಪದಂತಿರುವ ಇಂತಹ ಐತಿಹಾಸಿಕ ಬಾವಿಗಳ ಸುತ್ತಮುತ್ತಲು ಗಿಡಗಂಟೆಗಳು ಬೆಳೆದು ಹಾಳಾಗುತ್ತಿವೆ. ಜನರ ದಾಹವನ್ನು ನೀಗಿಸುವ ಬಾವಿಗಳ ನೀರನ್ನ ಜಿಲ್ಲಾಡಳಿತ ಬಳಕೆ ಮಾಡದೆ ನಿರ್ಲಕ್ಷ ತೊರುತ್ತಿದೆ.
ಹೌದು ಬೀದರ್ ಜಿಲ್ಲೆಯಲ್ಲಿ ಬಹಮನಿ ಸುಲ್ತಾನರ ಕಾಲದ ಸುಮಾರು 5 ಶತಮಾನಗಳಷ್ಟು ಹಳೆಯದಾದ ನೂರಾರು ಬಾವಿಗಳಿದ್ದು, ಭೀಕರವಾದ ಬರಗಾದಲ್ಲಿಯೂ ಈ ಬಾವಿಗಳು ಬತ್ತಿದ ಉದಾಹರಣೆಯಿಲ್ಲ, ವೈಜ್ಞಾನಿಕ ನೆಲೆಗಟ್ಟಿನ ಆಧಾರದಲ್ಲಿ ಎಲ್ಲಿ ನೀರಿನ ಅಂಶ ಜಾಸ್ತಿಯಿದೆಯೋ ಅಲ್ಲಯೇ ಬಾವಿಗಳನ್ನ ಆಗಿನ ಕಾಲದಲ್ಲಿ ನಿರ್ಮಾಣ ಮಾಡಿದ್ದರು. ಸುತ್ತಮುತ್ತಲಿನ ಗ್ರಾಮಗಳು ಇದೇ ಬಾವಿಗಳ ನೀರನ್ನ ಅಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದವು ಎಂದು ಹೇಳಲಾಗುತ್ತಿದೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ಕೂಡ ಈ ಬಾವಿಗಳು ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದು, ಬಾವಿಯಲ್ಲಿ ನೀರು ತುಂಬಿ ತುಳುಕುತ್ತಿವೆ.
ಗ್ರಾಮದ ಅಕ್ಕಪಕ್ಕದಲ್ಲಿಯೇ ಇಂತಹ ಬಾವಿಗಳಿದ್ದು, ಈ ಬಾವಿಯ ನೀರನ್ನ ಗ್ರಾಮಗಳ ಜನರ ಬಳಕೆಗೆ ಜಾನುವಾರುಗಳಿಗೆ ಕುಡಿಯಲು ಬಳಸಿದರೂ ಕೂಡಾ ಗ್ರಾಮದಲ್ಲಿ ಸ್ವಲ್ಪ ಮಟ್ಟಿಗಿನ ನೀರಿನ ದಾಹ ಇಂಗಿದಂತಾಗುತ್ತದೆ. ಜಿಲ್ಲಾಳಿತದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ನೀರಿನ ಮೂಲ ಸಾಕಷ್ಟಿದ್ದರು ಅದು ಜನರ ಬಳಕೆಗೆ ಮಾತ್ರ ಬರುತ್ತಿಲ್ಲ. ಅಷ್ಟೂರು, ಪತ್ತೆಪುರ ಹಾಗೂ ನಗರದ ಇನ್ನಿತರ ಪ್ರದೇಶದಲ್ಲಿರುವ ಸಿಹಿ ನೀರಿನ ಬಾವಿಗಳು ಸ್ಥಳೀಯ ನಗರಸಭೆ ಆಡಳಿತದ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗಿವೆ.
ಇಲ್ಲಿನ ಬಾವಿಗಳು ಇಂದಿಗೂ ಸಾಕಷ್ಟು ಪ್ರಮಾಣದ ಜಲವನ್ನು ತುಂಬಿಕೊಂಡಿದೆ. ಆದರೆ, ಸರಿಯಾದ ನಿರ್ವಹಣೆ ಕೊರತೆಯಿಂದ ಕೆಲ ಬಾವಿಗಳ ನೀರು ಪಾಚಿಗಟ್ಟಿಕೊಂಡು ಹಾಳಾಗಿವೆ. ನಗರದಲ್ಲಿನ ಪುರಾತನ ಕಾಲದ ಅನೇಕ ಬಾವಿಗಳನ್ನು ಅಭಿವೃದ್ಧಿ ನೆಪದಲ್ಲಿ ನಗರಸಭೆ ಮುಚ್ಚಿ ಕೈತೊಳೆದುಕೊಂಡಿದೆ. ಪ್ರತಿ ವರ್ಷವು ಬೆಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಹೀಗಿದ್ದರೂ ಪುರಾತನ ಕಾಲದ ಜಲ ಮೂಲಗಳನ್ನು ಸಂರಕ್ಷಣೆ ಮಾಡಿ ಸರಿಯಾಗಿ ನಿರ್ವಹಣೆ ಮಾಡುವ ಗೋಜಿಗೆ ಹೋಗದೆ ಇರುವುದು ವಿಪರ್ಯಾಸ.
ಇನ್ನು ಬೇಸಿಗೆಯಲ್ಲಿ ಜಿಲ್ಲೆಯ ಜನರು ನೀರಿನ ಸಮಸ್ಯೆಯಿಂದ ಪರದಾಡುತ್ತಾರೆ. ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇವೆಂದು ಕೋಟ್ಯಾಂತರ ರೂಪಾಯಿ ಹಣವನ್ನ ಖರ್ಚುಮಾಡುತ್ತಲೇ ಬರುತ್ತಿದ್ದಾರೆಯೇ ಹೊರತು ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಮಾತ್ರ ಇಂದಿಗೂ ಸಿಕ್ಕಿಲ್ಲ, ಆದರೆ ಇದೇ ಹಣವನ್ನ ಪುರಾತನ ಬಾವಿ ಹೂಳನ್ನು ತೆಗೆಸಿ ಗ್ರಾಮಕ್ಕೆ ಪೈಪ್ ಲೈನ್ ಮಾಡಿಸಿದರೆ, ಕೆಲವು ಗ್ರಾಮದ ಜನರ ನೀರಿನ ದಾಹ ಸ್ವಲ್ಪ ಮಟ್ಟಿಗಾದರು ಕಡಿಮೆಯಾಗಬಹುದು.
ಇನ್ನು ಜಿಲ್ಲೆಯ ಸುಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಸ್ಥಾನದ ಸುತ್ತಮುತ್ತಲು ಸಾಕಷ್ಟು ಐತಿಹಾಸಿಕ ಬಾವಿಗಳಿದ್ದು, ಈ ದೇವಸ್ಥಾನಕ್ಕೆ ಪ್ರತಿ ವರ್ಷವು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಇಲ್ಲಿನ ಬಾವಿಗಳನ್ನ ಸ್ವಚ್ಛಗೊಳಿಸಿ ಆ ನೀರನ್ನು ಭಕ್ತರ ಬಳಕೆಗೆ ಅನುಕೂಲವಾಗುವಂತೆ ಮಾಡಿದರೆ ಒಳಿತು. ಒಂದು ಕಾಲದಲ್ಲಿ ಸಾವಿರಗಟ್ಟಲೇ ಇದ್ದ ಬಾವಿಗಳು ಇಂದು ಬೆರಳೇಣಿಕೆ ಅಷ್ಟಾಗಿದ್ದು, ಪುರತನ ಬಾವಿಗಳನ್ನ ರಕ್ಷಣೆ ಮಾಡದೇ ಇರುವುದೇ ಇದಕ್ಕೆ ಒಂದು ಪ್ರಮುಖವಾದ ಕಾರಣವಾಗಿದೆ. ಈಗ ಇರುವ ಬಾವಿಯನ್ನಾದರೂ ಜಿಲ್ಲಾಡಳಿತ ಸಂರಕ್ಷಣೆ ಮಾಡಿ ಅಲ್ಲಿನ ನೀರನ್ನ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿ ಕೊಡಿ ಎಂದು ಗ್ರಾಮದ ಜನತೆ ಕೇಳಿಕೊಂಡಿದ್ದಾರೆ.
– ಸುರೇಶ್ ನಾಯಕ್