ಯಾದಗಿರಿ: ಅನ್ನಭಾಗ್ಯ ಅಕ್ಕಿ (Anna Bhagya Yojana) ತುಂಬಿದ್ದ ಲಾರಿಯನ್ನೇ ಕಳವು ಮಾಡಿದ ಕೃತ್ಯ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಎಪಿಎಂಸಿ ಯಾರ್ಡ್ನಲ್ಲಿ (APMC Market Shahapur Complex) ನಡೆದಿದೆ. ನ್ಯಾಯ ಬೆಲೆ ಅಂಗಡಿಗೆ ಸಾಗಿಸಲು ಎಪಿಎಂಸಿ ಯಾರ್ಡ್ನಲ್ಲಿ ಅಕ್ಕಿ ತುಂಬಿದ್ದ ಲಾರಿಯನ್ನು ನಿಲ್ಲಿಸಲಾಗಿತ್ತು. ಲಾರಿಯಲ್ಲಿ 20 ಟನ್ ಅಕ್ಕಿಯ 420 ಚೀಲಗಳಿದ್ದವು. ಲಾರಿ ಕಳವಿಗೆ ಅಧಿಕಾರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಬಡವರ ಹೊಟ್ಟೆ ತುಂಬಲು ಬಳಕೆಯಾಗಬೇಕಿದ್ದ ಅಕ್ಕಿ ಕಳ್ಳರ ಪಾಲಾಗಿದೆ.
ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಹಾಪುರ ಠಾಣೆಯ ಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಇತ್ತೀಚೆಗೆ ಕಳವಾಗಿದ್ದ 16 ಮೊಬೈಲ್ ಫೋನ್ಗಳನ್ನು ಪೊಲೀಸರು ಹುಡುಕಿಕೊಟ್ಟಿದ್ದಾರೆ. ಮೊಬೈಲ್ ಕಳ್ಳತನ ಬಗ್ಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಕೇಸ್ ದಾಖಲಿಸಿಕೊಂಡ ಬಳಿಕ ಮೊಬೈಲ್ ಫೋನ್ಗಳನ್ನ ಪತ್ತೆ ಹಚ್ಚಿದ ಪೊಲೀಸರು ಬುಧವಾರ ಎಸ್ಪಿ ಕಚೇರಿಗೆ ಕರೆದು ವಾರಸುದಾರರಿಗೆ ಫೋನ್ ವಾಪಸ್ ನೀಡಿದರು. ಯಾದಗಿರಿ ಎಸ್ಪಿ ಡಾ ಸಿಬಿ ವೇದಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇನ್ನೂ ಸಾಕಷ್ಟು ಮೊಬೈಲ್ ಕಳ್ಳತನದ ಬಗ್ಗೆ ಕೇಸ್ ದಾಖಲಾಗಿದ್ದು ಹುಡುಕಿಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಯಾದಗಿರಿ ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 4 ಮನೆಗಳ ಮೇಲ್ಚಾವಣಿ ಹಾರಿಹೋಗಿದೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ದವಸ ಧಾನ್ಯ ನೀರುಪಾಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Wed, 31 May 23