
ಯಾದಗಿರಿ, ಜು.9: ಸರ್ಕಾರ “ಸರ್ವರಿಗೂ ಶಿಕ್ಷಣ”, “ಸರ್ಕಾರಿ ಶಾಲೆ ಉಳಿಸಿ” ಎಂದು ಕೋಟಿ ಕೋಟಿ ರೂಪಾಯಿ ಜಾಹೀರಾತು ನೀಡುತ್ತವೆ. ಆದರೆ ರಿಯಾಲಿಟಿ ಮಾತ್ರ ಬೇರೆಯೇ ಇರುತ್ತದೆ. ಬಡ ಮಕ್ಕಳ ಅಕ್ಷರ ಕಲಿಯುವ ಜಾಗ ಹೇಗಿರುತ್ತೆ ಅನ್ನೋದಕ್ಕೆ ಶೈಕ್ಷಣಿಕವಾಗಿ ಹಿಂದುಳಿದ ಯಾದಗಿರಿ ಜಿಲ್ಲೆಯ ಈ ಶಾಲೆಯೇ ಸಾಕ್ಷಿ. ಇಲ್ಲಿ ಒಂದೇ ರೂಮಿನಲ್ಲಿ 1 ರಿಂದ 5ನೇ ತರಗತಿಯ 70 ಮಕ್ಕಳು ಒಟ್ಟಿಗೆ ಕುಳಿತು ಅ ಆ ಇ ಈ ಕಲಿಯುತ್ತಿದ್ದಾರೆ. ಇದಕ್ಕಿಂತ ದೊಡ್ಡ ವಿಪರ್ಯಾಸ ಬೇಕಾ? ಸರ್ಕಾರಿ ಶಾಲೆಗಳ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಪೋಷಕರು ಯಾಕೆ? ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಯಾವ ಕಾರಣಕ್ಕೆ ಸೇರಿಸುತ್ತಿದ್ದಾರೆ ಎಂಬುದನ್ನು ಇದು ಹೇಳುತ್ತದೆ. ಇದರ ನಡುವೆ ಸರ್ಕಾರ ಮೊಂಡುವಾದ ಮಕ್ಕಳು ಬಂದ್ರೆ ಶಾಲೆಗಳನ್ನು ಅಭಿವೃದ್ಧಿ ಮಾಡಬಹುದು ಎಂದು. ಆದರೆ ಮಕ್ಕಳು ಇರುವ ಶಾಲೆಗಳ ಗತಿ ಹೀಗಿದೆ ಎಂದು ಪೋಷಕರ ವಾದ.
ಗುಂಡಲೂರ ಗ್ರಾಮದ ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಟ್ಟು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಇಡೀ ಶಾಲೆಗೆ ಇರೋದು ಕೇವಲ ಎರಡೇ ಎರಡು ಕೋಣೆಗಳು! ಅದರಲ್ಲಿ ಒಂದು ಕೋಣೆಯನ್ನು ಬಿಸಿಯೂಟ ತಯಾರಿಸಲು ಬಳಸಲಾಗುತ್ತಿದೆ. ಇನ್ನುಳಿದ ಕೇವಲ ಒಂದು ಕೋಣೆಯಲ್ಲಿ ಶಾಲೆಯ ಆಫೀಸ್ ರೂಮ್, ಶಿಕ್ಷಕರ ಕುರ್ಚಿ ಹಾಗೂ 5 ತರಗತಿಗಳ ಐದೂ ಬೋರ್ಡ್‌ಗಳನ್ನು ಇಡಲಾಗಿದೆ.
ಒಂದನೇ ತರಗತಿಯ ಮಗುವಿಗೆ ಶಿಕ್ಷಕರು ಪಾಠ ಮಾಡುವಾಗ, ಪಕ್ಕದಲ್ಲೇ ಕುಳಿತಿರುವ 5ನೇ ತರಗತಿಯ ವಿದ್ಯಾರ್ಥಿ ಕೂಡ ಅದನ್ನೇ ಕೇಳಿಸಿಕೊಳ್ಳಬೇಕು. ಮಳೆ ಇಲ್ಲದ ದಿನಗಳಲ್ಲಿ ಮಕ್ಕಳನ್ನು ಮರದ ನೆರಳಿನಲ್ಲಿ ಕೂರಿಸಿ ಪಾಠ ಮಾಡಲಾಗುತ್ತದೆ. ಆದರೆ ಮಳೆ ಬಂತೆಂದರೆ ಸಾಕು, ಎಲ್ಲ 70 ಮಕ್ಕಳನ್ನು ಕುರಿಗಳಂತೆ ಒಂದೇ ಕೋಣೆಯಲ್ಲಿ ಕೂರಿಸಲಾಗುತ್ತಿದೆ. ಇಂತಹ ಗದ್ದಲದ ವಾತಾವರಣದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಾದರೂ ಹೇಗೆ ಎಂಬುದು ಪೋಷಕರ ಪ್ರಶ್ನೆ.
ಇದನ್ನೂ ಓದಿ: ಅರಬೈಲ್ ಘಾಟ್‌ನಲ್ಲಿ ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ; ಧಾರವಾಡ ಮೂಲದ ಆರು ಜನ ಸ್ಥಳದಲ್ಲೇ ಸಾವು, ಮೂವರು ಗಂಭೀರ
ಇನ್ನು ಶಾಲೆಯ ಶಿಕ್ಷಕರ ಕೊರತೆ ಮತ್ತೊಂದು ದೊಡ್ಡ ತಲೆನೋವು. ಇಡೀ ಶಾಲೆಗೆ ಇರೋದು ಒಬ್ಬರೇ ಒಬ್ಬರು ಖಾಯಂ ಶಿಕ್ಷಕರು. ಇಲಾಖೆಯ ಕಚೇರಿ ಕೆಲಸ, ದತ್ತಾಂಶ ಅಪ್‌ಲೋಡ್, ಸಭೆ-ಸಮಾರಂಭ ಅಂತ ಇವರ ಸಮಯ ಕಚೇರಿ ಕೆಲಸಕ್ಕೇ ಮುಗಿದು ಹೋಗುತ್ತದೆ. ಸದ್ಯಕ್ಕೆ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆಯಾದರೂ, ಮೂಲಭೂತ ಸೌಕರ್ಯಗಳಿಲ್ಲದೆ ಅವರೂ ಪರದಾಡುತ್ತಿದ್ದಾರೆ. ಒಬ್ಬರು ಕೋಣೆಯ ಒಳಗೆ ಪಾಠ ಮಾಡಿದರೆ, ಮತ್ತೊಬ್ಬರು ಮರದ ಕೆಳಗೆ ಮಕ್ಕಳನ್ನು ಕೂರಿಸಬೇಕಾದ ಅನಿವಾರ್ಯತೆ ಇದೆ.
ಬೇರೆ ಶಾಲೆಗಳತ್ತ ಮುಖ ಮಾಡಿದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಶಿಕ್ಷಣ ಇಲಾಖೆಯ ಈ ಉದಾಸೀನ ಧೋರಣೆಯಿಂದ ಬೇಸತ್ತಿರುವ ಗ್ರಾಮಸ್ಥರು ಹಾಗೂ ಪೋಷಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಶಾಲೆಯ ದುಸ್ಥಿತಿಯಿಂದಾಗಿ ಕಳೆದ ಕೇವಲ ಒಂದು ವರ್ಷದಲ್ಲಿಯೇ 20ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯನ್ನು ಬಿಟ್ಟಿದ್ದಾರೆ. ಬಡವರಾದರೂ ಪರವಾಗಿಲ್ಲ ಸಾಲ ಸೋಲ ಮಾಡಿ ಪಕ್ಕದ ಗ್ರಾಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗುಂಡಲೂರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡಬೇಕಿದೆ. ಇಲ್ಲದಿದ್ದರೆ ಬಡ ಮಕ್ಕಳ ಭವಿಷ್ಯ ಅಂಧಕಾರಕ್ಕೆ ದೂಡಲ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ