Term insurance: ಯಾವಾಗ ಟರ್ಮ್ ಇನ್ಷೂರೆನ್ಸ್ ಕೊಳ್ಳಬೇಕು?

|

Updated on: Mar 20, 2021 | 5:54 PM

ಎಲ್ಲಾ ಪಾಲಿಸಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಿಮ್ಮ ಆರ್ಥಿಕ ಸ್ಥಿತಿಗೆ ಯಾವ ಪಾಲಿಸಿ ಬೆಸ್ಟ್ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಪರಿಚಿತರಲ್ಲಿ ಈಗಾಗಲೇ ಪಾಲಿಸಿ ಕೊಂಡವರಿದ್ದಲ್ಲಿ ಅವರ ಬಳಿ ವಿಚಾರಿಸಬೇಕು. ಆನಂತರವೇ ಪಾಲಿಸಿ ಕೊಳ್ಳಲು ಮುಂದುವರೆಯಬಹುದು.

Term insurance: ಯಾವಾಗ ಟರ್ಮ್ ಇನ್ಷೂರೆನ್ಸ್ ಕೊಳ್ಳಬೇಕು?
ಟರ್ಮ್ ಇನ್ಶುರೆನ್ಸ್​ಗಳ ವಿಶೇಷವೇನು?
Follow us on

ಲೈಫ್ ಇನ್ಷೂರೆನ್ಸ್​ ಪಾಲಿಸಿ ಅಥವಾ ಜೀವ ವಿಮೆ ಪಾಲಿಸಿಗಳು ಪ್ರತಿಯೊಬ್ಬರ ಪಾಲಿಗೂ ವರದಾಯಕ. ಈ ವಿಷಯದ ಅರಿವಿರದೇ ಒಂದು ಕಾಲಕ್ಕೆ ಜನ ಜೀವ ವಿಮಾ ಪಾಲಿಸಿಗಳನ್ನು ಕೊಳ್ಳಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಮೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಅದರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡ ನಂತರವಂತೂ ಇನ್ಷೂರೆನ್ಸ್ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಸಾಮಾನ್ಯ ಇನ್ಷೂರೆನ್ಸ್​ಗಳಿಗಿಂತ ಸ್ವಲ್ಪ ವಿಭಿನ್ನವಾದ ಟರ್ಮ್ ಇನ್ಷೂರೆನ್ಸ್​ಗಳ ಬಗ್ಗೆ ಯುವ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ.

ಕೆಲ ವರ್ಷಗಳ ಹಿಂದೆ ಇನ್ಷೂರೆನ್ಸ್ ಎಂದರೆ ಏನೆಂಬ ಬಗ್ಗೆ ಸ್ಷಷ್ಟ ಕಲ್ಪನೆಯೇ ಹಲವರಿಗೆ ಇರಲಿಲ್ಲ. ಹೀಗಾಗಿ  ಇನ್ಷೂರೆನ್ಸ್ ಪಾಲಿಸಿ ಖರೀದಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಆದರೆ ಬದಲಾದ ಕಾಲಮಾನದಲ್ಲಿ ಜನರು ತಮ್ಮ ಜೀವನದ ಭದ್ರತೆಯ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ. ಹೀಗಾಗಿ ಇನ್ಷೂರೆನ್ಸ್ ಕೊಳ್ಳುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ತಮ್ಮ ಮರಣದ ನಂತರ ಕುಟುಂಬಕ್ಕೆ ಹಣ ದೊರೆಯುವ ಟರ್ಮ್ ಇನ್ಷೂರೆನ್ಸ್​ಗಳತ್ತ ಯುವಜನರು ಒಲವು ತಾಳುತ್ತಿದ್ದಾರೆ.

ಹಾಗಾದರೆ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಕೊಳ್ಳಲು ಉತ್ತಮ ವಯಸ್ಸು ಯಾವುದು ಎಂಬ ಪ್ರಶ್ನೆ ಮೂಡುತ್ತದೆ. ಕೊಳ್ಳುವ ಗ್ರಾಹಕರಿಗೆ ನಷ್ಟವಾಗಬಾರದು. ಆದಷ್ಟು ಲಾಭವೇ ಆಗಬೇಕು ಎಂಬ ಮನೋಭಾವ ಸಹಜವಾಗಿ ಇರುತ್ತದೆ. ಎಷ್ಟನೇ ವಯಸ್ಸಿನಲ್ಲಿ ಇನ್ಷೂರೆನ್ಸ್ ಪಾಲಿಸಿ ಕೊಂಡರೆ ಲಾಭವಾಗುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳನ್ನು ಸಾಧ್ಯವಾದಷ್ಟು ಬೇಗ ಕೊಳ್ಳಬೇಕು. ತಡ ಮಾಡಿದಷ್ಟೂ ಲಾಭ ನಿಧಾನವಾಗಿ ಕಡಿಮೆಯಾಗುತ್ತದೆ. ಟರ್ಮ್ ಇನ್ಷೂರೆನ್ಸ್ ಪಾಲಿಸಿ ಕೊಳ್ಳಲು ನಿಮಗೆ ಕನಿಷ್ಠ 18 ವರ್ಷವಾದರೂ ಆಗಿರಬೇಕು. 18ರ ಹರೆಯಕ್ಕೆ ಕಾಲಿಡುತ್ತಿದ್ದಂತೆ ಟರ್ಮ್ ಇನ್ಷೂರೆನ್ಸ್ ಖರೀದಿಸಿದರೆ ನಿಜಕ್ಕೂ ನಿಮ್ಮ ಕುಟುಂಬಕ್ಕೆ ಒಂದಿಷ್ಟು ಆರ್ಥಿಕ ಭದ್ರತೆ ಒದಗುತ್ತದೆ.

ಏನಿದು ಟರ್ಮ್ ಇನ್ಷೂರೆನ್ಸ್?
ಸಾಮಾನ್ಯ ಇನ್ಷೂರೆನ್ಸ್ ಪಾಲಿಸಿಗಳು ಪಾಲಿಸಿಗಳು ಅವಧಿ ಮುಕ್ತಾಯವಾದ ನಂತರ ನೀವು ಕಟ್ಟಿದ್ದ ಪ್ರೀಮಿಯಂಗೆ ಇಂತಿಷ್ಟು ಹಣವನ್ನು ಸೇರಿಸಿ ಮರಳಿಸುತ್ತವೆ. ಆದರೆ ಟರ್ಮ್ ಇನ್ಷೂರೆನ್ಸ್ ಸ್ವಲ್ಪ ವಿಭಿನ್ನ.  ಇವು ನಿಮಗೆ ಹಣವನ್ನು ಮರಳಿಸುವುದಿಲ್ಲ. ಬದಲಿಗೆ ಪಾಲಿಸಿದಾರರ ಮರಣದ ನಂತರ ಕುಟುಂಬಕ್ಕೆ ನಿಗದಿತ ಮೊತ್ತದ ಹಣವನ್ನು ಒದಗಿಸುತ್ತವೆ.  ಪ್ರತಿ ಪ್ರೀಮಿಯಂ ಕಟ್ಟಿದಾಗಲೂ ಪಾಲಿಸಿದಾರ ತನ್ನ ಕುಟುಂಬದ ಭದ್ರತೆಯ ಗೋಡೆಗೆ ಒಂದೊಂದೇ ಇಟ್ಟಂಗಿಗಳನ್ನು ಜೋಡಿಸಿದಂತಾಗುತ್ತದೆ.

ಅಲ್ಲದೇ ಚಿಕ್ಕ ವಯಸ್ಸಿನಲ್ಲಿ ಟರ್ಮ್ ಇನ್ಷೂರೆನ್ಸ್ ಪಾಲಿಸಿ ಖರೀದಿಸಿದರೆ ತುಂಬುವ ಪ್ರೀಮಿಯಂ ಸಹ ಕಡಿಮೆಯಿರುತ್ತದೆ. ಪ್ರೀಮಿಯಂ ತುಂಬುವ ಹಣ ನಿಮಗೆ ಹೊರೆ ಎನಿಸುವುದಿಲ್ಲ. ಸುದೀರ್ಘಾವಧಿಯ ಪ್ರೀಮಿಯಂ ತುಂಬುವ ಅವಕಾಶ ದೊರೆಯುವ ಕಾರಣ ಪ್ರೀಮಿಯಂ ಹಣ ಕಡಿಮೆ ಇರುತ್ತದೆ.

ಹಾಗಂತ ನೀವು ಕಣ್ಣುಮುಚ್ಚಿ ಯಾವುದೇ ಪಾಲಿಸಿ ಖರೀದಿಸಬಾರದು. ಎಲ್ಲಾ ಪಾಲಿಸಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನಿಮ್ಮ ಆರ್ಥಿಕ ಸ್ಥಿತಿಗೆ ಯಾವ ಪಾಲಿಸಿ ಬೆಸ್ಟ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಪರಿಚಿತರಲ್ಲಿ ಈಗಾಗಲೇ ಪಾಲಿಸಿ ಕೊಂಡವರಿದ್ದಲ್ಲಿ ಅವರ ಬಳಿ ವಿಚಾರಿಸಬೇಕು. ಆ ನಂತರವೇ ಪಾಲಿಸಿ ಕೊಳ್ಳಲು ಮುಂದುವರೆಯಬಹುದು.

ಸಾಮಾನ್ಯವಾಗಿ ಲೆಕ್ಕಾಚಾರ ಹೇಗಿರುತ್ತದೆ ಅಂದರೆ, ಒಬ್ಬ ವ್ಯಕ್ತಿಯ ವರ್ಷದ ಸಂಬಳ 5 ಲಕ್ಷ ಎಂದುಕೊಳ್ಳೋಣ. ಮನೆ ಕಟ್ಟುವುದಕ್ಕೆ ಸಾಲ ಮಾಡಿದ್ದಲ್ಲಿ ಅದು, ಕಾರು ಖರೀದಿಸಿದ್ದಲ್ಲಿ ಅದಕ್ಕೆ, ಕುಟುಂಬದ ಇತರ ಜವಾಬ್ದಾರಿಗಳನ್ನು ಪೂರ್ತಿ ಮಾಡುವುದಕ್ಕೆ ಎಷ್ಟು ಹಣ ಬೇಕಾಗುತ್ತದೆ ಎಂಬ ಅಂದಾಜು ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ವಾರ್ಷಿಕ ಸಂಬಳದ ಹತ್ತು ಪಟ್ಟಿನ ಅಥವಾ ಇಪ್ಪತ್ತು ಪಟ್ಟಿನ ಮೊತ್ತಕ್ಕೆ ಟರ್ಮ್ ಇನ್ಷೂರೆನ್ಸ್ ಖರೀದಿಸಿದರೆ ಉತ್ತಮ.  ಒಂದು ವೇಳೆ ಆ ವ್ಯಕ್ತಿಯು ದುರದೃಷ್ಟವಶಾತ್ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ ಅಥವಾ ಅಕಾಲಿಕ ಮರಣ ಹೊಂದಿದರೆ ಕುಟುಂಬಕ್ಕೆ ದಿಕ್ಕು ತೋಚದಂತೆ ಆಗಬಾರದು. ಅಂಥ ಸನ್ನಿವೇಶದಲ್ಲಿ ಈ ಟರ್ಮ್ ಇನ್ಷೂರೆನ್ಸ್ ಮೊತ್ತ ಬರುತ್ತದೆ.

ಈ ಟರ್ಮ್ ಇನ್ಷೂರೆನ್ಸ್ ಮಾಡಿಸುವುದಕ್ಕೆ ಪ್ರೀಮಿಯಂ ನಿಗದಿ ಆಗುವುದು ಎಷ್ಟು ಮೊತ್ತಕ್ಕೆ ನೀವು ಇನ್ಷೂರೆನ್ಸ್ ಖರೀದಿಸುತ್ತಿದ್ದೀರಿ ಎಂಬ ಆಧಾರದಲ್ಲಿ. ಇನ್ನು ಇನ್ಷೂರೆನ್ಸ್ ಮಾಡಿಸುವ ಮುನ್ನ ಕೆಲವು ವೈದ್ಯಕೀಯ ಪರೀಕ್ಷೆಗಳು ಕಡ್ಡಾಯ ಇರುತ್ತವೆ. ಆಮೇಲೆ ವಯಸ್ಸು ಜಾಸ್ತಿ ಆಗುತ್ತಿದ್ದಂತೆ, ಧೂಮಪಾನ- ಮದ್ಯಪಾನ ವ್ಯಸನ ಇರುವವರಿಗೆ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತದೆ. ಇನ್ಷೂರೆನ್ಸ್ ಮಾಡಿಸಬೇಕು ಎಂದಿರುವವರಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಆಗ ಲೆಕ್ಕಾಚಾರ ಬೇರೆ ಆಗುತ್ತದೆ.

ಟರ್ಮ್ ಇನ್ಷೂರೆನ್ಸ್​ಗೆ ಕಟ್ಟುವ ಪ್ರೀಮಿಯಂ ಮೊತ್ತವು ವಾಪಸ್ ಬರುವುದಿಲ್ಲ. ಅದರ ಬದಲಿಗೆ ಕಡಿಮೆ ಮೊತ್ತದ ಪ್ರೀಮಿಯಂಗೆ ಹೆಚ್ಚಿನ ಮೊತ್ತದ ಇನ್ಷೂರೆನ್ಸ್ ಕವರ್ ಆಗುತ್ತದೆ. ಯಾವುದೇ ಟರ್ಮ್ ಇನ್ಷೂರೆನ್ಸ್ ಖರೀದಿಸುವ ಮುನ್ನ ನಿಯಮ- ನಿಬಂಧನೆಗಳನ್ನು ತಿಳಿದುಕೊಂಡು, ಆ ನಂತರವೇ ಮುಂದುವರಿಯಬೇಕು. ಚಿಕ್ಕ ವಯಸ್ಸಿನಲ್ಲಿ ಟರ್ಮ್ ಇನ್ಷೂರೆನ್ಸ್ ಖರೀದಿ ಮಾಡಿದಲ್ಲಿ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಯಾವುದೂ ಇಲ್ಲದಿದ್ದಲ್ಲಿ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಇದು ಕೂಡ ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತದೆ.

ಇದನ್ನೂ ಓದಿ:

PMJJBY Explainer: ಏನಿದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ?

Budget 2021 Explainer | ಆದಾಯ ತೆರಿಗೆ ಉಳಿಸಲು ಇಷ್ಟೆಲ್ಲಾ ಮಾರ್ಗಗಳಿವೆ