ಹಾವೇರಿ: ಎಲ್ಲೆಡೆಯಂತೆ ಕೊರೊನಾದ ಆರ್ಭಟ ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದದ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸ್ವಯಂ ಪ್ರೇರಿತವಾಗಿ ನಿರ್ಬಂಧ ಹಾಕಿಕೊಂಡಿದ್ದಾರೆ.
ಹೌದು, ಕೊರೊನಾ ಸೋಂಕು ಹರಡುವುದನ್ನು ತಡೆಯಲು ಚಿನ್ನಮುಳಗುಂದ ಗ್ರಾಮಸ್ಥರೇ ತಮ್ಮ ಗ್ರಾಮಕ್ಕೆ ಲಾಕ್‌ಡೌನ್ ವಿಧಿಸಿದ್ದಾರೆ. ಗ್ರಾಮಕ್ಕೆ ಬೇರೆ ಊರುಗಳಿಂದ ಯಾರೂ ಬರದಂತೆ ಹಾಗೂ ಊರಿನಿಂದ ಯಾರೂ ಹೊರಗೆ ಹೋಗದಂತೆ ನಿರ್ಬಂಧ ಹಾಕಿಕೊಂಡಿದ್ದಾರೆ. 40 ಜನರ ಕಾವಲು ಪಡೆ ರಚಿಸಿಕೊಂಡು ಗ್ರಾಮದ ಗಡಿ ಪ್ರದೇಶಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಯಾರೇ ಊರಿಗೆ ಬಂದರೂ ಅವರಿಗೆ ನೋ ಎಂಟ್ರಿ ಎಂದು ಹೇಳಿ ವಾಪಸ್ ಕಳಿಸುತ್ತಿದ್ದಾರೆ.
ಗ್ರಾಮಕ್ಕೆ 15 ದಿನಗಳ ಲಾಕ್‌ಡೌನ್
ಗ್ರಾಮದ ಪ್ರತಿ ಕುಟುಂಬದ ಇಂತಿಷ್ಟು ಜನರನ್ನು ಒಳಗೊಂಡ ಕಾವಲು ಪಡೆಯನ್ನ ರಚಿಸಲಾಗಿದೆ. ಹೀಗೆ ರಚಿಸಿರುವ ಕಾವಲು ಪಡೆಯ ಸದಸ್ಯರು ಪಾಳಿಯಲ್ಲಿ ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ. ಸುಮಾರು 15 ದಿನಗಳ ಕಾಲ ಗ್ರಾಮಸ್ಥರು ಈ ರೀತಿಯ ಲಾಕ್‌ಡೌನ್‌ಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ 15 ದಿನಗಳ ನಂತರವೂ ಕೊರೊನಾ ಸೋಂಕಿನ ಹಾವಳಿ ಕಡಿಮೆ ಆಗದಿದ್ದರೆ ಮತ್ತೊಮ್ಮೆ ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
Published On - 1:25 pm, Mon, 6 July 20