ವಾಷಿಂಗ್ಟನ್: ಇ-ಕಾಮರ್ಸ್ ದೈತ್ಯ ಅಮೇಜಾನ್ ಸರಕು ವಿತರಣಾ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ 11 ಬೋಯಿಂಗ್ 767-300 ಸರಕು ಸಾಗಾಣಿಕಾ ವಿಮಾನಗಳನ್ನು ಖರೀದಿಸಿದೆ. 2022ರ ವೇಳೆಗೆ 85 ವಿಮಾನಗಳಲ್ಲಿ ಸರಕು ವಿತರಣೆ ಸೇವೆ ಒದಗಿಸುವ ಯೋಜನೆ ಹೊಂದಿರುವ ಅಮೇಜಾನ್ 2016ರಲ್ಲೇ ವಾಯುಮಾರ್ಗದ ಮೂಲಕ ಸರಕು ವಿತರಣೆ ಸೇವೆ ನೀಡುವ ಯೋಜನೆ ರೂಪಿಸಿತ್ತು.
ಮನೆಮನೆಗೆ ಸರಕು ವಿತರಿಸಲು ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಗಳು ಮುನ್ನೆಲೆಗೆ ಬರುತ್ತಿವೆ. ಈ ಕ್ಷೇತ್ರದಲ್ಲೂ ತಾನೇ ಸ್ಥಾನ ಬಲಪಡಿಸಿಕೊಳ್ಳುವ ಇಚ್ಛೆ ಹೊಂದಿರುವ ಅಮೇಜಾನ್ ಲೀಸ್ ಮತ್ತು ಸ್ವಂತ ವಿಮಾನಗಳನ್ನು ಹೊಂದುವ ಮೂಲಕ ಈ ಸೇವೆಗಳನ್ನು ಒದಗಿಸಲಿದೆ. ಆದರೆ, ಈ ಸೇವೆ ಸದ್ಯ ಅಮೆರಿಕಾಕ್ಕೆ ಮಾತ್ರ ಸೀಮಿತವಾಗಿರಲಿದೆ.
ಅಮೆರಿಕಾದ ಸರಕು ವಿತರಣಾ ಕ್ಷೇತ್ರದಲ್ಲಿ ಅರ್ಧದಷ್ಟು ಪಾಲನ್ನು ಅಮೇಜಾನ್ ಸಂಸ್ಥೆ ಹೊಂದಿದೆ. ಇತರ ವಿತರಣಾ ಸಂಸ್ಥೆಗಳಿಂದ ವಿತರಣೆ ಮಾಡಿಸುವುದಕ್ಕಿಂತ ಸ್ವತಃ ವಿತರಣೆ ಸೇವೆ ಒದಗಿಸುವುದು ಲಾಭ ಎಂದು ಅರಿತಿರುವ ಅಮೇಜಾನ್, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿಮಾನಯಾನ ಕ್ಷೇತ್ರ ನಷ್ಟದಲ್ಲಿರುವಾಗಲೇ ವಿಮಾನಗಳನ್ನು ಖರೀದಿಸಿದೆ.
ಅಮೇಜಾನ್ ಏರ್
ಇದುವರೆಗೆ ಲೀಸ್ ಮೂಲಕ ವಿಮಾನಯಾನ ಕಂಪನಿಗಳ ವಿಮಾನಗಳಿಂದ ಸೇವೆ ಒದಗಿಸುತಿದ್ದ ಅಮೇಜಾನ್, ಸ್ವಂತ ವಿಮಾನ ಖರೀದಿಸಿದ್ದು ಇದೇ ಮೊದಲು. ಭೂಮಾರ್ಗದ ಮೂಲಕ ನೀಡುತ್ತಿರುವ ಸೇವೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿರುವ ಅಮೇಜಾನ್, ತನ್ನ ‘ಅಮೇಜಾನ್ ಏರ್’ ಮೂಲಕ ವಾಯುಮಾರ್ಗದಲ್ಲೂ ಮುಂಚೂಣಿಗೆ ಬರಲು ಹವಣಿಸುತ್ತಿದೆ. ಆದರೆ, ಅಮೆರಿಕಾ ಹೊರತುಪಡಿಸಿ, ಇತರ ದೇಶಗಳಲ್ಲಿ ‘ಅಮೇಜಾನ್ ಏರ್’ ಸೇವೆ ಎಂದಿನಿಂದ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ಅಮೆಜಾನ್ ಬಿಟ್ಟುಕೊಟ್ಟಿಲ್ಲ.
ಅಪ್ಲಿಕೇಶನ್ನಲ್ಲಿ ಇಲ್ಲ ಮರಾಠಿ ಭಾಷೆ ಆಯ್ಕೆ; ರೊಚ್ಚಿಗೆದ್ದ MNS ಕಾರ್ಯಕರ್ತರಿಂದ ಅಮೇಜಾನ್ ಕಚೇರಿ ಧ್ವಂಸ