ಬಾಗಲಕೋಟೆ: ಕೊವಿಡ್ ವಾರಿಯರ್ ಅಂಗನವಾಡಿ ಕಾರ್ಯಕರ್ತೆ ಸಾವಿಗೆ ಬೆಲೆ ಇಲ್ಲವೆ? ಅಂಗನವಾಡಿ ಕುಟುಂಬದ ಕಣ್ಣೀರಿಗೆ ಯಾರು ಹೊಣೆ? ಕೊವಿಡ್ ಕರ್ತವ್ಯದ ಮೇಲೆ ಹೊರಟ ವೇಳೆ ಬೈಕ್‌ನಿಂದ ಬಿದ್ದು ಪ್ರಭಾವತಿ ಪೂಜಾರ(58) ಮೃತಪಟ್ಟಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು.
ಮೇ 18ರಂದು ಬೈಕ್‌ನಿಂದ ಬಿದ್ದು ಪ್ರಭಾವತಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಮೇ 20ರಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಆ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿದ್ದಾರೆ. ಕೊವಿಡ್ ಕರ್ತವ್ಯದಿಂದ ತಾಯಿ ಬಲಿಯಾಗಿದ್ದು, ದಿಕ್ಕು ತೋಚದೆ ನಾಲ್ಕು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.
ಅಪಘಾತದಲ್ಲಿ ಮೃತಪಟ್ರೆ ವಿಮೆ ಅನ್ವಯವಾಗಲ್ವಂತೆ:
ತಾಳಿಯ ಚಿನ್ನದ ಮುತ್ತು ಮಾರಿ ಮಕ್ಕಳಿಕೆ ಶಿಕ್ಷಣ ಕೊಡಿಸುತ್ತಿದ್ದರು. ಆದ್ರೆ ಈಗ ಅಪಘಾತದಲ್ಲಿ ಮೃತಪಟ್ಟಿರುವ ಕಾರಣ ಕೊವಿಡ್ ವಾರಿಯರ್ಸ್ ವಿಮೆ ಅನ್ವಯವಾಗೋದಿಲ್ಲ ಎಂದು ಹೇಳುತ್ತಿದ್ದಾರೆ. ಕೊರೊನಾ ತಗುಲಿ ಮೃತಪಟ್ಟರೆ ಮಾತ್ರ 30 ಲಕ್ಷ ವಿಮೆ ಹಣ ಎಂಬ ನಿಯಮ ಕುಟುಂಬಕ್ಕೆ ನಿರಾಶೆ ಮೂಡಿಸಿದೆ.
ಒಂದು ದಿನವೂ ರಜೆ ಪಡೆಯದೆ ದುಡಿದ ಅಂಗನವಾಡಿ ಕಾರ್ಯಕರ್ತೆ ಸಾವಿಗೆ ಪರಿಹಾರ ಇಲ್ವಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಪಘಾತ ಪರಿಹಾರ 50 ಸಾವಿರ, ಎನ್ಪಿಎಸ್ ಇನ್ಶೂರೆನ್ಸ್ 27 ಸಾವಿರ ರೂಪಾಯಿ ಮಾತ್ರ. ಹಾಗಾದ್ರೆ ಕೊವಿಡ್ ವಾರಿಯರ್ಸ್ ವಿಮೆ ಯಾವ ಪುರುಷಾರ್ಥಕ್ಕೆ? ಬಸ್ ಇಲ್ಲದ ಹಿನ್ನೆಲೆಯಲ್ಲಿ ಬೈಕ್ ಮೇಲೆ ಡ್ರಾಪ್ ಪಡೆದ ವೇಳೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.