
ಬೆಂಗಳೂರು: RR ನಗರ ವಿಧಾನಸಭೆ ಉಪ ಚುನಾವಣೆ ವಿಚಾರವಾಗಿ BJP ಟಿಕೆಟ್ ಪಡೆಯುವ ವಿಚಾರದಲ್ಲಿ ಪಕ್ಷದ ನಾಯಕ ಮುನಿರತ್ನಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.
ಟಿಕೆಟ್ ಘೋಷಣೆ ವೇಳೆ ತನ್ನ ಹೆಸರು ಮಾತ್ರ ಇರುತ್ತದೆ. RR ನಗರಕ್ಕೆ ತನ್ನ ಹೆಸರೇ ಫೈನಲ್ ಎಂದು ಮುನಿರತ್ನ ನಂಬಿದ್ರು. ಆದ್ರೆ ಈಗ ಎರಡು ಹೆಸರು ಇರುವ ಕಾರಣ ಮುನಿರತ್ನಗೆ ಟೆನ್ಷನ್ ಶುರುವಾಗಿದೆ. ರಾಜ್ಯ ನಾಯಕರನ್ನು ಟಿಕೆಟ್ ವಿಚಾರದಲ್ಲಿ ಸಂಪೂರ್ಣವಾಗಿ ನಂಬುವಂತಿಲ್ಲ. ಮತ್ತೊಬ್ಬ ಬಿಜೆಪಿ ನಾಯಕ ತುಳಸಿ ಮುನಿರಾಜು ಗೌಡಗೆ ವರಿಷ್ಠರ ಬೆಂಬಲ ಇರುವ ಕಾರಣ ನಂಬುವಂತಿಲ್ಲ ಎಂಬುದು ಮುನಿರತ್ನರ ಚಿಂತನೆಯಾಗಿದೆ.
ತುಳಸಿ ಮುನಿರಾಜು ಗೌಡಗೆ BL ಸಂತೋಷ್ ಕೃಪೆ
ಸದ್ಯ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಟಿಕೇಟ್ ಯಾರಿಗೆ ಎಂದು ಇನ್ನೂ ನಿರ್ಧಾರ ಆಗಿಲ್ಲ. ಮುನಿರತ್ನ ಒಬ್ಬರ ಹೆಸರನ್ನಷ್ಟೇ ದೆಹಲಿಗೆ ಕಳುಹಿಸಿದ್ರೆ ಸಮಸ್ಯೆ ಎದುರಾಗಬಹುದು. ಒಂದು ವೇಳೆ, ದೆಹಲಿ ಮಟ್ಟದಲ್ಲಿ ಮುನಿರತ್ನ ಹೆಸರು ಒಪ್ಪಿಕೊಳ್ಳದೇ ಇದ್ದಲ್ಲಿ ಕೋರ್ ಕಮಿಟಿಗೆ ಹಿನ್ನಡೆಯಾಗಲಿದೆ.
ರಾಜ್ಯ ಕೋರ್ ಕಮಿಟಿಗೆ ಹಿನ್ನಡೆಯಾಗುವ ಹಿನ್ನಲೆಯಲ್ಲಿ ಎರಡು ಹೆಸರನ್ನು ಶಿಫಾರಸು ಮಾಡಲಾಗಿದೆಯಂತೆ. ಎರಡು ಹೆಸರು ಶಿಫಾರಸು ಮಾಡಿದರೂ ಮುನಿರತ್ನಗೆ ಟಿಕೇಟ್ ಕೊಡಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದಾರಂತೆ.
ಹೀಗಾಗಿ, ಘೋಷಣೆ ಆಗುವವರೆಗೂ ಅಭ್ಯರ್ಥಿ ಯಾರು ಎಂದು ನಿರ್ಧರಿಸಲು ಸಾದ್ಯವಿಲ್ಲ. ಒಂದು ವೇಳೆ ತುಳಸಿ ಮುನಿರಾಜು ಗೌಡಗೆ ಪರ್ಯಾಯ ವ್ಯವಸ್ಥೆ ಆಗದೇ ಇದ್ದಲ್ಲಿ ಸಮಸ್ಯೆ ಎದುರಾಗಬಹುದು. ಇದರಿಂದ, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಒಳ ಏಟು ಬೀಳುವ ಆತಂಕವೂ ಇದೆ. ಹೀಗಾಗಿ, ದೆಹಲಿಗೆ ಎರಡು ಹೆಸರು ಕಳುಹಿಸಿ ಸಮಸ್ಯೆ ಬಗೆಹರಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.