ಬಾಗಲಕೋಟೆ: ಬಿಜೆಪಿ ಮುಖಂಡನ ಮನೆಗೆ HD ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ ಉಚ್ಚಾಟನೆ ಮಾಡಲಾಗಿದೆ. ಈ ಸಂಬಂಧ ಮಾತನಾಡಿದ ಅವರು ಯಾವ ಕಾರಣಕ್ಕೆ ನನ್ನನ್ನು ಉಚ್ಚಾಟಿಸಿದ್ದಾರೆಂದು ಸ್ಪಷ್ಟಪಡಿಸಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 18 ವರ್ಷದಲ್ಲಿ ಪಕ್ಷದ ವಿರುದ್ಧ, ಪಕ್ಷಕ್ಕೆ ಮುಜುಗರ ಆಗುವ ಯಾವ ಕೆಲಸವನ್ನು ನಾನು ಮಾಡಿದ್ದೇನೆ ಎಂದು ತಿಳಿಸಲಿ. ಪಕ್ಷಕ್ಕಾಗಿ ಹೇಗೆ ಕೆಲಸ ಮಾಡಿದ್ದೇನೆಂಬುದು ಎಲ್ಲರಿಗೂ ಗೊತ್ತು. 18 ವರ್ಷ ಕೆಲಸ ಮಾಡಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ಟಿದ್ದೀರಿ. ಇದಕ್ಕೆ ಬಹಳ ಚಿರಋಣಿ ಆಗಿರುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ತಮಗಾಗಿರುವ ನೋವನ್ನು ಹಂಚಿಕೊಂಡಿದ್ದಾರೆ.
ನಿಮಗಾಗಿ ಕೆಲಸ ಮಾಡಿದವರಿಗೆ ಕೊಡುವ ಬಹುಮಾನ ಇದಾ?
ನಿಮಗಾಗಿ ಕೆಲಸ ಮಾಡಿದವರಿಗೆ ನೀವು ಕೊಡುವ ಬಹುಮಾನ ಇದೇನಾ ಎಂದು ಶಾಸಕ ವೀರಣ್ಣ ಚರಂತಿಮಠಗೆ ಪರೋಕ್ಷವಾಗಿ ಹೊಕ್ರಾಣಿ ಪ್ರಶ್ನೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಕ್ಕೆ ಹೀಗಾ? ಯಾಕೆ ನಿಮಗೆ ಭಯ ಕಾಡ್ತಿದೆಯಾ? ನನ್ನಿಂದ ಏನು ಪಕ್ಷ ವಿರೋಧಿ ಚಟುವಟಿಕೆ ಆಗಿದೆ? HDK ನಮ್ಮ ಮನೆಗೆ ಬಂದಿದ್ದು ಪಕ್ಷ ವಿರೋಧಿ ಚಟುವಟಿಕೆಯಾ? ಇದರಲ್ಲಿ ಏನು ಪಕ್ಷ ವಿರೋಧಿ ಚಟುವಟಿಕೆ ಇದೆ. ನಿಮ್ಮ ಮನೆಗೆ ಬೇರೆ ಪಕ್ಷದವರು ಬರಲ್ವಾ, ನೀವು ಹೋಗಲ್ವಾ? ಎಂದು ಶಾಸಕ ವೀರಣ್ಣ ಚರಂತಿಮಠಗೆ ಹೊಕ್ರಾಣಿ ಪ್ರಶ್ನಿಸಿದ್ದಾರೆ.
ಈ ರೀತಿಯ ರಾಜಕಾರಣ ಮಾಡುವುದು ಸರಿಯಲ್ಲ. ಇದಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರು ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ನಾನು ಇದಕ್ಕೆ ಉತ್ತರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತಃಸಿದ್ಧ ಎಂದು ಉಚ್ಚಾಟಿತ ಬಿಜೆಪಿ ಮುಖಂಡ ಸಂತೋಷ್ ಹೊಕ್ರಾಣಿ ಬಾಗಲಕೋಟೆ ನಗರ ಬಿಜೆಪಿ ಘಟಕದ ಅಧ್ಯಕ್ಷರಿಗೆ ಆಗ್ರಹಿಸಿದ್ದಾರೆ.