Budget 2021 | ರೇಲ್ವೆ ವಲಯಕ್ಕೆ ನಿರ್ಮಲಾ ಸೀತಾರಾಮನ್​ ಭರ್ಜರಿ ಕೊಡುಗೆ

ಡಿಸೆಂಬರ್ 2023 ರ ಹೊತ್ತಿಗೆ ಬ್ರಾಡ್​ಗೇಜ್ ಹಳಿಗಳ ಶೇಕಡಾ 100 ರಷ್ಟು ವಿದ್ಯುದ್ದೀಕರಣಗೊಳಿಸುವ ಕಾರ್ಯವನ್ನು ಪೂರ್ತಿಗೊಳಿಸುವ ನಿರ್ಧಾರ ಸರ್ಕಾರಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Budget 2021 | ರೇಲ್ವೆ ವಲಯಕ್ಕೆ ನಿರ್ಮಲಾ ಸೀತಾರಾಮನ್​ ಭರ್ಜರಿ ಕೊಡುಗೆ
ವಿಸ್ಟಾಡೋಮ್ ರೇಲ್ವೆ ಕೋಚ್

Updated on: Feb 01, 2021 | 8:49 PM

ರೇಲ್ವೆ ಮೂಲಸೌಕರ್ಯಗಳನ್ನು ಹೆಚ್ಚಿಸುವ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್​ನಲ್ಲಿ ಈ ವಲಯಕ್ಕೆ ಭರ್ಜರಿ ₹ 1.1 ಲಕ್ಷ ಕೋಟಿ ಅನುದಾನ ಒದಗಿಸಿದರು. ಈ ಅನುದಾನದಲ್ಲಿ ₹ 1.07 ಲಕ್ಷ ಕೋಟಿಯನ್ನು ಬಂಡವಾಳ ವೆಚ್ಚಕ್ಕಾಗಿ ಮೀಸಲಿರಿಸಲಾಗುವುದೆಂದು ಸಚಿವೆ ಹೇಳಿದರು. ಸದರಿ ಅನುದಾನವು ಕಳೆದ ಬಾರಿ ಬಿಡುಗಡೆ ಮಾಡಿದ ಅನುದಾನಕ್ಕಿಂತ ಸುಮಾರು ₹ 40,000 ಕೋಟಿಗಳಷ್ಟು ಜಾಸ್ತಿಯಿದೆ.

ಡಿಸೆಂಬರ್ 2023 ರ ಹೊತ್ತಿಗೆ ಬ್ರಾಡ್​ಗೇಜ್ ಹಳಿಗಳ ಶೇ 100 ರಷ್ಟು ವಿದ್ಯುದ್ದೀಕರಣಗೊಳಿಸುವ ಕಾರ್ಯವನ್ನು ಪೂರ್ತಿಗೊಳಿಸುವ ನಿರ್ಧಾರ ಸರ್ಕಾರಕ್ಕಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಯಾಣಿಕರ ಸುಖಕರ ಮತ್ತು ಸುರಕ್ಷಿತ ಯಾತ್ರೆಗೋಸ್ಕರ ಮನಮೋಹಕವಾಗಿ ವಿನ್ಯಾಸಗೊಳಿಸಿ ಪಾರದರ್ಶಕ ಗಾಜಿನ ಮೇಲ್ಛಾವಣಿ ಹೊಂದಿರುವ ಕೋಚ್​ಗಳನ್ನು ಟೂರಿಸ್ಟ್ ರೂಟಿನ ರೈಲುಗಳಿಗೆ ಜೋಡಿಸಲಾಗುವುದು ಎಂದು ಸಚಿವೆ ಹೇಳಿದರು.

ಭಾರತೀಯ ರೇಲ್ವೆಯು ಭವಿಷ್ಯದ ರೇಲ್ವೆ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ರೇಲ್ ಯೋಜನೆಯನ್ನು ಸಿದ್ಧಪಡಿಸಿದೆ, ಇದು ಮೇಕ್ ಇನ್ ಇಂಡಿಯಾ ತತ್ವಕ್ಕೆ ಒತ್ತು ನೀಡಲಿದೆ ಹಾಗೂ ಉದ್ಯಮಗಳ ಸರಕು ಸಾಗಾಣಿಕೆ ವೆಚ್ಚವನ್ನು ಕಡಿಮೆಗೊಳಿಸಲಿದೆ ಎಂದು ಅರ್ಥ ಸಚಿವರು ಹೇಳಿದರು.

ಅನುರಾಗ್ ಠಾಕೂರ್ ಜತೆ ನಿರ್ಮಲಾ ಸೀತಾರಾಮನ್

ಪೂರ್ವ ಮತ್ತು ಪಶ್ಚಿಮ ಸರಕು ಕಾರಿಡಾರ್​ಗಳನ್ನು (ಈಡಿಎಫ್​ಸಿ ಮತ್ತು ಡಬ್ಲ್ಯುಡಿಎಫ್​ಸಿ) ಜೂನ್ 2022ರ ಹೊತ್ತಿಗೆ ದೇಶಕ್ಕೆ ಅರ್ಪಿಸಲಾಗುವುದೆಂದು ನಿರ್ಮಲಾ ಸೀತಾರಾಮನ್ ಹೇಳಿದರು. 263 ಕಿಮೀ ಉದ್ದದ ಇಡಿಎಫ್​ಸಿಯ ಸೋನೆನಗರ್-ಗೊಮೊಹ್ ಸೆಕ್ಷನ್ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುವುದು ಮತ್ತು ಅದು ಪೂರ್ಣಗೊಂಡ ಕೂಡಲೇ 274.3 ಕಿಮೀ ಉದ್ದದ ಗೊಮೊಹ್-ದಂಕುನಿ ಸೆಕ್ಷನ್​ ಯೋಜನೆಯನ್ನೂ ಆರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಮುಂಬರುವ ವರ್ಷಗಳಲ್ಲಿ ಖರಗ್ಪುರ್​ನಿಂದ ವಿಜಯವಾಡವರೆಗೆ ಪೂರ್ವ ಕರಾವಳಿ ಕಾರಿಡಾರ್, ಪೂರ್ವ-ಪಶ್ಚಿಮ ಕಾರಿಡಾರ್​ನಲ್ಲಿ ಭುಸಾವಲ್-ಖರಗ್ಪುರ್-ದಂಕುನಿ ಮತ್ತು ಉತ್ತರ-ದಕ್ಷಿಣ ಕಾರಿಡಾರ್​ನಲ್ಲಿ ಇಟಾರ್ಸಿಯಿಂದ ವಿಜಯವಾಡ ಸೆಕ್ಷನವರೆಗಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ನಿರ್ಮಲಾ ಸೀತಾರಾಮನ್ ಹೇಳಿದರು.

Budget 2021 ವಿಶ್ಲೇಷಣೆ | ಪೆಟ್ರೋಲ್​, ಡೀಸೆಲ್ ಸೆಸ್ ಹೊರೆ ಗ್ರಾಹಕರ ಮೇಲೆ ಬೀಳುವುದಿಲ್ಲ: ಹೂಡಿಕೆ ತಜ್ಞ ರುದ್ರಮೂರ್ತಿ

Published On - 8:39 pm, Mon, 1 February 21