
ಬೆಂಗಳೂರು: ಆರ್ ಆರ್ ನಗರ ಉಪಕದನ ಕಣ ರಂಗೇರಿದೆ. ಮಿನಿ ಸಮರದಲ್ಲಿ ಗೆಲ್ಲಲು ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರಕ್ಕೆ ಈಗ ತಾರ ಮೆರುಗು ಬಂದಿದ್ದು, ಮೂರು ಪಕ್ಷಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ.
ರಾಜರಾಜೇಶ್ವರಿ ನಗರ ಉಪಕದನದ ಕಣದಲ್ಲಿ ಘಟಾನುಘಟಿ ನಾಯಕರು ಪ್ರಚಾರದಲ್ಲಿದ್ದು, ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಮೂರು ಪಕ್ಷಗಳ ನಡುವೆ ಭಾರಿ ಫೈಟ್ ನಡೆಯುತ್ತಿದ್ದು, ಎದುರಾಳಿಯನ್ನ ಮಣ್ಣು ಮುಕ್ಕಿಸೋಕೆ ಇನ್ನಿಲ್ಲದ ತಂತ್ರಗಳನ್ನ ಹೆಣೆಯಲಾಗ್ತಿದೆ. ಈ ಮಿನಿ ಸಮರಕ್ಕೆ ಸ್ಟಾರ್‌ಗಳ ಪ್ರಚಾರ ಮತ್ತಷ್ಟು ರಂಗು ನೀಡಿದೆ.
ರಾಜರಾಜೇಶ್ವರಿ ಮಿನಿ ಕುರುಕ್ಷೇತ್ರದಲ್ಲಿ ತಾರಾ ಮೆರುಗು
ಯೆಸ್, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ, ಸ್ಟಾರ್‌ಗಳ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಅದರಂತೆ ಬಹುಭಾಷಾ ನಟಿ ಖುಷ್ಬು ನಿನ್ನೆ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚಿಸಿದ್ರು. ಇದರ ಬೆನ್ನಲ್ಲೆೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿರತ್ನ ಪರ ರಾಜರಾಜೇಶ್ವರಿ ನಗರ ಉಪಚುನಾವಣೆ ಕಣಕ್ಕೆ ಧುಮುಕಲಿದ್ದಾರೆ. ಇಂದು ಅಥವಾ ನಾಳೆ ದರ್ಶನ್ ಮುನಿರತ್ನ ಪರ ಪ್ರಚಾರ ಮಾಡುವ ಸಾಧ್ಯತೆ ಇದೆ. ಈಗಾಗಲೇ ದರ್ಶನ್ ಪ್ರಚಾರಕ್ಕೆ ಬರುವ ಕುರಿತು ಮುನಿರತ್ನ ಸುಳಿವು ನೀಡಿದ್ದಾರೆ.
ಸ್ಟಾರ್ ಪ್ರಚಾರಕರಿಂದ ಭರ್ಜರಿ ಮತಬೇಟೆ!
ನಟ-ನಟಿಯರ ಪ್ರಚಾರದ ಜೊತೆಗೆ ಮೂರು ಪಕ್ಷದ ಅಭ್ಯರ್ಥಿಗಳ ಪರ ಸ್ಟಾರ್ ಪ್ರಚಾರಕರು ಕೂಡ ಪ್ರಚಾರ ಆರಂಭಿಸಿದ್ದಾರೆ. ಅದರಂತೆ ನಾಳೆ ಜೆಡಿಎಸ್ ಅಭ್ಯರ್ಥಿ ಪರ ನಿಖಿಲ್ ಕುಮಾರಸ್ವಾಮಿ 2ನೇ ಬಾರಿ ರಾಜರಾಜೇಶ್ವರಿ ನಗರದಲ್ಲಿ ಮತಯಾಚನೆ ಮುಂದುವರಿಸಲಿದ್ದಾರೆ. ಲಗ್ಗೆರೆ ವಾರ್ಡ್, ಕೊಟ್ಟಿಗೆಪಾಳ್ಯ ವಾರ್ಡ್, ಹೆಚ್ಎಂಟಿ ವಾರ್ಡ್ ನಲ್ಲಿ ರೋಡ್ ಶೋ ಮೂಲಕ ನಿಖಿಲ್ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಮತಬೇಟೆ ನೆಡೆಸಲಿದ್ದಾರೆ.
ಇತ್ತ ಕಾಂಗ್ರೆಸ್ ಅಭ್ಯರ್ಥಿ ಪರ ನಾಳೆ ಮತ್ತೆ ಪ್ರಚಾರಕ್ಕೆ ಆಗಮಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗ ಮತಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ. ಜೊತೆಗೆ ಡಿ.ಕೆ.ಶಿವಕುಮಾರ್ ಕ್ಷೇತ್ರದ ಎಲ್ಲಾ ಸಮುದಾಯದ ಮುಖಂಡರ ಮನೆಗೆ ಭೇಟಿ ನೀಡಿ ಕೈ ಅಭ್ಯರ್ಥಿ ಕುಸುಮಾಳನ್ನ ಗೆಲ್ಲಿಸುವಂತೆ ಕಾರ್ಯತಂತ್ರ ರೂಪಿಸಲಿದ್ದಾರೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ನಟ-ನಟಿಯರ ಚುನಾವಣಾ ಪ್ರಚಾರದಿಂದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಸ್ಟಾರ್ ಪ್ರಚಾರಕರಿಂದ ಮೂರು ಅಭ್ಯರ್ಥಿಗಳಲ್ಲಿ ಯಾರಿಗೆ ಸ್ಟಾರ್ ಕೈ ಹಿಡಿಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.