ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಒರಿಜಿನಲ್ ಪತಿವ್ರತೆಯರಿದ್ದಾರೆ. ಈಗ ಸೀರುಡುಕೆಯರಿಗೆ ಸಚಿವ ಸ್ಥಾನ ಕೊಟ್ಟರೆ ಹೇಗೆ? ಒರಿಜಿನಲ್ ಪಟ್ಟದ ಮಹಿಷಿಯರು ಎಲ್ಲಿ ಹೋಗಬೇಕು? ಎಂದು ಸಚಿವ ಸ್ಥಾನ ಸಿಗದಿದ್ದಕ್ಕೆ ಮೂಲ ಬಿಜೆಪಿ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಸರ್ಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ:
ರಾಜ್ಯ ಬಿಜೆಪಿ ಸರ್ಕಾರ ಯಾವಾಗ ಬೀಳುತ್ತೋ ಯಾವಾಗ ಏಳುತ್ತೋ ಗೊತ್ತಿಲ್ಲ. ಯಾವಾಗ ಎಲೆಕ್ಷನ್ ಬರುತ್ತೊ ಅಂತಾನೂ ಹೇಳೋಕಾಗಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ಪಾಪ ಅವರಷ್ಟು ನೋವು ಪಡುತ್ತಿರುವವರು ಯಾರೂ ಇಲ್ಲ. ಇಲ್ಲಿ ತೂತು ಮುಚ್ಚಿದರೆ ಅಲ್ಲಿ ಬೀಳುತ್ತೆ. ಹಾಗಾಗಿ ತೂತುಗಳನ್ನು ಮುಚ್ಚೋದು ಪ್ಯಾಚ್ ಹಾಕೋದೆ ಇವರ ಕೆಲಸ ಆಗಿದೆ. ಅದನ್ನು ಸಾಬರೇ ಹಾಕಬೇಕಾಗುತ್ತೋ ಏನೊ ನೋಡಬೇಕು ಎಂದು ವ್ಯಂಗ್ಯವಾಡಿದರು.
ದೆಹಲಿ ಫಲಿತಾಂಶ ಬಳಿಕ ಬಿಜೆಪಿ ಬಣ್ಣ ಬಯಲಾಗುತ್ತೆ:
ಎಲ್ಲ ಜಾತಿ ಜನಾಂಗದ ಜನ ಒಂದೇ ತಾಯಿ-ಮಕ್ಕಳ ರೀತಿ ಬದುಕಬೇಕು. ನಿನ್ನೆ ತಾಸುಗಟ್ಟಲೆ ಪ್ರಧಾನಿ ಮೋದಿ ಮಾತಾಡಿದ್ರು. ಎಲ್ಲೂ ಎನ್ಆರ್ಸಿ ಬಗ್ಗೆಯಾಗಲಿ, ಉದ್ಯೋಗ ಸೃಷ್ಟಿ ಬಗ್ಗೆಯಾಗಲಿ ಮಾತನಾಡಿಲ್ಲ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಎನ್ಆರ್ಸಿ, ಸಿಎಎ ಬಗ್ಗೆ ನಮಗೆ ಭಯವಿಲ್ಲ ನೋವಿದೆ. ದೆಹಲಿ ಚುನಾವಣೆ ಫಲಿತಾಂಶ ಬರುತ್ತದೆ. ಇವರ ಬಣ್ಣ ಬಯಲಾಗುತ್ತೆ. ಬಿಜೆಪಿ ಪರಿಸ್ಥಿತಿ ಬಸ್ ಸ್ಟ್ಯಾಂಡ್ ಮುಂದಿನ ಬಸವಣ್ಣನ ದೇವಸ್ಥಾನದ ತರಹ ಆಗಿದೆ ಎಂದರು.
ಕುರುಬ ಜಾತಿಯ ಸಿದ್ದು ಮಠಕ್ಕೆ ಧಾನ್ಯ ಕೊಟ್ಟರು, ಲಿಂಗಾಯತರಾಗಿದ್ದರೂ ನೀವು ಮಾಡಿದ್ದೇನು?
ಸಿದ್ದರಾಮಯ್ಯ ಕುರುಬ ಜಾತಿಯವರು. ಆದರೂ ಮಠಕ್ಕೆ ಧಾನ್ಯ ಕೊಟ್ಟರು. ನೀವು ಲಿಂಗಾಯತರಾಗಿದ್ದರೂ, ದವಸ ಧಾನ್ಯಗಳನ್ನು ಬಂದ್ ಮಾಡೋಕೆ ಹೊರಟಿದ್ದೀರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿ.ಎಂ.ಇಬ್ರಾಹಿಂ ಟಾಂಗ್ ನೀಡಿದರು.
ಮೋದಿಗೆ ದೇಶ ನೀವೆ ಆಳ್ವಿಕೆ ಮಾಡಿ, ದೇಶ ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದೆ. ಅದಕ್ಕೆ ಮೋದಿಯವರು ಉತ್ತರವೇ ನೀಡಲಿಲ್ಲ. ಅಡ್ವಾಣಿಯವರಿಗೆ ಉತ್ತರ ನೀಡೋದಿಲ್ಲ, ಇನ್ನು ನಮಗೆಲ್ಲಿಂದ ಉತ್ತರ ಕೊಡ್ತಾರೆ. ವಾಜಪೇಯಿ, ದೀನದಯಾಳ ಉಪಾಧ್ಯಾಯ ಅವರೆಲ್ಲ ಎಂತಹ ಮಹಾನ್ ವ್ಯಕ್ತಿಗಳು. ದೇಶದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಂತವರು. ಆದರೆ ಮೋದಿ ಅವರ ಆಡಳಿತ ವೈಖರಿಯೇ ಬೇರೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
Published On - 1:38 pm, Fri, 7 February 20