ಧಾರವಾಢ, ಅಕ್ಟೋಬರ್ 13: ತಮ್ಮ ರಾಜಕೀಯ ಲಾಭಕ್ಕಾಗಿ ಉಚಿತ (Guarantee) ಘೋಷಣೆಯನ್ನು ಮಾಡಿ ಇದೀಗ ಇಡೀ ರಾಜ್ಯವನ್ನೇ ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ (Congress) ಸಲ್ಲುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Union Minister Pralhad Joshi) ಹೇಳಿದ್ದಾರೆ.
ಕರ್ನಾಟಕ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಅಭಾವದ ಹಿನ್ನೆಲೆಯಲ್ಲಿ ಎಸ್ಕಾಂಗಳಿಗೆ ರಾಜ್ಯ ಸರ್ಕಾರ ಮಿತಿ ಹೇರಿ ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ ಜಾರಿ ಮಾಡಿರುವ ಕುರಿತ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸಚಿವರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಪುಟದಲ್ಲಿ ಪ್ರತಿಕ್ರಿಯಿಸಿರುವ ಪ್ರಲ್ಹಾದ ಜೋಶಿ, ಖಂಡಿತವಾಗಿಯೂ ನುಡಿದಂತೆ ನಡೆದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಸುಸ್ಥಿರವಾಗಿದ್ದ ಕರ್ನಾಟಕದ ಸ್ಥಿತಿಯನ್ನು ದುಃಸ್ಥಿತಿಗೆ ತಂದಿಟ್ಟ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ತಮ್ಮ ರಾಜಕೀಯ ಲಾಭಕ್ಕಾಗಿ ಉಚಿತ ಘೋಷಣೆಯನ್ನು ಮಾಡಿ ಇದೀಗ ಇಡೀ ರಾಜ್ಯವನ್ನೇ ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ.
ಬಿಜೆಪಿ ಸರಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿ ಮಕ್ಕಳನ್ನು ಬೆಳಕಿನೆಡೆಗೆ ತರುತ್ತಿದ್ದರೆ, ವಿದ್ಯುತ್ ಕಡಿತಗೊಳಿಸುವ ಮೂಲಕ ಮೇಣದ ಬತ್ತಿ ಬೆಳಕಿನಡಿ ಕಲಿಯುವಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಬಿಜೆಪಿ ಸರಕಾರ ದಿನದ 24 ಗಂಟೆಯೂ ವಿದ್ಯುತ್ ನೀಡುತ್ತಿದ್ದರೆ, ದಿನದ 8 ತಾಸು ವಿದ್ಯುತ್ ಕಡಿತಗೊಳಿಸಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಬಿಜೆಪಿ ಸರಕಾರವು ರೈತರ ಬಳಕೆಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡುತ್ತಿದ್ದರೆ, ರೈತರ ಬಳಕೆಗೂ ವಿದ್ಯುತ್ ಇಲ್ಲದಂತೆ ಮಾಡಿದ ಕೀರ್ತಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ವ್ಯಂಗ್ಯ ಮಾಡಿ ಟೀಕಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಅವರ ಹೆಸರು ಉಲ್ಲೇಖಿಸಿ ನೇರವಾಗಿ ಕಿಡಿ ಕಾರಿರುವ ಪ್ರಲ್ಹಾದ ಜೋಶಿ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದ ಕರುನಾಡನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ನಾಶ ಮಾಡುವ ಸಂಕಲ್ಪ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ