ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ದೇವದಾಸಿಯರಿಗೆ ಬದುಕು ಕಟ್ಟಿಕೊಟ್ಟಿರುವ ಮಾಜಿ ದೇವದಾಸಿಯರ ಸ್ವಾವಲಂಬನಾ ಕೇಂದ್ರಕ್ಕೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ!
ಹೌದು, ಸಿಹಿ ತಿನಿಸು ಚಿಕ್ಕಿ ತಯಾರಿಕಾ ಘಟಕದಿಂದ ಬದುಕು ರೂಪಿಸಿಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವ ಮೂಲಕ ಎಲ್ಲರಿಗೂ ಮಾದರಿ ಆಗಿರುವುದನ್ನು ಗುರುತಿಸಿರುವ ರಾಜ್ಯ ಸರ್ಕಾರ ಮಾಜಿ ದೇವದಾಸಿಯರ ಸ್ವಾವಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವುದರ ಮೂಲಕ ಅವರ ಕಾರ್ಯಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದೆ. ಈ ಮೂಲಕ, ಬಳ್ಳಾರಿ ಜಿಲ್ಲಾಡಳಿತವು ರಾಜ್ಯದಲ್ಲೇ ಪ್ರಥಮ ಬಾರಿಗೆ ಕೈ ಹಾಕಿದ ವಿಶಿಷ್ಠ ಪ್ರಯತ್ನಕ್ಕೆ ಯಶಸ್ಸು ದೊರೆತಂತಾಗಿದೆ.
ಈ ಮಾಜಿ ದೇವದಾಸಿಯರು ತಯಾರಿಸಿದ ಶೇಂಗಾ ಚಿಕ್ಕಿಗಳನ್ನು ಗರ್ಭಿಣಿಯರು-ಬಾಣಂತಿಯರು ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ವಿತರಿಸುವುದಕ್ಕಾಗಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಶೇಂಗಾ ಚಿಕ್ಕಿಗಳಿಗೆ ಸಂಬಂಧಿಸಿದ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಜಿ ದೇವದಾಸಿ ಸ್ವಾಲಂಬನಾ ಕೇಂದ್ರಕ್ಕೆ ನೀಡುತ್ತಿದೆ.
ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪೌಷ್ಠಿಕ ಆಹಾರ ಮೆನುದಲ್ಲಿ ಶೇಂಗಾ ಚಿಕ್ಕಿಯೂ ಒಂದಾಗಿದೆ. ಹೀಗಾಗಿಯೇ, ಇವರು ತಯಾರಿಸುವ ಚಿಕ್ಕಿಗಳನ್ನು ಕೂಡ್ಲಿಗಿ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಂದ ಮಾಸಿಕ 7 ಲಕ್ಷ ಚಿಕ್ಕಿ ಬೇಡಿಕೆಯಿರುವುದರಿಂದ ಪ್ರಾರಂಭಿಕ ಹಂತದಲ್ಲಿ ನಿತ್ಯ 4 ಸಾವಿರ ಚಿಕ್ಕಿಗಳನ್ನು ತಯಾರಿಸುವಲ್ಲಿ ಮಾಜಿ ದೇವದಾಸಿಯರು ನಿರತರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಉದ್ಯೋಗಿನಿ ಯೋಜನೆಯಡಿ ಇನ್ನೂ ಹೆಚ್ಚಿನ ಸಾಲಸೌಲಭ್ಯ ಒದಗಿಸಿ ಘಟಕಕ್ಕೆ ಚಿಕ್ಕಿ ತಯಾರಿಸುವ ಯಂತ್ರಗಳನ್ನು ಒದಗಿಸುವ ಉದ್ದೇಶವಿದೆ. ಅದರ ಜೊತೆಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಜಿ ದೇವದಾಸಿಯರಿಗೆ ತರಬೇತಿ ನೀಡಿ, ಚಿಕ್ಕಿ ಘಟಕದಲ್ಲಿ ಕೆಲಸ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಹೇಳಿದ್ದಾರೆ.
ಮಾಜಿ ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂಬುದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಕನಸಾಗಿದೆ. ಅವರ ನೇತೃತ್ವದಲ್ಲಿ ಕೂಡ್ಲಿಗಿಯಲ್ಲಿ ಚಿಕ್ಕಿ ಘಟಕ ಆರಂಭವಾಗಿದ್ದು, ಈ ಘಟಕ ನಡೆಸುತ್ತಿರುವ ಮಾಜಿ ದೇವದಾಸಿ ಸ್ವಾವಲಂಬನಾ ಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.
-ಬಸವರಾಜ ಹರನಹಳ್ಳಿ
Published On - 9:33 pm, Sat, 31 October 20